ಸಾಂವಿಧಾನಿಕ ಬಿಕ್ಕಟ್ಟಿನತ್ತ ಲೋಕ ಸಂಘರ್ಷ :

ರಾಜ್ಯಪಾಲ, ಸಿ.ಎಂ ನಡುವೆ ಮುಸುಕಿನ ಗುದ್ದಾಟ
ಬನ್ನೂರಮಠ ಹೆಸರೇ ಅಂತಿಮ: ಸರ್ಕಾರ, ಕಳಂಕಿತರನ್ನು ಒಪ್ಪಲ್ಲ: ರಾಜ್ಯಪಾಲ
ಬೆಂಗಳೂರು ನ.೨೦ : ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ರಾಜ್ಯಪಾಲರ ಹಠ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಆತಂಕ ಕಾಣಿಸಿಕೊಂಡಿದೆ.
ನಿವೃತ್ತ ನ್ಯಾ. ಎಸ್.ಆರ್. ಬನ್ನೂರಮಠ ಅವರ ಹೆಸರಿನ ಶಿಫಾರಸನ್ನೇ ಅಂತಿಮಗೊಳಿಸಲು ಸರ್ಕಾರ ಹಠ ಹಿಡಿದಿದ್ದರೆ, ಸಾಧ್ಯವೇ ಇಲ್ಲ ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಪಟ್ಟು ಹಿಡಿದು ಕುಳಿತಿದ್ದಾರೆ.
ಈ ಹಠದಲ್ಲಿ ಯಾರಾದರೂ ಒಬ್ಬರು ಮಣಿಯದೇ ಇದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ ಯಾಗುವುದು ಖಚಿತ ಎನ್ನಲಾಗಿದೆ.
ಸಂವಿಧಾನ ಮತ್ತು ನಿಯಮಾವಳಿಗಳ ಅನ್ವಯ ಸರ್ಕಾರ ಯಾವುದೇ ಒಂದು ವಿಚಾರದ ಶಿಫಾರ ಸನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟರೆ ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಲೇ ಬೇಕು. ಇದು ಈವರೆಗೆ ನಡೆದುಕೊಂಡು ಬಂದಿರುವ ಪದ್ಧತಿ.
ಆದರೆ, ಎರಡನೇ ಬಾರಿಯೂ ರಾಜ್ಯಪಾಲರು ತಿರಸ್ಕರಿಸಿದರೆ ಅಥವಾ ಶಿಫಾರಸಿಗೆ ಅಂಕಿತ ಹಾಕದೇ ಇದ್ದರೆ?
ಇದುವರೆಗೆ ಇಂತಹ ಪ್ರಶ್ನೆ ಉದ್ಭವಿಸಿಲ್ಲ. ಲೋಕಾಯುಕ್ತರ ನೇಮಕದ ವಿಚಾರದಲ್ಲಿ ಹಾಗಾಗು ತ್ತಿಲ್ಲ. ನ್ಯಾ. ಬನ್ನೂರಮಠ ಅವರ ಹೆಸರೇ ಅಂತಿಮ ಎಂದು ಸರ್ಕಾರ ಹೇಳುತ್ತಿದ್ದರೆ, ಈ ನೇಮಕ ಕ್ಕೆ ತಾವು ಸರ್ವಥಾ ಒಪ್ಪುವುದಿಲ್ಲ ಎಂದು ರಾಜ್ಯಪಾಲರು ಪಟ್ಟುಹಿಡಿದು ಕುಳಿತಿದ್ದಾರೆ. ಇದರಿಂದಾಗಿಯೇ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸುವ ಆತಂಕ ಕಾಣಿಸಿಕೊಂಡಿರುವುದು.
ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ: ಲೋಕಾಯುಕ್ತ ಹುದ್ದೆಗೆ ನ್ಯಾ. ಬನ್ನೂರಮಠ ಅವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರ ಮತ್ತೆ ಕಳುಹಿಸಿಕೊಡುವ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕದೇ ಇದ್ದರೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಲೋಕಾಯುಕ್ತರ ನೇಮಕಾತಿ ಶಿಫಾರಸಿಗೆ ಸಹಿ ಹಾಕುವುದು ರಾಜ್ಯಪಾಲರ ಶಾಸನಬದ್ಧ ಅಧಿಕಾರವೇ ಹೊರತು ಸಂವಿಧಾನದ ಅಧಿಕಾರ ಅಲ್ಲ.
