fbpx

ಕಿವಿ ಮತ್ತು ಕಣ್ಣಿನ ತಜ್ಞರು ತುರ್ತಾಗಿ ಬೇಕಾಗಿದ್ದಾರೆ

ಬಿ. ಶ್ರೀಪಾದ್ ಭಟ್
ಪ್ರಸೂನ್ ಜೋಶಿ ಎನ್ನುವ ಸೂಕ್ಷ್ಮ ಸಂವೇದನೆಯ ಕವಿ (ನಿಜಕ್ಕೂ ಈತನೇ ಬರೆದನಾ ಎಂದು ಆಘಾತವಾಗುತ್ತದೆ) ಬಿಜೆಪಿ ಪಕ್ಷದ ಪ್ರಚಾರಕ್ಕಾಗಿ ಸೌಗಂಧ್ ( ಪ್ರತಿಜ್ಞೆ) ಎನ್ನುವ ಕವನವನ್ನು ಬರೆದುಕೊಟ್ಟಿದ್ದಾನೆ. ಇದರ ಕೆಲವು ಸಾಲುಗಳು ಹೀಗಿವೆ
ಈ ಮಣ್ಣಿನೊಂದಿಗೆ ನನ್ನದೊಂದು ಪ್ರತಿಜ್ಞೆ ಇದೆ
ನಾನು ದೇಶವನ್ನು ನಾಶವಾಗಲು ಬಿಡುವುದಿಲ್ಲ
ನಾನು ದೇಶವನ್ನು ನಾಶವಾಗಲು ಬಿಡುವುದಿಲ್ಲ
ನಾನು ದೇಶವನ್ನು ಮಂಡಿಯೂರಲು ಬಿಡುವುದಿಲ್ಲ
ನಾನು ಭಾರತಮಾತೆಗೆ ವಚನ ನೀಡುತ್ತೇನೆ
‘ನಿನ್ನ ಶಿರವನ್ನು ತಗ್ಗಿಸಲು ಬಿಡುವುದಿಲ್ಲ’
ಈ ಬಾರಿ ಏನೇ ಆಗಲಿ ದೇಶವನ್ನು ನಾಶವಾಗಲು ಬಿಡುವುದಿಲ್ಲ.
ಇದರಲ್ಲಿನ ಅನೇಕ ಸಾಲುಗಳನ್ನು ನರೇಂದ್ರ ಮೋದಿಯ ಧ್ವನಿಯಲ್ಲಿ ಹೇಳಿಸಲಾಗಿದೆ. ಇದು ದೇಶದ ಎಲ್ಲ ಎಫ್‌ಎಮ್ ಚಾನಲ್‌ಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದೆ. ಸೂಕ್ಷ್ಮ್ಮವಾಗಿ ಗಮನಿಸಿದರೆ ಚುನಾವಣಾ ಪ್ರಚಾರಕ್ಕಾಗಿ ದೇಶವನ್ನು ಈ ರೀತಿ ರಾಷ್ಟ್ರೀಯತೆಯೊಂದಿಗೆ ಸಮೀಕರಿಸಿ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ.
ಇಲ್ಲಿ ಆವಶ್ಯಕತೆ ಇಲ್ಲದಿದ್ದರೂ ‘ದೇಶವನ್ನು ನಾಶವಾಗಲು ಬಿಡುವುದಿಲ್ಲ’, ‘ತಲೆ ತಗ್ಗಿಸಲು ಬಿಡುವುದಿಲ್ಲ’, ’ನನ್ನ ಪ್ರತಿಜ್ಞೆ’ ಎನ್ನುವಂತಹ ಪ್ರಚೋದನಕಾರಿ ಸ್ಲೋಗನ್‌ಗಳನ್ನು ಪ್ರಚಾರದ ಹೆಸರಿನಲ್ಲಿ ಬಳಕೆಗೆ ತಂದಿರುವ ಅಂಶ ತಿಳಿಯುತ್ತದೆ. ಬೇರೆ ಸಂದರ್ಭದಲ್ಲಿ ಯಾವುದೋ ಒಂದು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಲು ತಮ್ಮ ಪ್ರಜೆಗಳನ್ನು ಹುರಿದುಂಬಿಸಲು ಈ ರೀತಿಯಾಗಿ ಕವನಗಳು ಬಳಕೆಯಾಗಲ್ಪಡುತ್ತವೆ.
