fbpx

ಜಲನಿರ್ಮಲ ಯೋಜನೆ ಅನುಷ್ಠಾನ ತ್ವರಿತಗೊಳಿಸಲು ಜಿ.ಪಂ. ಅಧ್ಯಕ್ಷರ ತಾಕೀತು

  ಕೊಪ್ಪಳ ಜಿಲ್ಲೆಯಲ್ಲಿ ಜಲನಿರ್ಮಲ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದು, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಜಲನಿರ್ಮಲ ಯೋಜನೆ ಯೋಜನಾಧಿಕಾರಿಗಳಿಗೆ ತಾಕೀತು ಮಾಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ಜಲನಿರ್ಮಲ ಯೋಜನೆಯಡಿ ಈ ಹಿಂದಿನಿಂದಲೂ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಈ ವರ್ಷವೂ ಯೋಜನೆಯನ್ನು ಮುಂದುವರೆಸಲಾಗಿದೆ.  ಆದರೆ ಅನೇಕ ಕಾಮಗಾರಿಗಳು ತ್ವರಿತವಾಗಿ ನಡೆಯದೆ, ಅಧಿಕಾರಿಗಳು, ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ.  ಈ ಯೋಜನೆಯಡಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ ಎಂದು ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಇದಕ್ಕೆ ಧ್ವನಿಗೂಡಿಸಿದ ಜಿ.ಪಂ. ಸದಸ್ಯ ಗಂಗಣ್ಣ ಸಮಗಂಡಿ ಅವರು, ಕನಕಗಿರಿ ಭಾಗದಲ್ಲಿ ಜಲನಿರ್ಮಲ ಯೋಜನೆಯಡಿ ಕಾಮಗಾರಿಯನ್ನು ಕೋಟಿಗಟ್ಟಲೆ ಹಣ ವೆಚ್ಚಮಾಡಿ ಪೂರ್ಣಗೊಳಿಸಿದ್ದು, ಸುಮಾರು ೩ ವರ್ಷಗಳಿಂದಲೂ ಹನಿ ನೀರು ಪೂರೈಕೆಯಾಗುತ್ತಿಲ್ಲ.  ಇದಕ್ಕೆ ಕಾರಣರಾದ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎಂದರು.  ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯಕುಮಾರ್ ಮೇಲಿನಮನಿ ಅವರು ಮಾತನಾಡಿ, ಜಲನಿರ್ಮಲ ಯೋಜನೆಯನ್ನು ರೂಪಿಸುವಾಗ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಸದಸ್ಯರ ಗಮನಕ್ಕೆ ತರದೆ, ತಮ್ಮಿಷ್ಟ ಬಂದಂತೆ ತಯಾರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಜಿ.ಪಂ. ಸದಸ್ಯರುಗಳಾದ ಈರಪ್ಪ ಕುಡಗುಂಟಿ, ವಿಜಯಲಕ್ಷ್ಮಿ ರಾಮಕೃಷ್ಣ, ಗಂಗಣ್ಣ ಸಮಗಂಡಿ ಮುಂತಾದವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  ಜಲನಿರ್ಮಲ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.  ಯೋಜನೆ ರೂಪಿಸುವಾಗ ಜಿ.ಪಂ. ಸದಸ್ಯರುಗಳ ಗಮನಕ್ಕೆ ತರಬೇಕು.   ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಜಲನಿರ್ಮಲ ಯೋಜನಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶಿಕ್ಷಕರ ನಿಯೋಜನೆ ರದ್ದುಪಡಿಸಿ : ಜಿಲ್ಲೆಯ ಅನೇಕ ಶಾಲೆಗಳು ಶಿಕ್ಷಕರ ಕೊರತೆಯನ್ನು ಅನುಭವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗಿದೆ.  ಈ ಸಮಸ್ಯೆಯನ್ನು ಪರಿಹರಿಸಲು ಈ ಹಿಂದೆ ಅನೇಕ ಸಭೆಗಳಲ್ಲಿ ಗಮನಕ್ಕೆ ತರಲಾಗಿದೆ.  ಅಲ್ಲದೆ ಮಾಧ್ಯಮಗಳು ಸಹ ಅನೇಕ ಬಾರಿ ಈ ಕುರಿತು ವರದಿಯನ್ನು ಮಾಡಿದ್ದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.   