ಲೋಕಾಯುಕ್ತರ ನೇಮಕ ಸರ್ಕಾರದ ಅಥವಾ ಸಂಪುಟದ ಕೆಲಸ ಅಲ್ಲ. ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕರು, ಸ್ಪೀಕರ್, ಸಭಾಪತಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಲೋಕಾಯುಕ್ತರ ಹೆಸರನ್ನು ಅಂತಿಮಗೊಳಿಸುತ್ತದೆ. ಈ ಹೆಸರನ್ನು ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡುತ್ತದೆ.
ರಾಜ್ಯಪಾಲರು ಅದಕ್ಕೆ ಅಂಕಿತ ಹಾಕುತ್ತಾರೆ. ಅಂದರೆ, ಲೋಕಾಯುಕ್ತರ ನೇಮಕ ನಿರ್ಧಾರ ಸರ್ಕಾರದ್ದಲ್ಲ. ಉನ್ನತ ಮಟ್ಟದ ಸಮಿತಿ ಅಂತಿಮಗೊಳಿಸಿದ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವುದಷ್ಟೇ ಸರ್ಕಾರದ ಕೆಲಸ.
ಒಂದು ವೇಳೆ ರಾಜ್ಯಪಾಲರಿಗೆ ಸರ್ಕಾರದ ಶಿಫಾರಸು ಸಮ್ಮತವಾಗದೇ ಇದ್ದರೆ ಅದನ್ನು ಮರು ಪರಿಶೀಲಿಸುವಂತೆ ಸೂಚಿಸಬಹುದು. ಸರ್ಕಾರ ಮರುಪರಿಶೀಲಿಸಲು ಸಾಧ್ಯವಿಲ್ಲ ಎಂದು ಹೇಳಿ ಮತ್ತೆ ಅದೇ ಶಿಫಾರಸನ್ನು ರಾಜ್ಯಪಾಲರಿಗೆ ಕಳುಹಿಸಬಹುದು.
ಹಾಗೆ ಮಾಡಿದರೆ, ಲೋಕಾಯುಕ್ತರನ್ನು ನೇಮಕ ಮಾಡುವುದು ಸರ್ಕಾರ ಅಥವಾ ಸಚಿವ ಸಂಪುಟ ಅಲ್ಲ. ಅದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಇರುವ ಸರ್ಕಾರದ ಪ್ರತಿನಿಧಿಗಳು ಮತ್ತು ಪ್ರತಿಪಕ್ಷದ ನಾಯಕರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ.
ಹೀಗಾಗಿ ಮತ್ತೊಮ್ಮೆ ಈ ಸಮಿತಿ ನಿರ್ಧಾರ ಕೈಗೊಳ್ಳಲಿ ಎಂದು ಹೇಳುವ ಅಧಿಕಾರ ರಾಜ್ಯಪಾಲ ರಿಗೆ ಇದೆ. ಅಂತಹ ಪರಿಸ್ಥಿತಿ ಬಂದರೆ ಅದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎನ್ನುತ್ತವೆ ಕಾನೂನು ಇಲಾಖೆ ಮೂಲಗಳು.