ಆದರೆ ಇಂಡಿಯಾಗೆ ಸ್ವಾತಂತ್ರ ಬಂದು 67 ವರ್ಷಗಳಾದವು. ಪ್ರಜಾಪ್ರಭುತ್ವ ನೆಲೆಗೊಂಡು 67 ವರ್ಷಗಳಾದವು. ಸದ್ಯಕ್ಕಂತೂ ಯಾವುದೇ ಯುದ್ಧದ ಭೀತಿಯಿಲ್ಲ. ಆದರೂ ಯಾಕಿಂತಹ ಮತೀಯವಾದದ ಪ್ರಚೋದನಾತ್ಮಕ ಹಾಡು?  ಇದು ಶುದ್ಧ ಆರೆಸ್ಸೆಸ್‌ನ ಕೋಮುವಾದಿ ಶೈಲಿ. ಒಂದೆಡೆ ರಾಷ್ಟ್ರೀಯವಾದವೇ ಒಂದು ಬಗೆಯಲ್ಲಿ ಮತೀಯವಾದವನ್ನು ಪ್ರತಿನಿಧಿಸುತ್ತಿದ್ದರೆ ಇನ್ನೊಂದೆಡೆ ಆರೆಸ್ಸೆಸ್ ನಾವೆಲ್ಲಾ ಹಿಂದೂ ರಾಷ್ಟ್ರೀಯವಾದಿಗಳು ಎಂದು ಪ್ರಚಾರ ಮಾಡುತ್ತಿರುವುದು ಮುಂದಿನ ಕ್ಷೋಭೆಯ ದಿನಗಳ ಮುನ್ಸೂಚನೆಯಂತಿದೆ.
ಈ ಹಿಂದೂ ರಾಷ್ಟ್ರೀಯವಾದದ ಮುಂದುವರಿದ ಭಾಗವಾಗಿಯೇ ಕಾಶ್ಮೀರದ ರಕ್ತಸಿಕ್ತ ನೆಲದಲ್ಲಿ ನಿಂತು ಮೋದಿ, ಏಕೆ 47, ಏಕೆ ಅಂಟೋನಿ, ಏಕೆ 49 ಎಂದು ನೆತ್ತರ ದಾಹದಿಂದ ಮಾತನಾಡಿದ್ದು. ಹಾಗಿದ್ದರೆ ದಲಿತರ, ಆದಿವಾಸಿಗಳ ಪಾಡನ್ನು ಕೇಳುವವರು ಯಾರು? ಅಲ್ಪಸಂಖ್ಯಾತರ ಮುಂದಿನ ಬದುಕು ಹೇಗೆ? ರೈತರ ಭವಿಷ್ಯವೇನು? ಮಹಿಳೆಯ ಬವಣೆಗಳ ಕತೆ ಏನು? ಇವೆಲ್ಲವಕ್ಕೆ ಉತ್ತರವೆಂದರೆ ಮೇಲಿನ ಮತೀಯವಾದದ ರಾಷ್ಟ್ರೀಯವಾದಿ ಹಾಡು.
