You are here
Home > Koppal News > ಚಾರುಲತಾ ಚಿತ್ರ ವಿಮರ್ಶೆ

ಚಾರುಲತಾ ಚಿತ್ರ ವಿಮರ್ಶೆ

ಮನಸೆಳೆವ, ಹಿಡಿದಿಡುವ ಕಥಾ ಹಂದರ.
    ಕನ್ನಡದಲ್ಲಿ ಇಂಥ ಪ್ರಯೋಗಗಳಿಲ್ಲದೇ ಬಹಳ ವರ್ಷಗಳೇ ಆಗಿತ್ತು. ಅದರಲ್ಲೂ ಸಯಾಮಿ ಸೋದರಿಯರ ಕಥೆ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನ. ಥಾಯ್ ಭಾಷೆಯ ಅಲೋನ್ ಎಂಬ ಸಿನಿಮಾವನ್ನ ಕನ್ನಡಕ್ಕೆ ಇಳಿಸಿರುವ ನಿರ್ದೇಶಕ ಕುಮಾರ್ ಚಿತ್ರ ಆಚ್ಚುಕಟ್ಟಾಗಿ ಮೂಡಬರಲು ಸಾಕಷ್ಟು ಶ್ರಮ ವಹಿಸಿರುವುದು ಚಿತ್ರದ ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತದೆ.  ಕಾಮಿಡಿಗಾಗಿ ದೊಡ್ಡ ಹಾಸ್ಯ ನಟರಿಲ್ಲದಿದ್ದರೂ ಮಾಸ್ಟರ್ ಮಂಜುನಾಥಗೆ ನಗಿಸುವ ಹೊಣೆ ವಹಿಸಲಾಗಿದೆ. ಮಂಜ್ಯಾ ತಮ್ಮ ಹೊಣೆಯನ್ನ ಯಶಸ್ವಿಯಾಗಿ ನಿಭಾಯಿಸಿ ಮನಗೆಲ್ಲುತ್ತಾನೆ. ಚಿತ್ರದ ದೊಡ್ಡ ಆಚ್ಚರಿ ಎಂದರೆ ನಾಯಕಿ ಪ್ರಿಯಾಮಣಿ, ಪ್ರಿಯಾಮಣಿ ಅದು ಕೇವಲ ಪ್ರಿಯಾಮಣಿ ಮಾತ್ರ.
     ಸಿನಿಮಾದ ಎರಡನೇ ದೃಶ್ಯದಲ್ಲಿಯೇ ಕುತೂಹಲ ಕೆರಳುತ್ತದೆ. ಇದೊಂದು ದೆವ್ವದ ಸಿನಿಮಾ ಎಂದು ಪ್ರೇಕ್ಷಕ ಸೀಟಿನ ತುದಿಗೆ ಕೂಡುವಂತೆ ಶುರುವಾಗುವ ಕಥೆ ಎಲ್ಲೂ ಬೋರ್ ಹೊಡೆಸದು. ಚಾರು ಮತ್ತು ರವಿ ಜಮ್ಮುವಿನ ಶ್ರೀನಗರದಲ್ಲಿ ಮದುವೆಯಾಗದಿದ್ದರೂ ಒಂದೇ ಮನೆಯಲ್ಲಿ ವಾಸ. ಇಬ್ಬರಿಗೂ ಮೊದಲಿನಿಂದಲೂ ಲವ್. ಸಯಾಮಿಯಾಗಿದ್ದ ಚಾರು ಮತ್ತು ಲತಾ ಬೇರ್ಪಟ್ಟಾಗ ಒಬ್ಬಾಕೆ ತೀರಿಕೊಳ್ಳುತ್ತಾಳೆ. ಆಕೆಯ ಸಾವಿಗೆ ನಾನೇ ಕಾರಣಳಾದೆ ಎಂಬ ಖಿನ್ನತೆ ಚಾರುವನ್ನ ಕಾಡುತ್ತದೆ. ಮದುವೆಯಾದರೆ ಎಲ್ಲ ಸರಿ ಹೋಗುವುದು ಎಂದು ತೀರ್ಮಾನಿಸಿ ಮದುವೆಗೆ ಸಿದ್ಧತೆ ನಡೆದಿರುವಾಗಲೇ ಮಂಗಳೂರಿನಲ್ಲಿ ವಾಸವಾಗಿರುವ ಚಾರುವಿನ ತಾಯಿ ಘೋರ ದೃಶ್ಯ ಕಂಡು ಆಘತಕ್ಕೊಳಗಾಗಿ ಆಸ್ಪತ್ರೆ ಸೇರುತ್ತಾಳೆ. 
