ಕನಕಗಿರಿ ಉತ್ಸವ : ೧ ಕೋಟಿ ರೂ. ವೆಚ್ಚದಲ್ಲಿ ಕನಕಗಿರಿ ಅಭಿವೃದ್ಧಿ

ಕೊಪ್ಪಳ ಜ.೧೫ ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಿರುವ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ಕನಕಗಿರಿ ಗ್ರಾಮವನ್ನು ೦೧ ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಇತರೆ ಕಾಮಗಾರಿಗಳನ್ನು ಕೂಡಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಅವರು ಹೇಳಿದರು.
  ಕನಕಗಿರಿ ಉತ್ಸವ ಆಚರಣೆ ಸಂಬಂಧ ಗಂಗಾವತಿ ತಾಲೂಕು ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಕನಕಗಿರಿ ಉತ್ಸವವನ್ನು ಬರುವ ಫೆ. ೨ ಮತ್ತು ೩ ರಂದು ಆಚರಿಸಲು ತಾತ್ಕಾಲಿಕವಾಗಿ ದಿನಾಂಕವನ್ನು ನಿಗದಿಪಡಿಸಲಾಗಿದೆ.  ಉತ್ಸವ ಆಚರಣೆಗೂ ಮುನ್ನ ಕನಕಗಿರಿ ಗ್ರಾಮದ ಪ್ರಮುಖ ರಸ್ತೆಗಳನ್ನು ಸಿ.ಸಿ. ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವುದು, ವಿವಿಧ ರಸ್ತೆಗಳ ಡಾಂಬರೀಕರಣ, ಗ್ರಾಮದ ನೈರ್ಮಲ್ಯೀಕರಣ, ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈಗಾಗಲೆ ಸುಮಾರು `೧ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ತಕ್ಷಣದಿಂದಲೇ ಕಾಮಗಾರಿಗಳನ್ನು ಯಾವುದೇ ಭೂಮಿಪೂಜೆ, ಶಂಕುಸ್ಥಾಪನೆಯಂತಹ ಕಾರ್ಯಕ್ರಮಗಳಿಗೆ ಕಾಯದೆ, ಕೂಡಲೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.  ಉತ್ಸವ ಆಚರಣೆಯಲ್ಲಿ ಯಾವುದೇ ವಯಕ್ತಿಕ ಉದ್ದೇಶವಿಲ್ಲ.  ಐತಿಹಾಸಿಕ ಮಹತ್ವವುಳ್ಳ ಕನಕಗಿರಿಯ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಚರಿಸಲು ನಿರ್ಧರಿಸಲಾಗಿದೆ.  ಈಗಾಗಲೆ ಸರ್ಕಾರ ೩೦ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ.  ಉತ್ಸವವನ್ನು ಯಶಸ್ವಿಯಾಗಿಸಲು ಸ್ಥಳೀಯರು ಸಕ್ರಿಯವಾಗಿ ಕೈಜೋಡಿಸಿ, ಸಹಕರಿಸಬೇಕು ಎಂದು ಶಾಸಕ ಶಿವರಾಜ ತಂಗಡಗಿ ಮನವಿ ಮಾಡಿಕೊಂಡರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಐತಿಹಾಸಿಕ ಕ್ಷೇತ್ರವಾಗಿರುವ ಕನಕಗಿರಿಯ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೆ ಮಾಸ್ಟರ್ ಪ್ಲಾನ್ ಅನ್ನು ತಯಾರಿಸಿ, ಮುಜರಾಯಿ ಇಲಾಖೆಗೆ ಕಳುಹಿಸಿಕೊಡಲಾಗಿದೆ.  ಮುಜರಾಯಿ ಇಲಾಖೆಯಿಂದ ಈಗಾಗಲೆ ಸಮೀಕ್ಷಾ ಕಾರ್ಯ ನಡೆದಿದ್ದು, ಇಲಾಖೆಯ ಒಪ್ಪಿಗೆ ಸಧ್ಯದಲ್ಲೇ ದೊರೆಯುವ ನಿರೀಕ್ಷೆ ಇದೆ.  ಕನಕಗಿರಿಯ ಮಹತ್ವಪೂರ್ಣ ವಾಸ್ತುಶಿಲ್ಪಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ರಕ್ಷಣೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.  ಉತ್ಸವ ಪ್ರಾರಂಭದೊಳಗಾಗಿ ಕನಕಗಿರಿಯ ಎಲ್ಲಾ ವಾರ್ಡುಗಳಿಗೂ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಪಂ.ರಾ.ಇಂ. ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಲಾಗಿದೆ.  ಉತ್ಸವದ ನೆಪದಲ್ಲಿಯಾದರೂ, ಕನಕಗಿರಿ ಗ್ರಾಮವನ್ನು ಸ್ವಚ್ಛವಾಗಿಸಲು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಚರ್ಚಿಸುವ ಸಂದರ್ಭ ಗದ್ದಲ ಉಂಟಾಗಿ, ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾದರೂ, ಜಿಲ್ಲಾಧಿಕಾರಿಗಳ ಮದ್ಯ ಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡು, ಉತ್ಸವ ಕುರಿತಂತೆ ಚರ್ಚೆ ಸಾಗಿತು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಜಿ.ಪಂ. ಸದಸ್ಯ ಗಂಗಣ್ಣ ಸಮಗಂಡಿ, ತಾ.ಪಂ. ಅಧ್ಯಕ್ಷ ಬಸವರಾಜ್, ತಾ.ಪಂ. ಸದಸ್ಯೆ ಸರ್ವಮಂಗಳ, ಹೊನ್ನೂರಸಾಬ್, ಗ್ರಾ.ಪಂ. ಅಧ್ಯಕ್ಷೆ ರಂಗಮ್ಮ ನಾಯಕ್, ಉಪಾಧ್ಯಕ್ಷ ಪ್ರಕಾಶ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error