ಅರ್ಥಪೂರ್ಣ ಬಸವ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ ಏ. : ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವವನ್ನು ಮೇ. ೦೬ ರಂದು ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ.
ಬಸವ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಈ ಬಾರಿಯ ಬಸವ ಜಯಂತಿ ಉತ್ಸವ ಕಾರ್ಯಕ್ರಮಗಳನ್ನು ಮೇ. ೦೬ ರಂದು ಕೊಪ್ಪಳದ ಬಸವ ಜಯಂತಿ ಉತ್ಸವ ಸಮಿತಿಯ ಸಹಯೋಗದೊಂದಿಗೆ ಸಡಗರ, ಸಂಭ್ರಮದಿಂದ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಜೆ.ಎಸ್. ಪಾಟೀಲ್ ಅವರನ್ನು ಆಹ್ವಾನಿಸಲಾಗುವುದು. ವಿಶೇಷ ಆಹ್ವಾನಿತರನ್ನಾಗಿ ಬೈಲಹೊಂಗಲದ ಶರಣೆ ಪ್ರೇಮಕ್ಕ ಅಂಗಡಿ ಅವರನ್ನು ಆಹ್ವಾನಿಸಲಾಗುವುದು. ಸಂಸ್ಥಾನ ಶ್ರೀ ಗವಿಮಠದ ಜಗದ್ಗುರು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ, ವಚನ ಗಾಯನ ಸೇರಿದಂತೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಬಸವ ಜಯಂತಿ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಮನವಿ ಮಾಡಿಕೊಂಡರು.
ಸಭೆಯಲ್ಲಿ ಭಾಗವಹಿಸಿದ್ದ ಬಸವ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಅವರು ಮಾತನಾಡಿ ಮೇ. ೬ ರಂದು ಬೆಳಿಗ್ಗೆ ೯-೩೦ ಗಂಟೆಗೆ ನಗರದ ಬಸವೇಶ್ವರ ವೃತ್ತದ ಬಳಿ ಜಗಜ್ಯೋತಿ ಬಸವೇಶ್ವರರ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಂದು ಸಂಜೆ ೪ ಗಂಟೆಗೆ ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಏರ್ಪಡಿಸಲಾಗಿದ್ದು, ಮೆರವಣಿಗೆಯು ಕೋಟೆ ಮಹೇಶ್ವರ ದೇವಸ್ಥಾನದಿಂದ ಹೊರಟು, ಗಡಿಹಾರ ಕಂಭ, ಅಜಾದ್ ಸರ್ಕಲ್, ಪ್ಯಾಟಿ ಈಶ್ವರ ದೇವಸ್ಥಾನ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಗವಿಮಠ ಆವರಣ ತಲುಪಲಿದೆ. ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮೆರವಣಿಗೆ ಸಂದರ್ಭದಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ನಗರಸಭೆ ವತಿಯಿಂದ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಸಿ.ಬಿ. ಬಸವರಾಜ್, ನಗರಸಭೆ ಪೌರಾಯುಕ್ತ ಹೆಚ್.ಬಿ. ಬೆಳ್ಳಿಕಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ರಾಷ್ಟ್ರೀಯ ಬಸವದಳದ ಜಿಲ್ಲಾ ಅಧ್ಯಕ್ಷ ವೀರಣ್ಣ ಕೊರ್‍ಲಹಳ್ಳಿ, ಮಹೇಶ್ ಮಿಟ್ಟಲಖೋಡ್, ಶಿವಕುಮಾರ ಕುಕನೂರು, ಗವಿಸಿದ್ದಪ್ಪ ಕೊಪ್ಪಳ, ದಾನಪ್ಪ ಶೆಟ್ಟರ್ ಮುಂತಾದ ಗಣ್ಯರು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Please follow and like us:
error