ಎಂದು ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ ಸಭೆಯಲ್ಲಿ ಪ್ರಸ್ತಾಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು, ಯಾವುದೇ ಇಲಾಖೆಗೆ ಶಿಕ್ಷಕರ ನಿಯೋಜನೆ ಆಗಿದ್ದಲ್ಲಿ, ಕೂಡಲೆ ಅಂತಹ ನಿಯೋಜನೆಯನ್ನು ರದ್ದುಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಕೂಡಲೆ ಅವರನ್ನು ಶಿಕ್ಷಣ ಇಲಾಖೆಯ ಕರ್ತವ್ಯಕ್ಕೆ ಹಿಂದಕ್ಕೆ ಪಡೆಯಲು ಆದೇಶ ಹೊರಡಿಸಬೇಕು. ತಪ್ಪಿದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನೇ ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಬ್‌ಮಿಷನ್ ಕಾಮಗಾರಿ ಪೂರ್ಣಗೊಳಿಸಿ : ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ತ್ವರಿತಗೊಳಿಸಬೇಕು.  ಈಗಾಗಲೆ ಪೂರ್ಣಗೊಂಡಿರುವ ಯೋಜನೆಗಳಲ್ಲಿ ಯೋಜನೆಯಂತೆ ಎಲ್ಲ ಗ್ರಾಮಗಳಿಗೆ ನೀರು ಪೂರೈಕೆ ಆಗಬೇಕು.  ಇಲ್ಲದಿದ್ದಲ್ಲಿ, ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ಜಿ.ಪಂ. ಅಧ್ಯಕ್ಷರು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.  ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ತೋಟದ ಅವರು ಮಾತನಾಡಿ, ಬಹುಗ್ರಾಮ ಯೋಜನೆಯಡಿ ಈಗಾಗಲೆ ಮಂಗಳೂರು ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ಸರಬರಾಜು ಪ್ರಾರಂಭವಾಗಿದ್ದರೂ, ಅನೇಕ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ.  ಇಂತಹ ಗ್ರಾಮದ ಜನರು ಪ್ರತಿಭಟನೆ ನಡೆಸುತ್ತಿದ್ದು, ಫೆಬ್ರವರಿ ಅಂತ್ಯದೊಳಗೆ ಈ ಸಮಸ್ಯೆಗೆ ಪರಿಹಾರ ದೊರಕದಿದ್ದಲ್ಲಿ, ಸಂಬಂಧಪಟ್ಟ ಗ್ರಾಮಸ್ಥರೊಂದಿಗೆ ಜಿಲ್ಲಾ ಪಂಚಾಯತಿ ಎದುರುಗಡೆ ಧರಣಿ ನಡೆಸುವುದಾಗಿ ಹೇಳಿದರು.  ಜಿ.ಪಂ. ಅಧ್ಯಕ್ಷರು ಇದಕ್ಕೆ ಪ್ರತಿಕ್ರಿಯಿಸಿ, ಕೂಡಲೆ ಸಮಸ್ಯೆಯ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪೂರ್ಣ ಅಂಗನವಾಡಿ ಕಟ್ಟಡಗಳ ಮಾಹಿತಿ ನೀಡಿ : ಜಿಲ್ಲೆಯಲ್ಲಿ ಈಗಾಗಲೆ ಒಟ್ಟು ೧೦೯೩ ಅಂಗನವಾಡಿಗಳು ಸ್ವಂತ ಕಟ್ಟಡವನ್ನು ಹೊಂದಿವೆ.  ಕಳೆದೆರಡು ವರ್ಷಗಳಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಪ್ರಾರಂಭಿಸಿ, ಪೂರ್ಣಗೊಳಿಸದೇ, ಅಪೂರ್ಣವಾಗಿ ಉಳಿದಿದ್ದು, ಈ ರೀತಿ ಕಟ್ಟಡ ಕಾಮಗಾರಿ ಅಪೂರ್ಣವಾಗಲು ಕಾರಣವೇನು ಎಂಬುದರ ಬಗ್ಗೆ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ.  ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಪೂರ್ಣವಾಗಿರುವ ಅಂಗವನಾಡಿ ಕಟ್ಟಡಗಳ ಸಂಪೂರ್ಣ ವಿವರ ಹಾಗೂ ಇದಕ್ಕೆ ಕಾರಣಗಳ ಬಗೆಗಿನ ಸಮಗ್ರ ವಿವರವನ್ನು ವಾರದೊಳಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಸೇರಿದಂತೆ ಜಿಲ್ಲಾ ಪಂಚಾಯತಿಯ ವಿವಿಧ ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!