fbpx

ಬಿಯರ್ ಕ್ಯಾನ್ ಮೇಲೆ ಗಾಂಧಿ ಚಿತ್ರ: ಕಂಪೆನಿ ವಿರುದ್ಧ ಕೋರ್ಟ್ ದಾವೆ

ಹೈದರಾಬಾದ್/ವಾಷಿಂಗ್ಟನ್, ಜ.4: ಅಮೆರಿಕದ ಕಂಪೆನಿಯೊಂದರ ಬಿಯರ್ ಉತ್ಪನ್ನದ ಕ್ಯಾನ್‌ಗಳ ಮೇಲೆ ಮಹಾತ್ಮ ಗಾಂಧೀಜಿಯವರ ಚಿತ್ರ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ರಾಷ್ಟ್ರಪಿತನಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹೈದರಾಬಾದ್‌ನ ನ್ಯಾಯಾಲಯದಲ್ಲಿ ದಾವೆ ಅರ್ಜಿ ಸಲ್ಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕನೆಕ್ಟ್‌ಕಟ್ ಮೂಲದ ನ್ಯೂ ಇಂಗ್ಲೆಂಡ್ ಬ್ರೂಯಿಂಗ್ ಕಂಪೆನಿಯು ಸ್ಥಳೀಯರ ಕ್ಷಮಾಪಣೆ ಕೋರಿದೆ. ಗಾಂಧೀಜಿಯವರ ಮೊಮ್ಮಗ ಮತ್ತು ಮರಿಮೊಮ್ಮಗಳು ನಮ್ಮ ಕಂಪೆನಿಯ ಉತ್ಪನ್ನಗಳ ಬಗ್ಗೆ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಂತಿದೂತನ ಗೌರವಾರ್ಥವಾಗಿ ಈ ಕ್ರಮಕೈಗೊಂಡಿರುವುದಾಗಿ ಕಂಪೆನಿಯು ಸ್ಪಷ್ಟೀಕರಣ ನೀಡಿದೆ.
‘ಗಾಂಧಿ-ಬೊಟ್’ ಎಂಬುದು ಕಂಪೆನಿಯ ಬಿಯರ್ ಉತ್ಪನ್ನದ ಹೆಸರಾಗಿದೆ. ಈ ಸಂಬಂಧವಾಗಿ ವಕೀಲರೊಬ್ಬರು ಸೈಬರಾಬಾದ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆ ಇದೆ.
ಈ ಮಧ್ಯೆ, ಕಂಪೆನಿಯ ಪಾಲುದಾರ ಮ್ಯಾಟ್ ವೆಸ್ಟ್‌ಫಾಲ್ ಎಂಬವರು ಈ ಬಗ್ಗೆ ಕ್ಷಮೆ ಕೋರಿದ್ದು, ಭಾರತೀಯರ ಭಾವನೆಗಳಿಗೆ ನೋವನ್ನುಂಟು ಮಾಡುವ ಉದ್ದೇಶ ತಮಗಿಲ್ಲ ಎಂದಿದ್ದಾರೆ.

Please follow and like us:
error

Leave a Reply

error: Content is protected !!