ಆನೆಗೊಂದಿ ಉತ್ಸವ : ಮೆರವಣಿಗೆಗೆ ಆನೆ ಅಂಬಾರಿಯೇ ಬೇಕು- ಶಿವರಾಜ್ ತಂಗಡಗಿ

 ಕೊಪ್ಪಳ ಏ.: ಆನೆಗೊಂದಿ ಉತ್ಸವದ ಅಂಗವಾಗಿ ಇದೇ ಏ. ೧೧ ರಂದು ಆನೆಗೊಂದಿಯಲ್ಲಿ ಏರ್ಪಡಿಸಲಾಗುವ ವೈಭವದ ಮೆರವಣಿಗೆಗೆ ಆನೆ ಅಂಬಾರಿಯನ್ನೇ ವ್ಯವಸ್ಥೆಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

  ಆನೆಗೊಂದಿ ಉತ್ಸವ ಸಿದ್ಧತೆ ಕುರಿತಂತೆ ಗಂಗಾವತಿ ತಾಲೂಕು ಆನೆಗೊಂದಿ ಗ್ರಾಮದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಆನೆಗೊಂದಿ ಉತ್ಸವದ ಮೆರವಣಿಗೆಗೆ ಆನೆ ಅಂಬಾರಿಯನ್ನೇ ವ್ಯವಸ್ಥೆಗೊಳಿಸಬೇಕು. ಉತ್ಸವ ಕುರಿತಂತೆ ಕಳೆದ ವಾರ ಆನೆಗೊಂದಿಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮೆರವಣಿಗೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಆನೆ ಅಂಬಾರಿಯ ಬದಲಿಗೆ ಕುದುರೆ ಸಾರೋಟ್ ಬಳಸಲು ನಿರ್ಧಾರ ಕೈಗೊಳ್ಳಲಾಗಿತ್ತು.  ಆದರೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಮೆರವಣಿಗೆಗೆ ಆನೆ ಅಂಬಾರಿಯನ್ನೇ ಬಳಸುವಂತೆ ಮನವಿ ಮಾಡಿಕೊಂಡಿದ್ದಾರೆ.  ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಉಪಸಂರಕ್ಷಣಾಧಿಕಾರಿಗಳು, ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿರುತ್ತದೆ.  ಅಲ್ಲದೆ ಮೆರವಣಿಗೆ ಸಾಗಿ ಬರುವ ದಾರಿಯು ಡಾಂಬರ್ ರಸ್ತೆಯಾಗಿದ್ದು, ಆನೆಯ ಕಾಲಿಗೆ ಹೆಚ್ಚಿನ ಬಿಸಿ ತಾಗುವುದರಿಂದ, ರೊಚ್ಚಿಗೇಳುವ ಸಾಧ್ಯತೆ ಇದೆ ಎಂದರು.  ರಸ್ತೆಗೆ ಟ್ಯಾಂಕರ್ ಮೂಲಕ ನೀರು ಹಾಕಿ, ತಂಪಾಗಲು ಹಾಗೂ ಮುಂಜಾಗ್ರತೆಗೆ ಸೂಕ್ತ ವ್ಯವಸ್ಥೆ ಕೈಗೊಂಡು, ಆನೆ ಅಂಬಾರಿಗೆ ವ್ಯವಸ್ಥೆ ಮಾಡುವಂತೆ ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರೇಮ್ ಮತ್ತು ಚೈತ್ರಾ ಕಾರ್ಯಕ್ರಮ : ಆನೆಗೊಂದಿ ಉತ್ಸವದ ಮುಖ್ಯ ವೇದಿಕೆಯಲ್ಲಿ  ಏ. ೧೧ ರಂದು ಚಲನಚಿತ್ರ ತಂಡವಾಗಿರುವ ಪ್ರೇಮ್ ಮತ್ತು ಚೈತ್ರಾ ಅವರ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ.  ಏ. ೧೨ ರಂದು ಜೂನಿಯರ್ ಉಪೇಂದ್ರ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.  ಉಳಿದಂತೆ ಮುಖ್ಯವೇದಿಕೆ ಮತ್ತು ಸಮಾನಾಂತರ ವೇದಿಕೆಗಳಿಗೆ ರಾಜ್ಯ ಮಟ್ಟದ ಕಲಾವಿದರು, ನೆರೆಹೊರೆ ಜಿಲ್ಲೆಯ ಕಲಾವಿದರು, ಸ್ಥಳೀಯರು ಸೇರಿದಂತೆ ಒಟ್ಟು ೯೬ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ.  ಇದರಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ತಿಳಿಸಿದರು.  ಉತ್ಸವದ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಕಲಾವಿದರಿಗೆ ಕಾರ್ಯಕ್ರಮ ನೀಡಲು ಶೀಘ್ರ ಮಾಹಿತಿ ಹಾಗೂ ಆಹ್ವಾನ ನೀಡುವಂತೆ ಸಚಿವರು ಸೂಚಿಸಿದರು.