ಅಂದರೆ ದೇಶ ಇಂದು ಸಂಕಷ್ಟದಲ್ಲಿದೆ. ಹಿಂದುತ್ವ ಅಪಾಯಕ್ಕೊಳಗಾಗಿದೆ. ಹೀಗಾಗಿ, ಮೇಲಿನ ಪ್ರಶ್ನೆಗಳನ್ನು ಕೇಳಬೇಡಿ ಎನ್ನುವಂತಿದೆ ಮತೀಯವಾದಿ ರಾಷ್ಟ್ರೀಯವಾದದ ಹಾಡು. ಇಷ್ಟಕ್ಕೂ 2014ರ ಪ್ರಜಾಪ್ರಭುತ್ವದ ಚುನಾವಣೆಯನ್ನೇ ಒಂದು ಯುದ್ಧವೆಂದು ಪರಿಗಣಿಸಿದೆಯೇ ಸಂಘ ಪರಿವಾರ? ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಅವರು ಹೇಳುತ್ತಾರೆ ‘‘ಈ ಹಾಡು ಟೈಮ್ಸ್ ನೌ ಛಾನಲ್‌ನ ಅರ್ನಾಬ್ ಗೋಸ್ವಾಮಿಗೆ ಹುಟ್ಟುಹಬ್ಬದ ಹಾಡಿನಂತಿದೆ. ಇದು ಪ್ರಧಾನ ಮಂತ್ರಿ ಆಗಲುಬಯಸುವ ಅಭ್ಯರ್ಥಿಗಂತೂ ಅಲ್ಲ. ಯುವ ಜನತೆ ಜಾಗತಿಕವಾಗಿ ಚಿಂತಿಸುತ್ತಿರುವ ಇಂದಿನ ಸಂದರ್ಭದಲ್ಲಿ ಈ ಹಾಡು ಬಿಜೆಪಿಯಿಂದ ಬಂದಿದೆ’’ ( ಔಟ್‌ಲುಕ್ 2, ಎಪ್ರಿಲ್ 2014).
ಅಲ್ಲವೇ? ಸದರಿ ಮೋದಿಯೇ ವಿದೇಶಿ ಕಂಪೆನಿಗಳ ಬಂಡವಾಳ ಹೂಡಿಕೆಯ ಪರವಾಗಿದ್ದಾರೆ. ಬಿಜೆಪಿ ಆಡಳಿತ ವಿರುವ ರಾಜ್ಯಗಳಲ್ಲಿ ಈ ವಿದೇಶಿ ಕಂಪೆನಿಗಳನ್ನು ಬಂಡವಾಳ ಹೂಡಿಕೆಗಾಗಿ ಓಲೈಸಲಾಗುತ್ತಿದೆ. ಇನ್ನು ಸೋ ಕಾಲ್ಡ್ ಮಧ್ಯಮ ಮತ್ತು ಮೇಲ್ವರ್ಗ ಮೋದಿಯನ್ನು ಬೆಂಬಲಿಸುತ್ತಿರುವುದು ಸಹ ಈ ಬಂಡವಾಳಶಾಹಿಯ ಜಾಗತೀಕರಣದ ಕಾರಣಕ್ಕಾಗಿ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ಹಾಗಿದ್ದರೆ ಸಂಘ ಪರಿವಾರದ ಪ್ರಣಾಳಿಕೆಗಳಲ್ಲಿ ಅದಕ್ಕೆ ವಿರುದ್ಧವಾಗಿ ಜನರನ್ನು ಕೆರಳಿಸುವ ಈ ಮತೀಯವಾದಿ ರಾಷ್ಟ್ರೀಯವಾದದ ಹಾಡೇಕೆ?? ‘ಎಕನಾಮಿಕ್ಸ್ ಟೈಮ್ಸ್’ನಲ್ಲಿ ಬಂದ ಒಂದು ವರದಿ ಹೀಗಿದೆ. ‘‘ಒಂದು ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಗುಂಪು ಅಧಿಕಾರಕ್ಕೆ ಬಂದರೆ ಸಂಘಪರಿವಾರದ ಹಿಂದುತ್ವದ ಅಜೆಂಡಾಗಳು ತೆಳುಗೊಂಡು ಮೂಲೆಗುಂಪಾಗಬಾರದೆಂದು ನಿರ್ಧರಿಸಿರುವ ಆರೆಸ್ಸೆಸ್ 2000 ಸ್ವಯಂಸೇವಕರನ್ನು ಕೆಲ ತಿಂಗಳುಗಳ ಕಾಲ ಬಿಜೆಪಿಗೆ ಪರಭಾರೆಯಾಗಿ ಕಳುಹಿಸಲು ನಿರ್ಧರಿಸಿದೆ.
