ತಂಬಾಕು ಉತ್ಪನ್ನಗಳು ಅನಾರೊಗ್ಯಕ್ಕೆ ರಹದಾರಿ.

ಬಹುಪಾಲು ಜನರಿಗೆ ತಂಬಾಕು ಸೇವನೆಯಿಂದ ಅಪಾಯ ಎಂದು ತಿಳಿದಿದ್ದರೂ, ಅದು ಎಷ್ಟರ ಮಟ್ಟಿಗೆ ಹಾನಿಕಾರ ಮತ್ತು ಅದರ ಕಾರಣಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲವಾಗಿದೆ.  ಇದರಿಂದ ತಂಬಾಕು ಉತ್ಪನ್ನಗಳು ಜನರ ಅನಾರೋಗ್ಯಕ್ಕೆ ರಹದಾರಿಯಾಗಿ ಪರಿಣಮಿಸಿವೆ.
  ತಂಬಾಕು ಸಂಸ್ಥೆಗಳು ಆಕರ್ಷಕ ಪ್ರಚಾರದ ಮುಖಾಂತರ ಗ್ರಾಹಕರಿಗೆ ತಂಬಾಕು ಸೇವನೆಯಿಂದಾಗಿ ಆರೋಗ್ಯದ ಮೇಲಾಗುವ ಪರಿಣಾಮದ ಕಟು ವಾಸ್ತವವನ್ನು ಮುಚ್ಚಿಟ್ಟು ದಿಕ್ಕು ತಪ್ಪಿಸುತ್ತಿವೆ.  ತಂಬಾಕು ಸೇವನೆಯಿಂದ ಆಗುವ ಹಾನಿಗಳ ಬಗ್ಗೆ ಚಿತ್ರಗಳ ಸಹಿತ ಇರುವ ಎಚ್ಚರಿಕೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ತಂಬಾಕು ಸೇವನೆಯನ್ನು ತ್ಯಜಿಸುವ ಅಥವಾ ಕಡಿಮೆ ಮಾಡುವ ಮೂಲಕ ಅದು ಮನೋವೃತ್ತಿಯನ್ನು ಬದಲಾಯಿಸುವ ಪ್ರೇರಣಾ ಶಕ್ತಿಯನ್ನು ಹೊಂದಿವೆ. 
  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾಲಯಗಳ ಸಚಿವಾಲಯವು ೨೦೦೮ರ ಮೇ.೩೦ ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ ಹಾಗೂ ರಾಜ್ಯಾದ್ಯಂತ ೨೦೦೮ ರ ಅಕ್ಟೋಬರ್.೦೨ ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರ ತಿಳುವಳಿಕೆಗಾಗಿ ಹೋಟೆಲ್, ರೆಸ್ಟೋರೆಂಟ್, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಚಿತ್ರಮಂದಿರಗಳಲ್ಲಿ ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಆವರಣ ಸೇರಿ ಶಾಲಾ ಕಾಲೇಜುಗಳ ಆವರಣ, ಸಾರ್ವಜನಿಕ ಗ್ರಂಥಾಲಯಗಳು ಮತ್ತು ಅಂಚೆ ಮತ್ತು ಆಡಳಿತ ಕಛೇರಿಗಳಲ್ಲಿ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕಾಯ್ದೆಯಡಿ ನಿರ್ಬಂಧನೆಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ೨೦೦ ರೂ. ದಂಡ ಹಾಗೂ ಜೈಲು ವಾಸ ವಿಧಿಸುವ ನಿಯಮವಿದೆ. 
  ತಂಬಾಕು ಹಾಗೂ ಧೂಮಪಾನ ಸೇವನೆ ದುಷ್ಪರಿಣಾಮಗಳ ಸಂಕೇತವಾಗಿದ್ದು, ಇವುಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳು, ಮನುಷ್ಯನನ್ನು ಕ್ಯಾನ್ಸರ್ ರೋಗಕ್ಕೀಡು ಮಾಡುತ್ತವೆ. ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಜಾಗತೀಕವಾಗಿ ಪ್ರತಿವರ್ಷ ೫.೪ ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಪ್ರತಿವರ್ಷ ೦೮ ರಿಂದ ೦೯ ಲಕ್ಷ ಭಾರತೀಯರು ತಂಬಾಕು ಸಂಬಂಧಿ ರೋಗಗಳ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ ವಿಶ್ವದಲ್ಲಿ ಅತಿ ಹೆಚ್ಚು ಸಂಖ್ಯೆಯ ಬಾಯಿ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಕಂಡು ಬಂದಿವೆ. ಈ ಬಾಯಿ ಕಾನ್ಸರ್ ಕಾರಣಗಳು  ಶೇ.೯೦ ರಷ್ಟು ತಂಬಾಕು ಸೇವನೆಯಿಂದ ಹುಟ್ಟಿಕೊಳ್ಳುತ್ತವೆ. ಭಾರತವೊಂದರಲ್ಲಿಯೇ ಧೂಮಪಾನದ ಕಾರಣದಿಂದಾಗಿ ಪ್ರತಿವರ್ಷ ೧೦ ಲಕ್ಷ ಜನ ಸಾವಿಗೀಡಾಗುತ್ತಿದ್ದು, ಇದರಲ್ಲಿ ಶೇಕಡಾ ೭೦ ರಷ್ಟು ಜನ ೩೦ ರಿಂದ ೬೦ ವರ್ಷದೊಳಗಿನವರಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುವವರ ಪೈಕಿ ಶೇ.೮೦ ರಷ್ಟು ಮಂದಿ ಗ್ರಾಮೀಣ ಭಾಗದವರು ಎಂಬುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ದೇಶದಲ್ಲಿ ಹೆಚ್.ಐ.ವಿ, ಮಲೇರಿಯಾ, ಕ್ಷಯರೋಗಗಳಿಂದ ಉಂಟಾಗುವ ಮರಣ ಪ್ರಮಾಣಕ್ಕಿಂತ ತಂಬಾಕು ಸೇವನೆಯಿಂದ ಉಂಟಾಗುವ ಆನಾರೋಗ್ಯದ ಕಾರಣವಾಗಿ ಬರುವ ಮರಣವು ಹೆಚ್ಚಾಗಿರುವುದು ವಿಪರ್ಯಾಸ.  