ಕ್ರೀಡಾಕೂಟ : ಉತ್ಸವ ಸಂದರ್ಭದಲ್ಲಿ ಏ. ೧೨ ರಂದು ಪುರುಷ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿದ್ದು, ಪುರುಷರಿಗೆ ಏ. ೧೨ ರಂದು ಬೆ. ೭-೩೦ ಗಂಟೆಗೆ ದುರ್ಗಾ ದೇವಿ ದೇವಸ್ಥಾನದ ಪ್ರವೇಶದ್ವಾರದಿಂದ ಮ್ಯಾರಥಾನ್ ಓಟ, ಮುಖ್ಯವೇದಿಕೆ ಬಳಿ ಕುಸ್ತಿ ಅಖಾಡ ನಿರ್ಮಿಸಿ, ಕುಸ್ತಿ ಹಾಗೂ ಭಾರ ಎತ್ತಿ ಬಸ್ಕಿ ಹೊಡೆಯುವ ಸ್ಪರ್ಧೆ ಆಯೋಜಿಸಲಾಗುವುದು.  ಅಲ್ಲದೆ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ.  ಮಹಿಳೆಯರಿಗೆ ಏ. ೧೨ ರಂದು ಹನುಮನಹಳ್ಳಿಯಿಂದ ಮ್ಯಾರಥಾನ್ ಓಟ, ರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ತಿಳಿಸಿದರು.
ಉಚಿತ ಬಸ್ ವ್ಯವಸ್ಥೆ : ಆನೆಗೊಂದಿ ಉತ್ಸವಕ್ಕೆ ಗಂಗಾವತಿಯಿಂದ ಆನೆಗೊಂದಿಗೆ ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಆನೆಗೊಂದಿಗೆ ಉಚಿತವಾಗಿ ಪ್ರಯಾಣಿಸಲು ಸಾರ್ವಜನಿಕರಿಗೆ ೦೨ ಬಸ್‌ಗಳನ್ನು ವ್ಯವಸ್ಥೆಗೊಳಿಸಬೇಕು.  ಇದಕ್ಕಾಗಿ ಸಾರಿಗೆ ಸಂಸ್ಥೆಯೊಂದಿಗೆ ದೈನಂದಿನ ಒಪ್ಪಂದದ ಆಧಾರದ ಮೇಲೆ ಬಸ್ ಸೇವೆ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.  
     ಆನೆಗೊಂದಿ ಉತ್ಸವ ಆಚರಣೆ ಸಂಬಂಧಿಸಿದಂತೆ ರಚಿಸಲಾಗಿರುವ ೧೭ ಉಪಸಮಿತಿಗಳು ಕೈಗೊಂಡಿರುವ ಸಿದ್ಧತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು.  
     ಸಭೆಯಲ್ಲಿ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹನುಮಂತಪ್ಪ ನಾಯಕ್, ನಗರಸಭೆ ಅಧ್ಯಕ್ಷ ವೆಂಕಟೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಡಿವೈಎಸ್‌ಪಿ ವಿನ್ಸೆಂಟ್ ಶಾಂತಕುಮಾರ್, ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply