ಜಾತ್ರೆಯ ನಿಮಿತ್ಯ ಎರಡು ಕವನಗಳು

ನನ್ನ ನೆಲದ ಜಾತ್ರೆ
ಮುಂಗಾರ ಮಳೆಯಿಲ್ಲದ, ಹಿಂಗಾರ ಕೊಯ್ಲಿಲ್ಲದ
ಅಭದ್ರತೆಯ, ತುಂಗಭದ್ರೆಯ ನೆಲದ
’ಕಪ್ಪುಸೂರ್ಯ’ನ ಧಗೆಗೆ, ಸುಡುವ ನೆತ್ತಿಯನ್ನೊಡ್ಡಿ
ಏನೆಲ್ಲ ಬಿತ್ತಿ ಬೆಳೆದು ಕೈಸುಟ್ಟುಕೊಂಡು
ಕಟ್ಟಿಕೊಂಡ ಬುತ್ತಿಯೂ ಸಾಲದಾಗಿ,
ಬರದ ಭಾರ(ತ)ವನ್ನೇ ಹೊತ್ತಿರುವ ನನ್ನೂರು
ಒಂದರೆ ಕ್ಷಣ ಇದೆಲ್ಲ ಮರೆತು

ಮಿನುಗುತ್ತಿರುತ್ತದೆ ಹುಣ್ಣಿಮೆಯ ಚಂದಿರನಂತೆ
ಇದೊಂದು ದಿನ
ಎಲ್ಲ ಕಾರ್ಮೋಡಗಳ ಚಿಂತೆ ಬಿಟ್ಟು.
ನನ್ನೀ ನೆಲದ ಜಾತ್ರೆ
ತನ್ನದೆಷ್ಟೋ ಯಾತ್ರೆಗಳ ದಂಡಯಾತ್ರೆಯ ಕಂಡು
ಮುನ್ನುಗ್ಗುತ್ತಿದೆ ಸೋಲು ಕಾಣದ ಕುದುರೆಯನೇರಿ
ನ ಭೂತೋ ನ ಭವಿಷ್ಯತಿಃ
ಧೂಳು ಕೆಂಧೂಳಾವೃತ್ತ ಆಕಾಶ
ಸೂರ್ಯನೂ ಮುಖಕ್ಕೆ ಕರ್ಚೀಫು ಸುತ್ತಿಕೊಳ್ಳುತ್ತಾನೆ,
ಸದ್ದು ಗದ್ದಲದ ನೆಲ ಅದುರಿದಂತಾಗಿ
ಭೂತಾಯಿ ಒಂದರೆ ಕ್ಷಣ ದಂಗಾಗುತ್ತಾಳೆ
ನನ್ನೂರ ಜಾತ್ರೆಯ ದಿನ.
ಮುಗಿಲು ಮುಟ್ಟಿದ ಜಯಘೋಷ
ಭಕ್ತಿ ಭಾವಗಳ ಸಮ್ಮಿಲನ
ನಾದ ನಿನಾದಗಳ ಕಲರವ
ಕಿವಿಗಡಚಿಕ್ಕುವ ಗದ್ದಲದ ಗೂಡು
ಹೆಜ್ಜೆ ಗೆಜ್ಜೆಗಳ ನಂದಿಕೋಲಿನ ತಾಳ
ಉತ್ಸಾಹದ ಚಿಲುಮೆ, ಬಣ್ಣ ಬಣ್ಣದ ನೋಟ
ಚಿತ್ತ ಚಿತ್ತಾರಗಳ ಬೆಳಕು, ಬಾನೆತ್ತರಕ್ಕಾರುವ ಚುಕ್ಕಿಗಳು
ಬಿಡುವಿಲ್ಲದ ರಿಕ್ಷಾ, ಬಂಡಿ, ಟಾಂಗಾ, ಲಾರಿಗಳು
ವೈಭವದ ಚೆಲುವು, ಜನಜಂಗುಳಿಯ ಬಲವು
ಅದೆಷ್ಟು ಹಾಡಿದರೂ ಪದಗಳಿಗೆ
ನಿಲುಕಲಾರದ ಮಣ್ಣಿನ ಮಹಿಮೆ.
ಬೇಕರಿಯ ಸಿಹಿ ತಿನಿಸುಗಳ ದಾಟಿ
ಮನೆಯ ಸೇರುವ ಮಾದಲಿ,
ಗೋಭಿ, ಕಚೋರಿ, ಸಮೋಸಾಗಳ ಮೀರಿ
ನಿಲ್ಲುವ ನನ್ನೂರ ಭಟ್ಟಿಯ ಮಂಡಾಳು
ಮತ್ತೆ ಮೇಲೆ ಮಿರ್ಚಿಗಳ ಆರ್ಭಟ.
ದೇಸಿ ಸೊಗಡಿನ ಸೊಗಸು ಸಾರುವ
ಮಣ್ಣ ಕಣಕಣದ ಗುಣ,
ಸಾಗರದಾಚೆಗೂ ಸಾಗಿ,
ಮನೆ ಮನಗಳಿಗೆ ಉಣಬಡಿಸುವ
ಹುಗ್ಗಿಯೂಟದ ಸುಗ್ಗಿಯ ಹಬ್ಬ
ನನ್ನೂರ ಜಾತ್ರೆ, ಈ ನೆಲದ ಜಾತ್ರೆ..
ದಿನವೂ ಎಳೆದೆಳೆದು ಬದುಕಿನ ತೇರು ಸಾಕಾಗಿ
ಈ ದಿನ ಎಳೆಯುವ ಅಜ್ಜನ ತೇರು
ಶಕ್ತಿ ಭಕ್ತಿ ಮುಕ್ತಿಗಳ ಪ್ರತೀಕವಾಗುತ್ತದೆ.
ಮನಸ್ಸುಗಳ ತಟ್ಟಿ ಬಡಿದೆಬ್ಬಿಸುವ ಭಕ್ತಿ ಭಾವದ ಸಿಂಚನ,
ಸಂಭ್ರಮದ ಜೋಕಾಲಿಯಲ್ಲಿ ನನ್ನೂರು ಜೀಕುತ್ತಿರುತ್ತದೆ.
ಈ ದಿನ ಸುತ್ತಲೂ ಚಾಚಿರುವ ಬಂಡೆಗಲ್ಲುಗಳೂ
ಎದೆ ಸೆಟೆಸಿ ನಿಲ್ಲುತ್ತವೆ ಆಕಾಶದೆತ್ತರಕ್ಕೆ
ನನ್ನೂರ ಗರಿಮೆ ಸಾರಿ ಹೇಳಲು
ಈ ದಿನ
ನನ್ನ ನೆಲದ ದಿನವೆಂದು.
     – ಮಹೇಶ ಬಳ್ಳಾರಿ
—-
ಅಭಿನವಗೆ ಶರಣು


