ಸೆ.೦೮ ರಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

 ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿಯಿಂದ ಇದೇ ಸೆ.೦೮ ರಿಂದ ೧೪ ರವರೆಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹ ಆಚರಿಸಲಾಗುವುದು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ವೈ.ದಾಸರ್ ಅವರು ತಿಳಿಸಿದ್ದಾರೆ. 
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ತಾಲ್ಲೂಕು, ಗ್ರಾಮ ಪಂಚಾಯತ ಮಟ್ಟದಲ್ಲಿ ಸೆ.೦೮ ರಂದು ಬೆಳಿಗ್ಗೆ ೯.೦೦ ಗಂಟೆಗೆ ಸಾಕ್ಷರತಾ ಧ್ವಜಾರೋಹಣ ಮತ್ತು ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸುವುದರ ಮೂಲಕ ಕಲಿಕಾ ವಾತಾವರಣ ಮಾಡುವುದಾಗಿದೆ. ಹಾಗೂ ಎಲ್ಲಾ ಜನಪ್ರತಿನಿಧಿಗಳನ್ನು, ಗ್ರಾಮಸ್ಥರನ್ನು, ನವಸಾಕ್ಷರರನ್ನು, ಶಿಕ್ಷಣ ಆಸಕ್ತರನ್ನು ಆಹ್ವಾನಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವುದು ಹಾಗೂ ಸೆ.೦೮ ರಿಂದ ಸೆ.೧೪ ರವರೆಗೆ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತಿ ಮಟ್ಟದ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರಗೊಳಿಸಿ ಆಚರಿಸುವುದು. ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಂದೊಂದು ದಿನ ಒಂದೊಂದು ಗ್ರಾಮಗಳಲ್ಲಿ ಸಾಕ್ಷರತಾ ಪ್ರಭಾತ ಫೇರಿ ಮಾಡಿ ಸಮಾರಂಭ ಏರ್ಪಡಿಸಲು ಪ್ರೇರಕರು ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮ ರೂಪಿಸುವುದು.
ಕಾರ್ಯಕ್ರಮಗಳ ವಿವರ : ಸೆ.೦೮ ರಂದು ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನದ ಗ್ರಾಮದಲ್ಲಿ ಸಾಕ್ಷರ ಮೆರವಣಿಗೆ ಮಾಡಿ ಲೋಕ ಶಿಕ್ಷಣ ಕೇಂದ್ರದಲ್ಲಿ ಬೆಳಿಗ್ಗೆ ೯ ಗಂಟೆಗೆ ಸಾಕ್ಷರತಾ ಧ್ವಜಾರೋಹಣ ಮತ್ತು ಸಮಾರಂಭ ಕಾರ್ಯಕ್ರಮ ಏರ್ಪಡಿಸುವುದು, ಸೆ.೦೯ ರಂದು ಸಾಕ್ಷರ ವಿಚಾರ ಸಂಕಿರಣ/ಕಲಿಕಾರ್ಥಿಗಳ ಓದು-ಬರಹ ಸ್ಪರ್ಧೆ ಏರ್ಪಡಿಸುವುದು, ಸೆ.೧೦ ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಗೀತೆಗಳು, ಭಕ್ತಿ ಗೀತೆಗಳು, ಗಾದೆಗಳು, ಒಗಟುಗಳು ಇತ್ಯಾದಿ ಕುರಿತು ಸ್ಪರ್ಧೆಗಳನ್ನು ಏರ್ಪಡಿಸುವುದು, ಸೆ.೧೧ ರಂದು ಕಲಿಕಾರ್ಥಿಗಳು ಮತ್ತು ನವಸಾಕ್ಷರರಿಂದ ರಂಗೋಲಿ ಸ್ಪರ್ಧೆ ಏರ್ಪಡಿಸುವುದು, ಸೆ.೧೨ ರಂದು ಕಲಿಕಾ ಕೇಂದ್ರಗಳ ಹಂತದಲ್ಲಿ ಕಲಿಕಾರ್ಥಿಗಳಿಗಾಗಿ ಸಾಕ್ಷರ ಭಾಷಣ, ಸಂಪನ್ಮೂಲ ವ್ಯಕ್ತಿಗಳಿಂದ ಶೌಚಾಲಯ ಅರಿವು ಕುರಿತು ಮಾಹಿತಿ, ಸೆ.೧೩ ರಂದು ನವಸಾಕ್ಷರರಿಗೆ ಸಾಕ್ಷರ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು ಹಾಗೂ ಸೆ.೧೪ ರಂದು ಸಮಾರೋಪ ಸಮಾರಂಭವನ್ನು ಗ್ರಾಮ ಪಂಚಾಯತ ಲೋಕ ಶಿಕ್ಷಣ ಕೇಂದ್ರಗಳಲ್ಲಿ ನಡೆಸಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ವೈ.ದಾಸರ್   ತಿಳಿಸಿದ್ದಾರೆ.
Please follow and like us:
error