ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ವಿಮಾ ಯೋಜನೆ ಜಾರಿಗೆ

ಅಸಂಘಟಿತ ಕಾರ್ಮಿಕ ವಲಯದ ಪೈಕಿ ಖಾಸಗಿ ವಾಹನ ಚಾಲಕರ ಸಂಖ್ಯೆಯೇ ಅಧಿಕ.  ದುಡಿಯುವ ವ್ಯಕ್ತಿ ತೊಂದರೆಗೆ ಸಿಲುಕಿದಲ್ಲಿ, ಇಡೀ ಕುಟುಂಬವೇ ಸಂಕಷ್ಟಕ್ಕೆ ಈಡಾಗಿ, ಬದುಕು ದುರ್ಬರವಾಗುತ್ತದೆ.  ವಾಹನ ಚಾಲಕರಾಗಿ ದುಡಿಯುವ ಅನೇಕರ ಕುಟುಂಬಗಳು ಈ ರೀತಿ ಸಂಕಷ್ಟಕ್ಕೆ ಸಿಲುಕಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ.  ಇನ್ನಾದರೂ ಖಾಸಗಿ ವಾಹನ ಚಾಲಕರು ಕುಟುಂಬಗಳ ಅತಂತ್ರ ಬದುಕಿನ ವ್ಯವಸ್ಥೆಗೆ ಅಂತ್ಯ ಕಾಣಿಸುವ ಉದ್ದೇಶದಿಂದ ಸರ್ಕಾರ ಖಾಸಗಿ ವಾಣಿಜ್ಯ ವಾಹನ ಚಾಲಕರಿಗಾಗಿ ಇದೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ವಿಶೇಷ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ.
ಖಾಸಗಿ ವಾಣಿಜ್ಯ ವಾಹನಗಳ ಚಾಲಕರು, ದಿನನಿತ್ಯದ ವಾಣಿಜ್ಯ ವಹಿವಾಟುಗಳಲ್ಲಿ ವಸ್ತುಗಳ ಸಾಗಣೆ ಅತಿ ಮುಖ್ಯ ಉದ್ಯಮವಾಗಿದೆ. ವಾಣಿಜ್ಯ ವಾಹನಗಳ ಚಾಲಕರಾದವರು ಸಾಮಾನು-ಸರಂಜಾಮು ಹಾಗೂ ಉತ್ಪನ್ನಗಳ ಸಾಗಣೆಯಲ್ಲಿ ಹಗಲಿರುಳೂ ವಾಹನ ನಡೆಸುವ ಕಠಿಣ ಕಾರ್ಯ ನಿಭಾಯಿಸುತ್ತಾರೆ. ಈ ಕಾರ್ಯದಲ್ಲಿದ್ದಾಗ ಅಪಘಾತ ಸಂಭವಿಸಿ ಅಂಗವಿಕಲರಾದರೆ ಇಲ್ಲವೆ ಮೃತಪಟ್ಟರೆ, ಅವರನ್ನು ನಂಬಿ ಬದುಕುವ ಕುಟುಂಬ ಅತಂತ್ರವಾಗುತ್ತದೆ.  ಇಂತಹ ಶ್ರಮದಾಯಕ ಕಾರ್ಯನಿರ್ವಹಿಸುವ ವಾಣಿಜ್ಯ ವಾಹನಗಳ ಚಾಲಕರ ಜೀವನದ ಭದ್ರತೆಗಾಗಿ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ಇತ್ತೀಚಿಗೆ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಒದಗಿಸುವ ನೂತನ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ.  
ಏನಿದು ಯೋಜನೆ? : ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಲಾರಿ ಮತ್ತು ಬಸ್ ವಾಹನ ಚಾಲಕರು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸಂಪೂರ್ಣ ದುರ್ಬಲತೆ ಅಥವಾ ಶಾಶ್ವತ ಅಥವಾ ಭಾಗಶಃ ದುರ್ಬಲತೆಗೆ  ತುತ್ತಾಗುವ ಚಾಲಕ ಹಾಗೂ ಆತನ ಕುಟುಂಬವು ಅವನ ಆದಾಯದ ನಷ್ಟದಿಂದಾಗಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.   ಅಪಘಾತಗಳಿಂದ ಸಂಕಷ್ಟಕ್ಕೆ ಸಿಲುಕುವ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವು ನೀಡುವ ರಾಜ್ಯ ಸರ್ಕಾರ ಈ ನೂತನ ವಿಮಾ ಯೋಜನೆಯನ್ನು ಘೋಷಣೆ  ಮಾಡಿ ಆದೇಶ ಹೊರಡಿಸಿದೆ. ಈ ಯೋಜನೆಯಡಿ ನೋಂದಣಿಯಾದ ಫಲಾನುಭವಿಗಳಿಗೆ ತಗಲುವ ಪ್ರೀಮಿಯಂ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ.  ಈ ಯೋಜನೆಯನ್ನು ಸರ್ಕಾರ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಅನುಷ್ಠಾನ ಮಾಡಲು ನಿರ್ಧರಿಸಿದೆ. ಮಂಡಳಿ ಆಯ್ಕೆ ಮಾಡಿರುವ ವಿಮಾ ಕಂಪನಿಯ ಮುಖಾಂತರ ವಾಣಿಜ್ಯ ವಾಹನಗಳ ಚಾಲಕರು ಮತ್ತು ಅವರ ಅವಲಂಬಿತರು ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. 