ಓ ……. ತಂದೆ ಗವಿಸಿದ್ದೇಶ್ವರ 
ಓ …….. ಗುರುವೇ ಜಗದೀಶ್ವರ
ನಿನ್ನ ಮಹಿಮೆ ಅಪಾರ 
ಶರಣು ನಿಮಗೆ ಶರಣು ||೧||
ಸಾವಿರಾರು ವರುಷ 
ಇತಿಹಾಸ ಪಡೆದ 
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಿಮೆಗೆ 
ಶರಣು ನಿಮಗೆ ಶರಣು ||೨||
ಪುಣ್ಯ ಕ್ಷೇತ್ರ ಗವಿಮಠದಲ್ಲಿ 
ತ್ರೀವಿಧ ದಾಸೋಹ ಗೈಯುತ್ತಿರುವ 
ಅಭಿನವಶ್ರೀ ಗವಿಸಿದ್ದಜ್ಜನಿಗೆ 
ಶರಣು ನಿಮಗೆ ಶರಣು ||೩||
ಅನಾರೋಗ್ಯದಿಂದ ಬಳಲುವವರಿಗೆ 
ರೋಗ ಮುಕ್ತಿಗೊಳಿಸಿ 
ಸದಾ ಚೈತನ್ಯ ನೀಡಿದ ಪುಣ್ಯ ಪುರುಷ ಅಭಿನವ ಅಜ್ಜನಿಗೆ 
ಶರಣು ನಿಮಗೆ ಶರಣು ||೪||
ಮಕ್ಕಳಿಲ್ಲದ ಸುಮಂಗಲಿಯರಿಗೆ 
ಸಂತಾನ ಕರುಣಿಸಿ ಕಾಪಾಡಿ 
ಸಮಾಜದ ಕಲ್ಯಾಣಕ್ಕೆ ನಿತ್ಯ ಶ್ರಮಿಸುವ ಅಜ್ಜನಿಗೆ 
ಶರಣು ನಿಮಗೆ ಶರಣು ||೫||
ಸಾಹಿತ್ಯ ಸಂಸ್ಕೃತಿ ಸಂಗೀತ 
ಆರಾಧಿಸಿ ಉಳಿಸುವವರೆ 
ಭಾವೈಕ್ಯತೆ ಸಾಮರಸ್ಯತೆಗೆ ಹೆಸರು ಪಡೆದ ಅಜ್ಜನಿಗೆ 
ಕೋಟಿ ಶರಣು ನಿಮಗೆ ಶರಣು ||೬||
ಶಿವನಗೌಡ. ವಿ. ಪಾಟೀಲ, (ಹಲಗೇರಿ)
 ೯೮೪೫೭೭೭೧೯೪

Leave a Reply