hardcore  ಮಾಮೂಲಿ ಸಂದರ್ಭದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಹಿರಿಯ ನಾಯಕರು ಅದರ ನೇತೃತ್ವ ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಆರೆಸ್ಸೆಸ್‌ನ ಪಾತ್ರ ನಿರ್ವಾತದಲ್ಲಿರುತ್ತಿತ್ತು. ಆದರೆ ಈಗಿನ ಬದಲಾದ ಸಂದರ್ಭದಲ್ಲಿ ಹಾಗಾಗಲಿಕ್ಕೆ ಬಿಡದ ಆರೆಸ್ಸೆಸ್ ತನ್ನ ಸ್ವಯಂಸೇವಕರನ್ನು ಬಿಜೆಪಿ ಪಕ್ಷದಲ್ಲಿ ಆಯಕಟ್ಟಿನ ಜಾಗಗಳಲ್ಲಿ ತುಂಬಿ ಅತ್ಯಂತ ಕರಾರುವಕ್ಕಾಗಿ ತನ್ನ ಹಿಂದುತ್ವದ ಅಜೆಂಡಾಗಳನ್ನು ಜಾರಿಗೊಳಿಸಲು ತೀರ್ಮಾನ ಕೈಗೊಂಡಿದೆ. ತನ್ನ ಸಂಘಟನೆಯ ಅಜೆಂಡಾಗಳು ಪಕ್ಷದ ಹಿರಿಯ ನಾಯಕರ ದರ್ಬಾರಿನಲ್ಲಿ ನಿರ್ಲಕ್ಷಕ್ಕೊಳಗಾಗಬಾರದೆಂಬುದೇ ಈ ತೀರ್ಮಾನಕ್ಕೆ ಕಾರಣ. ಇದು ಮುಂದಿನ ಮೂರು ವರ್ಷಗಳ ಕಾಲದ ದೂರಗಾಮಿ ಯೋಜನೆಯೆಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.
ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್‌ನ ಮೂವರು ಹಿರಿಯ ಸ್ವಯಂಸೇವಕರನ್ನು ಆಯಕಟ್ಟಿನ, ಸೂಕ್ಷ್ಮ ಸ್ಥಳಗಳಲ್ಲಿ ಸಂಘ ಪರಿವಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅವರೆಂದರೆ ಲಕ್ನೋದಲ್ಲಿ ರತ್ನಾಕರ ಪಾಂಡೆ, ವಾರಣಾಸಿಯಲ್ಲಿ ಚಂದ್ರಶೇಖರ ಪಾಂಡೆ, ರಾಯ ಬರೇಲಿಯಲ್ಲಿ ಭವಾನಿ ಸಿಂಗ್. ಇದೇ ಬಗೆಯ ಯೋಜನೆಗಳು ಇತರ ರಾಜ್ಯಗಳಲ್ಲಿಯೂ ಜಾರಿಗೊಳ್ಳುತ್ತಿವೆ.
ಆರೆಸ್ಸೆಸ್ ಈ ಕಾರ್ಯತಂತ್ರವನ್ನು ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. 1988-89ರಲ್ಲಿ ಮುಧುಕರ ದತ್ತಾತ್ರೇಯ ಬಾಳಾಸಾಹೇಬ ದೇವರಸ್ ಅವರು ಆರೆಸ್ಸೆಸ್‌ನ ಮುಖ್ಯಸ್ಥರಾಗಿದ್ದಾಗ ಆಗ ಆರೆಸ್ಸೆಸ್‌ನ ಪ್ರಚಾರಕರಾಗಿದ್ದ ನರೇಂದ್ರ ಮೋದಿ, ಗೋವಿಂದಾಚಾರ್ಯ, ಶೇಷಾದ್ರಿಯಾಚಾರಿಯವರನ್ನು ಬಿಜೆಪಿಯಲ್ಲಿ ಆರೆಸ್ಸೆಸ್ ಸಿದ್ಧಾಂತವನ್ನು ಗಟ್ಟಿಗೊಳಿಸಲು ಆ ಪಕ್ಷಕ್ಕೆ ವಲಸೆ ಕಳುಹಿಸಿದ್ದರು.