     ಇಲ್ಲಿಂದ ಕಥೆ ಶ್ರೀನಗರದಿಂದ ಮಂಗಳೂರಿಗೆ ಶಿಫ್ಟ್ ಆಗುತ್ತದೆ. ತಾಯಿಯ ಆರೈಕೆಗೆ ಬರುವ ಚಾರುವನ್ನ ಸೋದರಿಯ ನೆನಪು, ಘಟನೆಗಳು, ಕೆಲವೊಮ್ಮೆ ಕ್ರೂರ ಭಾವನೆಗಳು ಮುತ್ತಿಕೊಳ್ಳುತ್ತವೆ. ಮನೋರೋಗಿಯ ಬಳಿ ಇದೆಲ್ಲವನ್ನ ಹೇಳಿಕೊಂಡರೂ ಪ್ರಯೋಜನವಾಗುವುದಿಲ್ಲ. ಇದು ಕೇವಲ ಭ್ರಮೆ ಎನ್ನುವುದು ವೈದ್ಯರ ವಾದ. ಇಲ್ಲ ಇದು ಸೋದರಿಯ ಅತ್ಮ ನನ್ನನ್ನ ನಿಮಿಷ, ನಿಮಿಷಕ್ಕೂ ಕೊಲ್ಲುವಂತೆ ಮಾಡುತ್ತಿದೆ ಎಂಬುದು ಚಾರುವಿನ ಆಳಲು.
       ವಿರಾಮದ ನಂತರ ಮಂತ್ರವಾದಿಯಾಗಿ ಕಾಣಿಸಿಕೊಳ್ಳುವ ರವಿಶಂಕರ ಪಾತ್ರ ತೆರೆಯ ಮೇಲೆ ಬರುತ್ತಿದ್ದಂತೆ ಪ್ರೇಕ್ಷಕರು ಇವರಿಗೆ ಹಿರೋ ರೇಂಜಿಗೆ ಚಪ್ಪಾಳೆ, ಶಿಳ್ಳೆ ಹಾಕುತ್ತಾರೆ. ಅದರೆ ರವಿಶಂಕರ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡು ಮಾಯವಾಗುತ್ತಾರೆ. ಆವರ ಸಂಭಾಷನೆಯನ್ನು ಕೇಳಲೆಂದೇ ಸಿನಿಮಾ ನೋಡಲು ಬಂದವರಿಗೆ ನಿರಾಸೆಯಾಗುತ್ತದೆ. ಅದರೂ ಪ್ರಿಯಾಮಣಿ ಕ್ಲೈಮ್ಯಾಕ್ಸ್‌ನಲ್ಲಿ ಆಚ್ಚರಿ ಮೂಡಿಸುತ್ತಾರೆ. ಮುಖಭಾವ, ಸಂಭಾಷಣೆಯ ಶೈಲಿ, ಮೊದಲಿನ ಹಾಗೂ ನಂತರದ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದರೂ ಎಲ್ಲವನ್ನು ಹೆಗಲ ಮೇಲೆ ಹೊತ್ತುಕೊಂಡು ಸಮರ್ಥವಾಗಿ ನಿಭಾಯಿಸುವುದರೊಂದಿಗೆ ತನ್ನಿಷ್ಟದಂತೆ ಪ್ರೀತಿಸಿದವನ್ನ ವರಿಸುತ್ತಾಳೆ.
       ಚಾರುಲತಾ ಕೊನೆಯ ಆರ್ಧ ಗಂಟೆ ಪ್ರೇಕ್ಷಕರ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುತ್ತದೆ. ಊಹಿಸಲು ಕಷ್ಟವಾದಂಥ ಆಂತ್ಯ ಚಿತ್ರಕ್ಕಿದೆ. ಪ್ರಿಯಾಮಣಿ ಈ ಭಾಗದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಕೊಂಡು ರಂಜಿಸುತ್ತಾರೆ. ಚಾರುವನ ತಾಯಿ ಗುಣಮುಖಳಾಗಿ ಬಂದಾಗ ಆಸಲಿ ಕಥೆ ನಾಯಕನಿಗೆ ಗೊತ್ತಾಗುತ್ತದೆ. ಆ ಕಥೆ ಏನು ಎಂಬುದನ್ನ ಹೇಳಿದರೆ ಥ್ರಿಲ್ ಇರಲ್ಲ. ಯಾಕೆಂದರೆ ಇಡೀ ಸಿನಿಮಾ ನಿಂತಿರುವುದೇ ಕ್ಲೈಮ್ಯಾಕ್ಸ್‌ನ ಮೇಲೆ. ಅದನ್ನ ನೀವು ಕುಟುಂಬ ಸಮೇತರಾಗಿ ಟಾಕೀಸಿನಲ್ಲಿ ನೋಡಿದರೆ ಚೆನ್ನ.   