ಯೋಜನಾ ವ್ಯಾಪ್ತಿ:  ಈ ಯೋಜನೆಯು ರಾಜ್ಯದಲ್ಲಿ ಚಾಲನಾ ಪರವಾನಗಿ ಪಡೆದ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಖಾಸಗಿ ಬಸ್ ವಾಹನ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆಯಡಿ ಫಲಾನುಭವಿಯು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಈ ಯೋಜನೆ ಸಂಪೂರ್ಣವಾಗಿ ಉಚಿತವಾಗಿದ್ದು, ಸರ್ಕಾರವೇ ಪೂರ್ಣವಾಗಿ ಪ್ರೀಮಿಯಂ ಮೊತ್ತವನ್ನು ಪಾವತಿಸುವುದು ಒಂದು ವಿಶೇಷ. ಅಪಘಾತದಲ್ಲಿ ಗಾಯಗೊಂಡು ಶಾಶ್ವತ ಅಂಗ ಊನತೆಗಳಿಗೆ ಒಳಗಾದ ಚಾಲಕರಿಗೆ ವೈದ್ಯರು ನಿರ್ಧರಿಸುವ ಅಂಗ ಊನತಾ ಪ್ರಮಾಣಕ್ಕೆ ಅನುಗುಣವಾಗಿ ಉಚಿತ ಅಪಘಾತ ವಿಮೆ ಪರಿಹಾರ ನೀಡಲಾಗುವುದು.   ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯಕ್ಕಾಗಿ ವಿಮಾ ಕಂಪನಿಯಾದ ಮೆ: ರಾಯಲ್ ಸುಂದರಂ ಅಲೈಯಾನ್ಸ್ ಇನ್ಸೂರೆನ್ಸ್ ಕಂಪನಿಗೆ ವಹಿಸಿದ್ದು ಈಗಾಗಲೆ ಫಲಾನುಭವಿಗಳ ನೋಂದಣಿ ಕಾರ್ಯ ರಾಜ್ಯಾದ್ಯಂತ ನಡೆಯುತ್ತಿದೆ.
ಯೋಜನೆಯ ಸೌಲಭ್ಯ : ಈ ಯೋಜನೆಯಡಿ ಪರಿಹಾರ ಐದು ಸಂದರ್ಭಗಳಲ್ಲಿ ಲಭ್ಯವಾಗುತ್ತದೆ. ಅಪಘಾತದಿಂದ ಚಾಲಕರು ಪ್ರಾಣಾಪಾಯಕ್ಕೆ ತುತ್ತಾದಾಗ,  ಅಪಘಾತದಿಂದ ಚಾಲಕರು ಶಾಶ್ವತ ದುರ್ಬಲತೆ ಹೊಂದಿದಾಗ, ಹಾಗೂ ಅಪಘಾತದಿಂದ ಅಂಗಗಳು ಹಾನಿಗೊಳಗಾದಾಗ. ಇದಲ್ಲದೆ ಚಾಲಕರು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಅಪಘಾತಕ್ಕೀಡಾಗಿ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಹಾಗೂ ತಾತ್ಕಾಲಿಕ ದುರ್ಬಲತೆ ಹೊಂದಿದಾಗಲೂ ಸಹ ಯೋಜನೆಯ ಸೌಲಭ್ಯ ಲಭ್ಯವಾಗುತ್ತದೆ.
