ಕುವೆಂಪು ಅವರ ಕೃತಿಗಳಲ್ಲಿ ಮಾನವೀಯತೆಯ ಸಂದೇಶವಿದೆ- ಡಾ. ತ್ಯಾಗರಾಜನ್.

ಕೊಪ್ಪಳ ಡಿ. ೨೯ (ಕ ವಾ) ರಾಷ್ಟ್ರಕವಿ ಕುವೆಂಪು ಅವರ ಬಹುತೇಕ ಕೃತಿಗಳಲ್ಲಿ ಮಾನವೀಯತೆಯ ಸಂದೇಶ ಅಡಗಿದೆ.  ಕುವೆಂಪು ಅವರ ಜನ್ಮ ದಿನಾಚರಣೆಯನ್ನು ವಿಶ್ವ ಮಾನವ ದಿನವನ್ನಾಗಿ ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್ ಅವರು ಹೇಳಿದರು.
     ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಕುಣಿಕೇರಿ ರಸ್ತೆಯಲ್ಲಿರುವ ಕುವೆಂಪು ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ವಿಶ್ವ ಮಾನವ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಇದೇ ಮೊದಲ ಬಾರಿಗೆ ವಿಶ್ವ ಮಾನವ ದಿನವನ್ನಾಗಿ ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿರುವುದು ಅರ್ಥಪೂರ್ಣವಾಗಿದೆ.  ಕುವೆಂಪು ಅವರ ಕೃತಿ ಹಾಗೂ ಕವನಗಳನ್ನು ಅವಲೋಕಿಸಿದಾಗ, ಮಾನವೀಯತೆಯ ಸಂದೇಶ   ಅಡಗಿರುವುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.  ಕುವೆಂಪು ಅವರ ಆದರ್ಶ ಹಾಗೂ ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್ ಅವರು ಹೇಳಿದರು.
      ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕುವೆಂಪು ಪ್ರೌಢಶಾಲೆಯ ಇತಿಹಾಸ ಶಿಕ್ಷಕಿ ಸುಜಾತಾ ಚಿಮ್ಮನಪಲ್ಲಿ ಅವರು,  ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿ ಬಹುತೇಕ ಪಾತ್ರಗಳು ವಾಲ್ಮೀಕಿ ಅವರ ಮೂಲ ರಾಮಾಯಣಕ್ಕಿಂತಲೂ ಹೆಚ್ಚು ಜೀವಂತಿಕೆಯ ಅನುಭವ ನೀಡುತ್ತವೆ.    ಮೂಲ ವಾಲ್ಮೀಕಿ ರಾಮಾಯಣದಲ್ಲಿದ್ದ ವಾಮ ಪಾತ್ರಗಳಿಗೆ ಇಲ್ಲಿ ಸುಂದರ ರೂಪ ಕೊಟ್ಟು ಯುಗಧರ್ಮಕ್ಕೆ ಬದಲಿಸಿದ್ದಾರೆ.  ಕುವೆಂಪು ಅವರು, ಯಾವುದೇ ಜಾತಿ, ಮತಗಳ ಪ್ರಭಾವಕ್ಕೆ ಒಳಗಾಗದೆ, ಸರ್ವ ಜನಾಂಗಕ್ಕೂ ಅನ್ವಯವಾಗುವ ರೀತಿಯಲ್ಲಿ ಉತ್ತಮ ಕೃತಿ, ಕವನಗಳನ್ನು ರಚಿಸಿ ಕವಿಋಷಿಗಳಾಗಿ ಬೆಳೆದರು.   ಕನ್ನಡದ ಕೀರ್ತಿಯನ್ನು ಸಾಹಿತ್ಯ ಲೋಕದಲ್ಲಿ ಬೆಳಗುವಂತೆ ಮಾಡಿದವರು ಕುವೆಂಪು ರವರು ಎಂದು ಬಣ್ಣಿಸಿದರು.
     ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಮಾತನಾಡಿ,ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ.  ಆದರೆ ಬೆಳೆದಂತೆಲ್ಲ ಅಲ್ಪ
ಮಾನವರಾಗುತ್ತಾರೆ.  ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ವಿದ್ಯೆಯ ಮತ್ತು
ಶಿಕ್ಷಕರ ಕರ್ತವ್ಯವಾಗಬೇಕು ಎನ್ನುವ ಮಹತ್ವದ ಸಂದೇಶವನ್ನು ಶಿಕ್ಷಕ ಬಳಗಕ್ಕೆ ಕುವೆಂಪು
ಅವರು ನೀಡಿದ್ದಾರೆ. ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ
ಕಡಿಮೆಯಾಗುತ್ತಿದೆ.  ಕುವೆಂಪು ಅವರ ಕೃತಿಗಳನ್ನು ಓದಿದಾಗ, ಕನ್ನಡ ಭಾಷೆಯ ಶ್ರೀಮಂತಿಕೆಯ
ಅರಿವು ನಮಗಾಗುತ್ತದೆ.   ಆಧುನಿಕ ಯುಗದಲ್ಲಿ ಮೊಬೈಲ್, ಸಾಮಾಜಿಕ ತಾಣಗಳ ವೀಕ್ಷಣೆಯಲ್ಲೇ
ಮಗ್ನರಾಗಿರುವ ಮಕ್ಕಳು ಪುಸ್ತಕಗಳತ್ತ ಆಸಕ್ತಿ ವಹಿಸಬೇಕು ಎಂದು ಹೇಳಿದರು.
     ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ನೋಂದಣಾಧಿಕಾರಿ ಅಶೋಕ್, ದೈಹಿಕ ಶಿಕ್ಷಣ ಅಧೀಕ್ಷಕ ಸುದರ್ಶನ್, ಪ್ರಾಚಾರ್ಯ ಶರಣಪ್ಪ, ಸರ್ವಶಿಕ್ಷಣ ಅಭಿಯಾನ ಸಮನ್ವಯಾಧಿಕಾರಿ ವೆಂಕಟೇಶ್, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್. ಪತ್ತಾರ್, ಕುವೆಂಪು ಶಿಕ್ಷಣ ಸಂಸ್ಥೆ ಮುಖ್ಯಸ್ಥ ಪರಶುರಾಮು, ಮುಖ್ಯ ಶಿಕ್ಷಕ ಕಳಕಪ್ಪ, ಶಿವಾನಂದ ಹೊದ್ಲೂರು ಉಪಸ್ಥಿತರಿದ್ದರು.  ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಅಧಿಕಾರಿಗಳು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.  ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
Please follow and like us:
error