      ನಾಯಕನಾಗಿ ಪರಿಚಯಗೊಂಡಿರುವ ಸ್ಕಂದನ ಅಭಿನಯದ ಬಗ್ಗೆ ತಿದ್ದಿಕೊಳ್ಳುವ ಸಲಹೆ ಕೊಡುವ ಆಗತ್ಯವಿಲ್ಲ. ನಾಯಕನಾಗಿ ಮುಂದುವರೆಯುವ ಭರವಸೆಯನ್ನ ಸ್ಕಂದ ಈ ಚಿತ್ರದ ಮೂಲಕ ನೀಡಿದ್ದಾರೆ. ಅಳುವ ಸೀನ್‌ನಲ್ಲಿ ಸ್ಕಂದ ಇಷ್ಟವಾಗಲ್ಲ. ಹಾಗೆಯೇ ಕನ್ನಡಕ ತೆಗೆದಾಗಲೂ. ಸಿನಿಮಾದಲ್ಲಿ ಬೆರಳೆಣಿಕೆಯಷ್ಟು ಪಾತ್ರಗಳಿವೆ. ಪ್ರತಿ ಫ್ರೇಮ್‌ನಲ್ಲೂ ಪ್ರಿಯಾಮಣಿ ಕಾಣಿಸಿಕೊಂಡು ಎರಡೂ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸುದರ್ಶನ್ ಮಹತ್ವವಲ್ಲದ ಪಾತ್ರದಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಬಾಲನಟ ಮಾ.ಮಂಜುನಾಥ್ ಮಾತಿನಲ್ಲೇ ಮೊಳೆ ಹೋಡಿತಾನೆ. ರವಿಶಂಕರ ಆತ್ಮವನ್ನ ಬಂಧಿಸುವಲ್ಲಿ ಯಶಸ್ಸು ಕಾಣುವ ಮಂತ್ರವಾದಿಯಾಗಿ ಕಾಣಿಸಿಕೊಂಡು ಮಿಂಚಿ ಮರೆಯಾಗುತ್ತಾರೆ. ಮನೋವೈದ್ಯ ಡಾ.ಸ್ವರೂಪ ಆಟಕ್ಕುಂಟು ಲೆಕ್ಕಕ್ಕಿಲ್ಲ. 
     ಪ್ರಿಯಾಮಣಿಯಂತೆ ಚಿತ್ರದುದ್ದಕ್ಕೂ ಗಮನ ಸೆಳೆಯುವಂಥದ್ದು ಪನ್ನೀರ್‌ಸೆಲ್ವಂ ಅವರ ಛಾಯಾಗ್ರಹಣ. ಮೋಹನ್ ಕೆರೆಯವರ ಕಲಾ ನಿರ್ದೇಶನ ಗಮನ ಸೆಳೆಯುತ್ತದೆ. ಪ್ರಾಣ ಬಿಟ್ಟರೂ ಪ್ರೀತಿ ಬಿಡಲ್ಲ, ಒಂದು ಕಣ್ಣು ಹೋದ್ರೆ ಇನ್ನೊಂದು ಕಣ್ಣನ್ನೂ ಕಿತ್ತು ಹಾಕ್ತಿಯಾ, ಈ ಹುಡ್ಗೀರು ಖಾಲಿ ಗೋರಿನೂ ಬಿಡಲ್ಲ, ಖಾಲಿ ಹುಡುಗ್ರನ್ನೂ ಬಿಡಲ್ಲ ಎನ್ನುವಂಥ ಸಾಲುಗಳನ್ನ ಬರೆದಿರುವ ಯೋಗನಂದ್ ಮುದ್ದಾನ್ ಆವರ ಪೆನ್ನು ಇನ್ನೊಂದಿಷ್ಟು ಚುರುಕಾಗಿದ್ದರೆ ಚಿತ್ರಕ್ಕೆ ಮತ್ತೊಂದು ಮೈಲೇಜ್ ಸಿಗುವ ಸಾಧ್ಯತೆ ಇತ್ತು. ಸುಂದರ್ ಸಿ ಬಾಬು ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳಿಗಿಂತ ಹಿನ್ನೆಲೆ ಸಂಗೀತ ಚಿತ್ರದ ಕತೆಗೆ ಪೂರಕವಾಗಿದೆ. ಇರೋದೇ ಮೂರು ಹಾಡು ಆದರಲ್ಲಿ ಒಂದೇ ಮನೆಯ ಎರಡು ಹೃದಯ ಎಂಬ ಹಾಡು ಹಿಡಿಸುತ್ತದೆ. ನಿರ್ದೇಶಕ ಪ್ರೇಕ್ಷಕರನ್ನ ಹಿಡಿದಿಡುವುದು ಕೊನೆಯ ಅರ್ಧ ಗಂಟೆ. ನಿರ್ಮಾಪಕ ದ್ವಾರಕೀಶ್ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ಚಾರುಲತೆಯನ್ನು ನಾಲ್ಕು ಭಾಷೆಗಳಲ್ಲಿ ಸಿದ್ಧಪಡಿಸಿದ್ದಾರೆ. ಕನ್ನಡದಲ್ಲಂತು ಚಾರುಲತಾ ಗೆದ್ದಂತೆ. ಇನ್ನು ಮೂರು ಕಡೆ ಏನು ಕತೆ ಎಂಬುದನ್ನ ಕಾದು ನೋಡೋಣ.
-ಚಿತ್ರಪ್ರಿಯ ಸಂಭ್ರಮ್. 

Leave a Reply

Top