ಹಠ ಯಾಕೆ?: ರಾಜ್ಯಪಾಲರು ಕೇಂದ್ರ ಸರ್ಕಾರದಿಂದ ನೇಮಕಗೊಂಡವರಾದರೂ ರಾಜ್ಯ ಸರ್ಕಾರದ ಪಾಲಿಗೆ ಅವರೇ ಮುಖ್ಯಸ್ಥ. ಅದಕ್ಕಿಂತಲೂ ಮುಖ್ಯವಾಗಿ ದೊಡ್ಡಣ್ಣನ ಮಾದರಿಯಲ್ಲಿ ಸರ್ಕಾರಕ್ಕೆ ಸಲಹೆ, ಎಚ್ಚರಿಕೆ, ಬುದ್ಧಿಮಾತು ಹೇಳುವ ಅಧಿಕಾರ ಅವರಿಗೆ ಇದೆ. ಹಾಗೆಂದು ತಾವು ಹೇಳಿದ್ದನ್ನೆಲ್ಲಾ ಕೇಳಬೇಕು ಎಂದು ರಾಜ್ಯಪಾಲರು ಬಯಸಿದರೆ ಅದು ತಪ್ಪಾಗುತ್ತದೆ. ಅದೇ ರೀತಿ ರಾಜ್ಯಪಾಲರು ಹೇಳಿದಂತೆ ಕೇಳಬೇಕೇಕೆ ಎಂಬ ಸರ್ಕಾರದ ನಡವಳಿಕೆಯೂ ಸರಿಯಲ್ಲ.
ನ್ಯಾ. ಬನ್ನೂರಮಠ ಅವರನ್ನೇ ನೇಮಿಸಬೇಕು ಎಂದು ಸರ್ಕಾರ ಮತ್ತು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಕುಳಿತರೆ ಸದ್ಯಕ್ಕೆ ಲೋಕಾಯುಕ್ತ ಸ್ಥಾನ ಭರ್ತಿಯಾಗುವುದಿಲ್ಲ ಎಂಬುದು ಒಂದೆಡೆಯಾದರೆ, ಈ ಅಂಶವೇ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವುದು ಖಚಿತ ಎನ್ನಲಾಗುತ್ತಿದೆ.
ಹೊಸ ರೀತಿಯ ಚರ್ಚೆಗೆ ಗ್ರಾಸ: ಈ ಮಧ್ಯೆ ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ಆರಂಭವಾಗಿರುವ ಸಂಘರ್ಷ ಹೊಸ ರೀತಿಯ ಚರ್ಚೆಗೆ ಗ್ರಾಸವಾ ಗಿದೆ. ಗುಜರಾತ್‌ನಲ್ಲಿ ಸರ್ಕಾರ ಲೋಕಾಯುಕ್ತರನ್ನು ನೇಮಕ ಮಾಡದ ಕಾರಣ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ಸಂಘರ್ಷ ನಡೆಯಿತು.
ಆದರೆ, ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡುವ ವಿಚಾರದಲ್ಲಿ ಸರ್ಕಾರದ ಶಿಫಾರಸಿಗೆ ಅಂಕಿತ ಹಾಕಬೇಕೇ? ಬೇಡವೇ? ಎಂಬ ಬಗ್ಗೆ ಸಂಘರ್ಷ ನಡೆಯುತ್ತಿದೆ. ದೇಶದ ಇತಿಹಾಸದಲ್ಲೇ ಈ ರೀತಿಯ ಸಂಘರ್ಷ ನಡೆಯುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ರಾಜ್ಯದ ನೂತನ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಈಗ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ಹಿಂದಿನ ಎಲ್ಲ ಸರ್ಕಾರಗಳು ಅನುಸರಿಸಿದ ಪ್ರಕ್ರಿಯೆಗಳನ್ನು ನಾವು ಕೂಡ ಅನುಸರಿಸಿ, ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಬನ್ನೂರಮಠ ಅವರ ಹೆಸರನ್ನು ಕಳುಹಿಸಿಕೊಟ್ಟಿದ್ದೇವೆ. ಈಗ ತೀರ್ಮಾನಿಸಬೇಕಾದವರು ರಾಜ್ಯಪಾಲರು. -ಸದಾನಂದಗೌಡ, ಮುಖ್ಯಮಂತ್ರಿ