ಅಪಘಾತ ವಿಮೆ ವಿವರ : ಈ ಯೋಜನೆ ಖಾಸಗಿ ವಾಣಿಜ್ಯ ವಾಹನಗಳ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ಮುಖ್ಯವಾದುದು. ಈ ವಾಹನಗಳ ಚಾಲಕರು ಚಾಲ್ತಿಯಲ್ಲಿರುವ ವಾಣಿಜ್ಯ ವಾಹನ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಚಾಲಕರು ಒಂದು ಬಾರಿ ಮಾತ್ರ ರೂ.೨೫/- ನೋಂದಣಿ ಶುಲ್ಕವನ್ನು ಪಾವತಿಸಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಯೋಜನೆಗೆ ವಯಸ್ಸಿನ ಮಿತಿ ೨೦ ರಿಂದ ೭೦ ವರ್ಷಗಳಿದ್ದು, ವಿಮಾ ಮೊತ್ತ ಗರಿಷ್ಠ ರೂ.೨ ಲಕ್ಷಗಳವರೆಗೆ ಲಭ್ಯವಿರುತ್ತದೆ. ಈ ಯೋಜನೆಯಡಿ ನೋಂದಾಯಿತರಾದ ಚಾಲಕರು ಮರಣ ಹೊಂದಿದಲ್ಲಿ ಮೃತರ ನಾಮನಿರ್ದೇಶಿತರು ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. 
ನೊಂದಣಿ ಕೇಂದ್ರಗಳು : ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಗೆ ವಾಹನ ಚಾಲಕರು ನೋಂದಣಿ ಮಾಡಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೆಮ್ಮದಿ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ.  ಇಂತಹ ನೆಮ್ಮದಿ ಕೇಂದ್ರಗಳ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆಯ ವಿವರವನ್ನು ನೀಡಲಾಗಿದೆ.  ಕೊಪ್ಪಳ ತಹಶೀಲ್ ಆಫೀಸ್ ನೆಮ್ಮದಿ ಕೇಂದ್ರದ ಯಮನೂರಪ್ಪ ಆಪರೇಟರ್ ಮೊ.ಸಂಖ್ಯೆ: ೯೮೪೫೭೧೧೯೩೭, ಯಲಬುರ್ಗಾ ಬಸ್ ನಿಲ್ದಾಣದ ಹತ್ತಿರದ ನೆಮ್ಮದಿ ಕೇಂದ್ರದ ಸುರೇಶ ನರಾಲಿ ಮೊ.ಸಂಖ್ಯೆ: ೯೬೬೩೨೨೨೮೭೦, ಕುಷ್ಟಗಿ ಬಸ್ ನಿಲ್ದಾಣದ ಎದುರು ನೆಮ್ಮದಿ ಕೇಂದ್ರದ ಲೋಹಿತ್ ಐಲಿ ಆಪರೇಟರ್ ಮೊ.ಸಂಖ್ಯೆ: ೯೭೪೦೯೬೨೨೯೧, ಗಂಗಾವತಿಯ ತಹಶೀಲ್ದಾರ ಆಫೀಸ್ ಹತ್ತಿರದ ನೆಮ್ಮದಿ ಕೇಂದ್ರದ ರಾಘವೇಂದ್ರ ಆಪರೇಟರ್ ಮೊ.ಸಂಖ್ಯೆ: ೭೬೭೬೨೩೬೪೫೩, ಕಾರಟಗಿ ಉಪತಹಶೀಲ್ದಾರ್ ಹತ್ತಿರದ ನೆಮ್ಮದಿ ಕೇಂದ್ರದ ಪಂಪಣ್ಣ ಆಪರೇಟರ್ ಮೊ.ಸಂಖ್ಯೆ: ೯೯೦೨೪೧೪೫೨೧.  ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಗುರುಮೂರ್ತಿ ಮೊ.ಸಂಖ್ಯೆ: ೮೮೬೧೩೦೮೮೩೩ ಅಲ್ಲದೇ ಜಿಲ್ಲೆಯಲ್ಲಿನ ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ನೋಂದಣಿಗೆ ಬೇಕಾದ ದಾಖಲೆಗಳು : ಅರ್ಹ ವಾಹನ ಚಾಲಕರು ನೋಂದಣಿ ಮಾಡಿಸುವಾಗ, ನೋಂದಣಿ ಶುಲ್ಕ ರೂ. ೨೫ ಹಾಗೂ ಅರ್ಜಿ ನಮೂನೆ ಶುಲ್ಕ ರೂ. ೦೧ ಸೇರಿದಂತೆ  ಒಟ್ಟು ರೂ. ೨೬ ಗಳನ್ನು ಪಾವತಿಸಬೇಕು.  ಚಾಲನಾ ಪತ್ರ, ಬ್ಯಾಡ್ಜ್, ವಿಳಾಸ ದೃಢೀಕರಣ ದಾಖಲೆ ಹಾಗೂ ಒಂದು ಕಲರ್ ಫೋಟೋ ಅಗತ್ಯವಾಗಿದೆ.
