ರಾಜ್ಯದಲ್ಲಿ ಈ ವರ್ಷ ೧೦೦ ಐಟಿಐ ಕಾಲೇಜು ಮಂಜೂರು- ಪಿ.ಟಿ. ಪರಮೇಶ್ವರ ನಾಯ್ಕ

ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯದಲ್ಲಿ ಈ ವರ್ಷ ೧೦೦ ಹೊಸ ಐಟಿಐ ಕಾಲೇಜುಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು    ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರು ಹೇಳಿದರು.

  ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿಯಲ್ಲಿ ಶನಿವಾರ ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಅಡಿ  ೧.೫೧ ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
  ಐಟಿಐ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತಿವೆ.  ರಾಜ್ಯದಲ್ಲಿ ಯುವಕರಿಗೆ ಸ್ವಯಂ ಉದ್ಯೋಗಕಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ವರ್ಷ ೧೦೦ ಹೊಸ ಐಟಿಐ ಕಾಲೇಜುಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಎರಡು ಐಟಿಐ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ.  ಐಟಿಐ ಕೋರ್ಸ್‌ನಲ್ಲಿ ಪ್ರಸಕ್ತ ವರ್ಷದಿಂದ ಬಹುವೃತ್ತಿ ತರಬೇತಿ, ಅಂದರೆ ಏಕ ಕಾಲಕ್ಕೆ ಎರಡು ವಿಭಾಗಗಳ ತರಬೇತಿ ಪಡೆಯಲು ವಿದಾರ್ಥಿಗೆ ಅವಕಾಶ ನೀಡಲಾಗುವುದು.  ಪ್ರಾಯೋಗಿಕವಾಗಿ ಬೆಂಗಳೂರು, ಮೈಸೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಈ ತರಬೇತಿಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಒಂದು ಕೋರ್ಸ್‌ಗೆ ಸೇರಿದ ವಿದ್ಯಾರ್ಥಿ ಅದೇ ಕೋರ್ಸ್‌ಗೆ ಪೂರಕವಾಗುವ ಎರಡು ವಿಷಯಗಳನ್ನು ಕಲಿಯಲು ಸಾಧ್ಯವಾಗಲಿದೆ.  ಇದರಿಂದಾಗಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸಹಕಾರಿಯಾಗಲಿದೆ.  ಈ ಮಾದರಿ ಯಶಸ್ವಿಯಾದಲ್ಲಿ, ಇತರೆ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
  ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಸಂವಿಧಾನದ ಕಲಂ ೩೭೧(ಜೆ) ತಿದ್ದುಪಡಿಯಾದ ಬಳಿಕ ಸಾಕಷ್ಟು ಅನುದಾನ ಹರಿದುಬಂದಿದೆ. ಜಿಲ್ಲೆಗೆ ೧೫೦ ಕೋಟಿ ಅನುದಾನ ಬಂದಿದೆ.  ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಮೀನು ನೀಡಿದರೆ ಕಟ್ಟಡ ನಿರ್ಮಿಸಬಹುದು. ಯಾವುದೇ ಕಾಮಗಾರಿ ಗುಣಮಟ್ಟ ಕಳಪೆಯಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. 
  ತಾ.ಪಂ. ಅಧ್ಯಕ್ಷೆ ಮಹಾದೇವಿ ಕಳಕಪ್ಪ ಕಂಬಳಿ, ಉಪಾಧ್ಯಕ್ಷ ಶೇಖರಪ್ಪ ಸಿದ್ದಪ್ಪ ವಾರದ, ತಾ.ಪಂ. ಸದಸ್ಯ ಶರಣಪ್ಪ ಗವಿಯಪ್ಪ ಗುರಿಕಾರ, ಗ್ರಾ.ಪಂ. ಅಧ್ಯಕ್ಷೆ ಅನ್ನಪೂರ್ಣಾ ಬಸನಗೌಡ ಮರೇಗೌಡ್ರ, ಉಪಾಧ್ಯಕ್ಷ ಶಂಕ್ರಪ್ಪ ಸಂ.ಹೊಸಮನಿ, ಜಿ.ಪಂ. ಸದಸ್ಯರುಗಳಾದ ಅಶೋಕ ತೋಟದ, ರಾಮಣ್ಣ ಸಾಲಭಾವಿ, ಅಲ್ಲದೆ ಭಾಗೀರಥಿ ಜೋಗಿನ್, ಜಯಶ್ರೀ ಅರಕೇರಿ ಮತ್ತಿತರರು ಇದ್ದರು.
Please follow and like us:
error