You are here
Home > Koppal News > ಪುನೀತ್ ಹೇಳ್ತಾರೆ ಮತದಾನ ಮಾಡಿ ನಿಮ್ಮ ಪವರ್ ತೋರಿಸಿ

ಪುನೀತ್ ಹೇಳ್ತಾರೆ ಮತದಾನ ಮಾಡಿ ನಿಮ್ಮ ಪವರ್ ತೋರಿಸಿ


     ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಮೋಹಕ ನಟಿ ಐಂದ್ರಿತಾ ರೈ, ಅಪ್ರತಿಮ ದೇಶಭಕ್ತ, ಅಣು ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹೀಗೆ ಅನೇಕ ಖ್ಯಾತನಾಮರು ಇದೇ ವಿಧಾನಸಭೆ ಚುನಾವಣೆಗೆ ಮೇ. ೦೫ ರಂದು ಎಲ್ಲರೂ ತಪ್ಪದೆ ಮತದಾನ ಮಾಡಿ, ಉಳಿದವರನ್ನೂ ಮತದಾನಕ್ಕೆ ಕರೆತನ್ನಿ ಎಂದು ಕೊಪ್ಪಳ ಜಿಲ್ಲೆಯಲ್ಲಿ 
ಮತದಾರರಿಗೆ ಮನವಿ ಮಾಡುತ್ತಿದ್ದಾರೆ.  ಹೀಗೆಂದ ಮಾತ್ರಕ್ಕೆ ಈ ಎಲ್ಲ ಖ್ಯಾತನಾಮರು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದಾರೆ ಎಂದಲ್ಲ.  ಇದು ಚುನಾವಣಾ ಆಯೋಗವು ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಹೊರತರಲಾಗಿರುವ ಪ್ರಚಾರ ಫಲಕಗಳ ಮೇಲೆ ರಾರಾಜಿಸಿ, ಸಾರ್ವಜನಿಕರಿಗೆ ಮತದಾನಕ್ಕೆ ಪ್ರೇರೇಪಣೆ ನೀಡುತ್ತಿರುವುದಾಗಿದೆ.  ರಾಜ್ಯದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮತದಾನಕ್ಕೆ ಸಾರ್ವಜನಿಕರಲ್ಲಿ ಉತ್ಸಾಹ ಮೂಡಿಸಲು ಚುನಾವಣಾ ಆಯೋಗ ಖ್ಯಾತ ಕಲಾವಿದರು, ಕ್ರೀಡಾ ಪಟುಗಳು ಹಾಗೂ ಡಾ. ಅಬ್ದುಲ್ ಕಲಾಂ ರಂತಹ ಅಪ್ರತಿಮ ದೇಶಭಕ್ತ, ಹಿರಿಯ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿಗಳನ್ನು ಮತದಾರರ ಜಾಗೃತಿಗಾಗಿ ಬಳಸಿಕೊಳ್ಳಲಾಗಿದೆ.


     ಹಿರಿಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ‘ನಿಮ್ಮ ಆಯ್ಕೆ ಸೂಕ್ತವಾಗಿರಲಿ, ಯೋಚಿಸಿ ಮತ ಚಲಾಯಿಸಿ’, ಆಮಿಷಕ್ಕೆ ಒಳಗಾಗದಿರಿ ಎನ್ನುತ್ತಿರುವ ಫಲಕ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಾರಾಜಿಸುತ್ತ ಎಲ್ಲರ ಗಮನ ಸೆಳೆಯುತ್ತಿದೆ.  ಖ್ಯಾತ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಾನೂ ಓಟ್ ಮಾಡುತ್ತೇನೆ, ನೀವು ತಪ್ಪದೆ ಓಟ್ ಮಾಡಿ, ನಿಮ್ಮ ಪವರ್ ತೋರಿಸಿ ಎಂದು ಮೋಹಕ ನಗೆ ಬೀರುತ್ತಿರುವ ಫಲಕ ಇದೀಗ ಕೊಪ್ಪಳ ಜಿಲ್ಲೆಯ ವಿವಿಧೆಡೆ ಯುವಜನರನ್ನು ತನ್ನತ್ತ ಸೆಳೆಯುತ್ತಿದೆ.  ಕನ್ನಡ ಚಲನಚಿತ್ರ ರಂಗದ ಮೋಹಕ ನಟಿ ಐಂದ್ರಿತಾ ರೈ, ನಿಮ್ಮ ಅಮೂಲ್ಯ ಮತ ಚಲಾಯಿಸಿ, ಮತದಾನ ನಿಮ್ಮ ಹಕ್ಕು, ತಪ್ಪದೆ ಮತದಾನ ಮಾಡಿ ಎನ್ನುವ ಆಕರ್ಷಕ ಫಲಕ ಕೊಪ್ಪಳದ ತಹಸಿಲ್ದಾರರ ಕಚೇರಿ ಎದುರುಗಡೆ ಪ್ರತಿಯೊಬ್ಬರ ಗಮನವನ್ನು ತನ್ನಡೆ ಸೆಳೆಯುತ್ತಿದೆ.  ಒಲಂಪಿಕ್ ಪದಕದೊಂದಿಗೆ ಗೆಲುವಿನ ನಗೆ ಬೀರುತ್ತ ಖ್ಯಾತ ಬ್ಯಾಂಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ‘ನನ್ನದು ನಿರ್ಭೀತಿಯ ಆಟ, ನೀವೂ ನಿರ್ಭಯರಾಗಿ ಮತ ಚಲಾಯಿಸಿ ಎನ್ನುತ್ತ ಯುವಜನರಿಗೆ ಸ್ಫೂರ್ತಿಯ ಸೆಲೆಯಂತೆ ಜಿಲ್ಲೆಯ ವಿವಿಧೆಡೆ ಫಲಕಗಳಲ್ಲಿ ಯುವಜನರನ್ನು ಮತದಾನಕ್ಕೆ ಪ್ರೇರೇಪಿಸುತ್ತಿದ್ದಾರೆ.  ಇನ್ನೋರ್ವ ಒಲಂಪಿಕ್ ಪದಕ ವಿಜೇತೆ ಬಾಕ್ಸಿಂಗ್ ಮಹಿಳಾ ಆಟಗಾರ್ತಿ ಮೇರಿ ಕೋಂ ಅವರೂ ಸಹ ಮತದಾರರ ಜಾಗೃತಿಗಾಗಿ ಫಲಕಗಳಲ್ಲಿ ರಾರಾಜಿಸುತ್ತಿದ್ದಾರೆ.  ಯುವಶಕ್ತಿ-ಜನಶಕ್ತಿ, ಓಟ್ ಮಾಡುವುದು, ನಿಮ್ಮ ರೈಟ್ ಚಾಯ್ಸ್ ಆಗಲಿ, ತಪ್ಪದೆ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಎನ್ನುತ್ತಿರುವ ಯುವಜನರ ಸಮೂಹ ಮನವಿ ಮಾಡುತ್ತಿರುವ ಫಲಕಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಿದ್ದು, ಯುವ ಸಮೂಹವನ್ನು ಮತದಾನಕ್ಕೆ ಆಹ್ವಾನ ನೀಡುವಂತಿದೆ.  ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮತದಾರರ ಜಾಗೃತಿಗೆ ಯುವಜನರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧನೆ, ಮ್ಯಾರಥಾನ್ ಓಟ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೆ ಯುವಜನತೆ, ವಿದ್ಯಾರ್ಥಿ ಸಮೂಹ, ಸಾರ್ವಜನಿಕರ ಸ್ಪಂದನೆ ಅತ್ಯುತ್ತಮವಾಗಿದೆ.  ಈ ಎಲ್ಲ ಪ್ರಯತ್ನಗಳ ಫಲಿತಾಂಶ ಮಾತ್ರ ಸಿಗುವುದು ಮೇ. ೦೫ ರಂದು ಸಂಜೆಯ ವೇಳೆಗೆ.  ಜಿಲ್ಲೆಯಲ್ಲಿ ಎಲ್ಲ ಮತದಾರರು ತಪ್ಪದೆ ತಮ್ಮ ಮತದಾನ ಚಲಾಯಿಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಳಗೊಂಡಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾ ಆಡಳಿತದ ಶ್ರಮ ಸಾರ್ಥಕವಾಗಲಿದೆ.

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೇಳ್ತಾರೆ ‘ಮತದಾನ ಮಾಡಿ ನಿಮ್ಮ ಪವರ್ ತೋರಿಸಿ’ ಅಂತ. ಕನ್ನಡ ಚಿತ್ರರಂಗದ ಇನ್ನೋರ್ವ ಮೋಹಕ ನಟಿ ಐಂದ್ರಿತಾ ರೈ ಹೇಳ್ತಾರೆ ‘ನಿಮ್ಮ ಅಮೂಲ್ಯ ಮತ ಚಲಾಯಿಸಿ’ ಅಂತ.

Leave a Reply

Top