ಶೇಷಾದ್ರಿಯಾಚಾರಿ ಯವರು, ‘‘ಆಗ ಬಿಜೆಪಿ ಪಕ್ಷವು ಅತ್ಯಂತ ದುರ್ಬಲವಾಗಿತ್ತು. ಅದಕ್ಕಾಗಿ ನಮ್ಮ ಸ್ವಯಂಸೇವಕರನ್ನು ಅಲ್ಲಿಗೆ ಕಳುಹಿಸುತ್ತಿದ್ದೆವು. ಆದರೆ ಪ್ರತಿಯೊಬ್ಬ ಸ್ವಯಂಸೇವಕನೂ ಬಿಜೆಪಿಯಲ್ಲಿರಬೇಕೆಂದು ಆರೆಸ್ಸೆಸ್ ಬಯಸುವುದೇ ಇಲ್ಲ. ಆದರೆ ಪಕ್ಷವೂ ನಿರ್ಲಕ್ಷಕ್ಕೊಳಗಾಗಬಾರದು’’ ಎಂದು ಹೇಳಿದ್ದರು.
‘‘2009ರಲ್ಲಿ ಬಿಜೆಪಿ ಚುನಾವಣೆಯಲ್ಲಿ ಸೋತ ನಂತರ ಪಕ್ಷದ ಮೇಲೆ ಆರೆಸ್ಸೆಸ್ ಹಿಡಿತ ಬಲಗೊಳ್ಳು ತ್ತಿದೆ. ಆ ಸಂದರ್ಭದಲ್ಲಿ ನಿತಿನ್ ಗಡ್ಕರಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು ಈ ನಿಟ್ಟಿನಲ್ಲಿ ಆರೆ

ಸ್ಸೆಸ್ ತೆಗೆದುಕೊಂಡಂತಹ ಮೊದಲ ಹೆಜ್ಜೆ. ನಂತರ ಗಡ್ಕರಿ, ಧರ್ಮೇಂದ್ರ ಪ್ರಧಾನ, ಜೆ.ಪಿ.ನಂದ, ಮುರಳೀಧರ ರಾವ್, ವಿ.ಸತೀಶ್, ಸೌದಾನ್ ಸಿಂಗ್‌ರಂತಹ ಪ್ರಭಾವಿ ಆರೆಸ್ಸೆಸ್ ತಂಡವನ್ನೇ ಪಕ್ಷದೊಳಗೆ ಕರೆತಂದರು.’’

(ಎಕನಾಮಿಕ್ಸ್ ಟೈಮ್ಸ್, ಎಪ್ರಿಲ್ 2, 2014) ಮೇಲಿನ ವರದಿ ಮತೀಯವಾದಿ ಆರೆಸ್ಸೆಸ್ ಸಂಘಟನೆ ಅತ್ಯಂತ aggressive   ಆಗಿ ತನ್ನ ಮುಂದಿನ ಹೆಜ್ಜೆಗಳನ್ನು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದೊಂದು ಸಣ್ಣ ಉದಾಹರಣೆ. ಆರೆಸ್ಸೆಸ್‌ನ ಅಂಗ ಸಂಸ್ಥೆಗಳು ಎಲ್ಲ ದಿಕ್ಕುಗಳಿಂದಲೂ ಬಿಜೆಪಿ ಪಕ್ಷದೊಳಗೆ ಧಾವಿಸುತ್ತಿವೆ. ಮತೀಯವಾದಿ ರಾಷ್ಟ್ರೀಯವಾದ ಮತ್ತು ರಾಜಕೀಯದ ಅಧಿಕಾರದೆಡೆಗೆ ದಾಪುಗಾಲಿಡುತ್ತಿರುವ ಆರೆಸ್ಸೆಸ್‌ನ ಕೋಮುವಾದಿ ಶಕ್ತಿಗಳೊಂದಿಗೆ ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳು ಹೇಗೆ ಧ್ರುವೀಕರಣಗೊಳ್ಳುತ್ತವೆ ಎಂದು ಕಾದು ನೋಡಬೇಕಾಗಿದೆ.                                  -ವಾರ್ತಾಭಾರತಿ
Please follow and like us:
error

Leave a Reply

error: Content is protected !!