ಆನೆಗೊಂದಿ ಉತ್ಸವ: ಜನಮನ ಸೂರೆಗೊಂಡ ಲೇಸರ್ ಶೋ

:  ಆನೆಗೊಂದಿ ಉತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಏರ್ಪಡಿಸಲಾದ ಲೇಸರ್ ಶೋ ಪ್ರದರ್ಶನ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

  ಉತ್ಸವದ ಸವಿಯನ್ನು ಸವಿಯಲು ನೆರೆದಿದ್ದ ಜನರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ವಸತಿ ಭಾಗ್ಯ ಸೇರಿದಂತೆ ಹಲವು ಶ್ರೇಯೋಭಿವೃದ್ಧಿ ಯೋಜನೆಗಳ ಕುರಿತಂತೆ ಪ್ರದರ್ಶನಗೊಂಡ ಲೇಸರ್ ಶೋ ನೋಡುಗರ ಮನಸೂರೆಗೊಂಡಿತು.  ಸುವರ್ಣ ಕರ್ನಾಟಕ ಲೇಸರ್ ಶೋ ಸಪ್ತ ವರ್ಣಗಳಲ್ಲಿ ಕನ್ನಡ ನಾಡು ನುಡಿ ಹಾಗೂ ರಾಜ್ಯದ ಅಭಿವೃದ್ಧಿಯ ಚಿತ್ರಣವನ್ನು ಅನಾವರಣಗೊಳಿಸಿತು.  ಆಂಗ್ಲರ ಆಳ್ವಿಕೆ, ಈ ಪ್ರದೇಶವನ್ನು ಆಳಿದ ಕದಂಬ, ವಿಜಯನಗರ, ಹೊಯ್ಸಳ, ಚಾಲುಕ್ಯ ಮುಂತಾದ ಸಾಮ್ರಾಜ್ಯದ ದೊರೆಗಳು, ಸ್ವಾತಂತ್ರ್ಯ ಚಳುವಳಿ, ಕರ್ನಾಟಕದ ಏಕೀಕರಣ, ರಾಜ್ಯದ ಸಾಂಸ್ಕೃತಿಕ ಪರಂಪರೆ, ಸಂಗೀತ, ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಿಗ್ಗಜರು, ರಾಜ್ಯದ ಏಕೀಕರಣ ನಂತರ ಅಭಿವೃದ್ಧಿಯ ಬೆಳವಣಿಗೆಯಲ್ಲಿನ ವಿವಿಧ ಮಜಲುಗಳನ್ನು ಸಪ್ತ ವರ್ಣಗಳ ರೇಖೆಗಳ ಮೂಲಕ ಲೇಸರ್ ಶೋ ಅನಾವರಣಗೊಳಿಸಿತು.  ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳು, ರಾಷ್ಟ್ರಕವಿ ಕುವೆಂಪು ಅವರಿಂದ ಈವರೆಗಿನ ಆಧುನಿಕ ಸಾಹಿತ್ಯದ ಖ್ಯಾತ ಸಾಹಿತಿಗಳು.  ರಾಜ್ಯವು ಕೃಷಿ, ಐಟಿಬಿಟಿ, ತಾಂತ್ರಿಕತೆ, ಕೈಗಾರಿಕೆ, ನೀರಾವರಿ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಹಿರಿಮೆಯನ್ನು ಲೇಸರ್ ಪ್ರದರ್ಶನದ ಮೂಲಕ ಪ್ರತಿಬಿಂಬಿಸಲಾಯಿತು. ಸುಮಾರು ೩೦ ನಿಮಿಷಗಳ ಕಾಲ ಜರುಗಿದ ಲೇಸರ್ ಶೋ ಪ್ರದರ್ಶನ ಕಾರ್ಯಕ್ರಮ ಎಲ್ಲ ನೋಡುಗರ ಮೈಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.  

Leave a Reply