fbpx

ಮತದಾರರ ಜಾಗೃತಿ : ಸ್ವೀಪ್‌ನೊಂದಿಗೆ ಕೈ ಜೋಡಿಸಿದ ಸಾರಿಗೆ ಸಂಸ್ಥೆ ಸಿಬ್ಬಂದಿ

 ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾರರು ಮತಗಟ್ಟೆಯತ್ತ ತೆರಳಿ, ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಲು ಇದೀಗ ಕೊಪ್ಪಳದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಜಿಲ್ಲಾ ಸ್ವೀಪ್ ಸಮಿತಿಯೊಂದಿಗೆ ಕೈ ಜೋಡಿಸಿದ್ದಾರೆ.
  ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರ ಶರ್ಟ್‌ಗೆ ಮತದಾರರ ಜಾಗೃತಿ ಸಂದೇಶದ ಬ್ಯಾಡ್ಜ್ ಅಳವಡಿಸುವ ಮೂಲಕ ಬುಧವಾರ ಈ ನೂತನ ಅಭಿಯಾನಕ್ಕೆ ಚಾಲನೆ ನೀಡಿದರು.
  ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತದಾನ ದಾಖಲಾಗುವಂತೆ ಮಾಡಲು ಜಿಲ್ಲಾ ಸ್ವೀಪ್ ಸಮಿತಿ, ಮ್ಯಾರಥಾನ್ ಓಟ, ಕ್ಯಾಂಡಲ್ ಲೈಟ್, ಜಾಗೃತಿ ಜಾಥಾ, ಆಟೋ ಹಾಗೂ ಬಸ್‌ಗಳಿಗೆ ಸ್ಟಿಕ್ಕರ‍್ಸ್ ಅಂಟಿಸುವುದು, ಬೀದಿನಾಟಕ ಮುಂತಾದ  ತರಹೇವಾರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ.  ಈ ನಿಟ್ಟಿನಲ್ಲಿ ಇದೀಗ ಮತ್ತೊಂದು ವೈವಿಧ್ಯಮಯ ಕಾರ್ಯಕ್ರಮಕ್ಕೆ ಸ್ವೀಪ್ ಸಮಿತಿ ಮುಂದಾಗಿದೆ.  ದಿನನಿತ್ಯ ಸಾರಿಗೆ ಸಂಸ್ಥೆಯ ನೂರಾರು ಬಸ್‌ಗಳಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರ ಮೇಲೆ ತನ್ನ ಗಮನವನ್ನು ಹರಿಸಿದ್ದು, ಮತದಾನದ ಬಗ್ಗೆ ಅರಿವು ಮೂಡಿಸಲು ಬಸ್ ನಿರ್ವಾಹಕರು ಮತ್ತು ಚಾಲಕರ ನೆರವನ್ನು ಪಡೆದುಕೊಳ್ಳಲು ಮುಂದಾಗಿದ್ದು, ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಇನ್ನು ಮುಂದೆ ಕೊಪ್ಪಳದ ಎಲ್ಲ ಬಸ್ ನಿರ್ವಾಹಕರು ಮತ್ತು ಚಾಲಕರ ಶರ್ಟ್‌ಗಳ ಮೇಲೆ ಮತದಾನ ಜಾಗೃತಿಯ ಬ್ಯಾಡ್ಜ್ ಕಾಣಸಿಗಲಿದೆ.  ಈ ಬ್ಯಾಡ್ಜ್ ಮೇಲೆ ’ದಿನಾಂಕ: ೧೭-೦೪-೨೦೧೪ ರಂದು ನಾನು ಮತ ಹಾಕುತ್ತೇನೆ. ನೀವೂ ಮತ ಹಾಕಿ’ ಎಂಬ ಸಂದೇಶವಿದೆ.  ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಸುಲಭವಾಗಿ ಈ ಸಂದೇಶ ಕಾಣಲಿದ್ದು, ಕಡ್ಡಾಯ ಮತದಾನಕ್ಕೆ ಮತದಾರರನ್ನು ಪ್ರೇರೇಪಿಸುವ ಸುಲಭ ಮಾರ್ಗ ಇದಾಗಿದೆ.  ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪಾರ್ಥಸಾರಥಿ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮತದಾನ ಜಾಗೃತಿಯು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಎಲ್ಲ ಸಿಬ್ಬಂದಿಗಳು ಮತದಾರರ ಜಾಗೃತಿಗೆ ಸಹಕರಿಸುವಂತೆ ಸೂಚನೆ ನೀಡಿದರು.
  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ವಾರ್ತಾಧಿಕಾರಿ ತುಕಾರಾಂರಾವ್, ಸಾರಿಗೆ ಸಂಸ್ಥೆಯ ಜಿಲ್ಲಾ ಸಂಚಾರ ನಿಯಂತ್ರಕರು, ಬಸ್ ನಿಲ್ದಾಣದ ವ್ಯವಸ್ಥಾಪಕರು ಸೇರಿದಂತೆ ಸಾರಿಗೆ ಸಂಸ್ಥೆಯ ಅನೇಕ ಬಸ್ ನಿರ್ವಾಹಕರು, ಬಸ್ ಚಾಲಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!