ಲೋಕಾಯುಕ್ತ ಹುದ್ದೆಗೆ ಅರ್ಹರಲ್ಲದ ಆಭ್ಯರ್ಥಿಗಳನ್ನು ನೇಮಕ ಮಾಡಲು ಸಾಧ್ಯವಿಲ್ಲ. ಇಂಥ ವರನ್ನೇ ನೇಮಕ ಮಾಡಬೇಕು ಎಂದು ನನ್ನ ಮೇಲೆ ಒತ್ತಡ ಹೇರುವ ಸರ್ಕಾರದ ಕ್ರಮ ಸರಿಯಲ್ಲ. ಲೋಕಾಯುಕ್ತ ಹುದ್ದೆಗೆ ರಾಜ್ಯದಲ್ಲಿ ಅರ್ಹರು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಾಕಷ್ಟು ಮಂದಿ ನ್ಯಾಯಮೂರ್ತಿಗಳು‌ಇದ್ದಾರೆ. -ಭಾರದ್ವಾಜ್, ರಾಜ್ಯಪಾಲ
-ರಾಜ್ಯಪಾಲ, ಸಿ.ಎಂ ಮುಸುಕಿನ ಗುದ್ದಾಟ
ಬೆಂಗಳೂರು/ಮೈಸೂರು: ನೂತನ ಲೋಕಾಯುಕ್ತರ ನೇಮಕ ಸಂಬಂಧ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವಿನ ಮಾತಿನ ಸಮರ ಮುಂದುವರಿದಿದೆ. ಲೋಕಾಯುಕ್ತರ ನೇಮಕ ವಿಳಂಬ ಆಗಲು ರಾಜ್ಯಪಾಲರು ಕಾರಣ ಎಂದು ಡಿ.ವಿ.ಸದಾನಂದ ಗೌಡರು ಹೇಳಿಕೆ ನೀಡಿದರೆ, ರಾಜ್ಯಪಾಲರು ಈ ವಿಳಂಬಕ್ಕೆ ಸರ್ಕಾರವೇ ಹೊಣೆ ಎಂದು ತಿರುಗೇಟು ನೀಡಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಾನುವಾರ ಮೈಸೂರಿಗೆ ಬಂದಿದ್ದ ಡಿ.ವಿ.ಸದಾನಂದ ಗೌಡರು `ಲೋಕಾಯುಕ್ತರ ನೇಮಕಾತಿ ಸಂಬಂಧ ರಾಜ್ಯಪಾಲರು ಕೇಳಿರುವ ಸ್ಪಷ್ಟೀಕರಣವನ್ನು ಈಗಾಗಲೇ ಒದಗಿಸಲಾಗಿದೆ. ಚೆಂಡು ಈಗ ರಾಜ್ಯಪಾಲರ ಅಂಗಳದಲ್ಲಿದ್ದು, ಅವರ ಮುಂದಿನ ನಡೆಯನ್ನು ಗಮನಿಸುತ್ತಿದ್ದೇವೆ` ಎಂದರು.
ಆದರೆ ಇದಕ್ಕೆ ರಾಜ್ಯಪಾಲರು ಮತ್ತೆ ಆಕ್ಷೇಪ ಎತ್ತಿದ್ದಾರೆ. `ರಾಜ್ಯದಲ್ಲಿ ಹಲವು ಮಂದಿ ನ್ಯಾಯಾಧೀಶರು ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ, ಅವರಲ್ಲೇ ಉತ್ತಮ ವ್ಯಕ್ತಿಯೊಬ್ಬರನ್ನು ಲೋಕಾಯುಕ್ತ ಸ್ಥಾನಕ್ಕೆ ಆಯ್ಕೆ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲವೇ` ಎಂದು ಎಚ್.ಆರ್. ಭಾರದ್ವಾಜ್ ಪ್ರಶ್ನಿಸಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಕಾಲ ನಡೆದ ರಾಷ್ಟ್ರೀಯ ಕೃಷಿ ಮೇಳದ ಅಂತಿಮ ದಿನವಾದ ಭಾನುವಾರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಇಂಥವರನ್ನೇ ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕು ಎಂದು ನನ್ನ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ` ಎಂದರು. `ನೂತನ ಲೋಕಾಯುಕ್ತರ ನೇಮಕಾತಿ ನನ್ನಿಂದ ವಿಳಂಬವಾಗುತ್ತಿಲ್ಲ` ಎಂದು ಉತ್ತರಿಸಿದರು
Please follow and like us:
error

Related posts

Leave a Comment