ವಿವರಗಳಿಗಾಗಿ ಯಾರನ್ನು ಸಂಪರ್ಕಿಸಬೇಕು : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕಛೇರಿ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-೨೯ ದೂರವಾಣಿ ಸಂಖ್ಯೆ: ೦೮೦-೨೬೬೩೧೫೮೩/೫೮೪, ಮೈಶ್ಯೂರ್ ಐಟಿ ಸಲ್ಯೂಷನ್ಸ್ ಪ್ರೈ.ಲಿ. ಬೆಂಗಳೂರು ದೂರವಾಣಿ ಸಂಖ್ಯೆ: ೮೮೬೧೩೦೮೮೭೯/೮೦/೮೧.  ಅಥವಾ ಕೊಪ್ಪಳದಲ್ಲಿ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಕೊಪ್ಪಳ ೦೮೫೩೯-೨೨೨೫೯೦, ಮೊ.ಸಂಖ್ಯೆ: ೯೭೪೦೭೮೪೧೬೩ ಇವರನ್ನು ಸಂಪರ್ಕಿಸಬಹುದಾಗಿದೆ.
ಪರಿಹಾರ ಪಡೆಯುವ ಬಗೆ : ವಿಮಾ ಮೊತ್ತವನ್ನು ಕ್ಲೇಮ್ ಮಾಡಲು ಅಪಘಾತ ಸಂಭವಿಸಿದ ಆರು ತಿಂಗಳ ಒಳಗೆ ವಿಮಾ ಕಂಪನಿಗೆ ಫಲಾನುಭವಿ ಅಥವಾ ನಾಮನಿರ್ದೇಶಿತರು ಅರ್ಜಿ ಸಲ್ಲಿಸಬೇಕು. ಅಪಘಾತದಿಂದ ದುರ್ಬಲತೆ ಉಂಟಾದಲ್ಲಿ ಕ್ಲೇಮ್ ಅರ್ಜಿಯ ಜತೆಗೆ ಚಾಲನಾ ಪರವಾನಗಿ ಹಾಗೂ ಬ್ಯಾಡ್ಜ್, ಪ್ರಥಮ ಮಾಹಿತಿ ವರದಿ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಬಿಲ್‌ಗಳನ್ನು ಲಗತ್ತಿಸಬೇಕು, ಫಲಾನುಭವಿಯ ನಾಮನಿರ್ದೇಶಿತರು ಕ್ಲೇಮ್ ಅರ್ಜಿಯ ಜತೆಗೆ ಮರಣ ಪ್ರಮಾಣ ಪತ್ರ, ಮರಣೋತ್ತರ ಪರೀಕ್ಷಾ ವರದಿ, ಪ್ರಥಮ ಮಾಹಿತಿ ವರದಿ ಹಾಗೂ ಚಾಲನಾ ಪರವಾನಗಿಯನ್ನು ಅರ್ಜಿಯ ಜತೆಗೆ ಸಲ್ಲಿಸಬೇಕು. ಕ್ಲೇಮ್ ಅರ್ಜಿಗಳು ಹಾಗೂ ದೂರುಗಳಿಗೆ ಸಂಬಂಧಿಸಿದಂತೆ  ರಾಯಲ್ ಸುಂದರಂ ಅಲೈಯನ್ಸ್ ಇನ್ಸೂರೆನ್ಸ್ ಕಂಪನಿ ಲಿ., ನಂ.೧೮೬/೭, ರಾಘವೇಂದ್ರ ಕಾಪ್ಲೇಕ್ಸ್, ೧ನೇ ಅಡ್ಡರಸ್ತೆ, ವಿಲ್ಸನ್ ಗಾರ್ಡನ್, ಹೊಸೂರು ಮುಖ್ಯರಸ್ತೆ ಬೆಂಗಳೂರು-೫೬೦೦೨೭, ದೂರವಾಣಿ ಸಂಖ್ಯೆ: ೦೮೦-೪೨೨೨೭೩೭೩ ಅಥವಾ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಕಛೇರಿ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-೨೯ ದೂರವಾಣಿ ಸಂಖ್ಯೆ: ೦೮೦-೨೬೬೩೧೫೮೩/೫೮೪, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ. 
                                                     –             ತುಕಾರಾಂ ರಾವ್ ಬಿ.ವಿ.
                                                                     ಜಿಲ್ಲಾ ವಾರ್ತಾಧಿಕಾರಿ,
                                                                           ಕೊಪ್ಪಳ.
Please follow and like us:
error