ತಂಬಾಕು ಸೇವನೆಯ ದುಷ್ಪರಿಣಾಮಗಳು : ತಂಬಾಕು ಸೇವನೆಯಿಂದ ಹೃದ್ರೋಗ, ಶ್ವಾಸಕೋಶದ ಖಾಯಿಲೆಗಳು, ದೀರ್ಘಕಾಲಿಕ ಶ್ವಾಸಕೋಶದ ಅಡಚಣೆಯ ಖಾಯಿಲೆ, ಕಡಿಮೆ ತೂಕದ ಮಗುವಿನ ಜನನ, ಮೆದುಳಿನ ಸಂಕೋಚನ, ಅಲ್ಜೈಮರ್ ಖಾಯಿಲೆ, ಕುರುಡುತನ, ನಾಳೀಯ ಬಾಹ್ಯಾವರ್ಣದ ಖಾಯಿಲೆ, ಬ್ರಾಂಕೈಟಿಸ್, ಇಂಫಿಸಿಮಾ, ಲಕ್ಷಾ(ಪಾರ್ಶ್ವವಾಯು), ನೆನಪಿ ಶಕ್ತಿ ಕುಂದುವುದು, ಜ್ಞಾನಗ್ರಹಣದ ಕಾರ್ಯಹೀನತೆಯಂತಹ ಖಾಯಿಲೆಗಳು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಸುವಿಕೆಯಿಂದ ಸಂಭವಿಸುತ್ತವೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರವು ತಂಬಾಕಿನ ನಿಯಂತ್ರಣಕ್ಕಾಗಿ ಸೀಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು (ಅಔಖಿPಂ) ಜಾರಿಗೆ ತಂದಿದೆ.  ಈ ಕಾಯ್ದೆಯನ್ವಯ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಯಾರೂ ಕೂಡ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡಬಾರದು. ತಂಬಾಕು ವಸ್ತುಗಳನ್ನು ಶಾಲಾ ಕಾಲೇಜುಗಳಿಂದ ೧೦೦ ಅಡಿ ಅಂತರದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ, ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಬಸ್ ನಿಲ್ದಾಣ, ಚಲನಚಿತ್ರ ಮಂದಿರಗಳು, ಆಸ್ಪತ್ರೆಗಳು ಮುಂತಾದ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. 
  ಇಂದಿನ ದಿನಮಾನಗಳಲ್ಲಿ ಮಕ್ಕಳು ತಮ್ಮ ೧೪ನೇ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಪೋಷಕರು ಮೊದಲು ಮಕ್ಕಳನ್ನು ರಕ್ಷಿಸುವುದು ಅತೀ ಮುಖ್ಯವಾಗಿದೆ. ಮಕ್ಕಳು ತಂಬಾಕು ಉತ್ಪನ್ನಗಳೆಡೆಗೆ ಆಕರ್ಷಿತರಾಗದಂತೆ ಮಾಡಲು ಪೋಷಕರು ತಂಬಾಕಿನ ದುಷ್ಪರಿಣಾಮಗಳನ್ನು ಮಕ್ಕಳ ಜೊತೆ ಮುಕ್ತವಾಗಿ ಚರ್ಚಿಸಬೇಕು. ತಮ್ಮ ಮಕ್ಕಳ ಮುಂದೆ ನೇರವಾಗಿ ತಂಬಾಕು ಇತ್ಯಾದಿಗಳನ್ನು ಸೇವಿಸಬಾರದು. ಧೂಮಪಾನ ಹವ್ಯಾಸಿ ಸ್ನೇಹಿತರಿಂದ ತಮ್ಮ ಮಕ್ಕಳನ್ನು ದೂರವಿಡುವುದು ಇನ್ನೂ ಉತ್ತಮ. 
Please follow and like us:
error