ಮಾ. ೧೯ ಕ್ಕೆ ಜಿಲ್ಲಾಸ್ಪತ್ರೆ ಉದ್ಘಾಟನೆ

ವಾಜಪೇಯಿ ವಸತಿ ಯೋಜನೆ : ಶಾಸಕ ಸಂಗಣ್ಣ ಕರಡಿ ಅವರಿಂದ ಕಾಮಗಾರಿ ಪರಿಶೀಲನೆ
  ವಾಜಪೇಯಿ ನಗರ ವಸತಿ ಯೋಜನೆಯಡಿ ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ವಸತಿ ಯೋಜನೆ ಕಾಮಗಾರಿ ಸ್ಥಳಕ್ಕೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
   ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮವು ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ೨೦೧೧-೧೨ ರಲ್ಲಿ ೭೩. ೦೧ ಎಕರೆ ಹಾಘೂ ೨೦೧೨-೧೩ ರಲ್ಲಿ ೪೧. ೭೩ ಎಕರೆ ಸೇರಿದಂತೆ ಈಗಾಗಲೆ ೧೧೪. ೭೩ ಎಕರೆ ಜಮೀನನ್ನು ಖರೀದಿಸಲು ಅನುಮೋದನೆ ನೀಡಿದೆ.  ಕೊಪ್ಪಳ ನಗರದಲ್ಲಿ ವಸತಿ ರಹಿತ ಬಡ ಕುಟುಂಬಗಳಿಗೆ ಸೂರು ಒದಗಿಸುವಂತಹ ಈ ಮಹತ್ವದ ಯೋಜನೆಗೆ ಸರ್ಕಾರ ಮಂಜೂರಾತಿ ನೀಡುವುದರ ಮೂಲಕ, ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವಂತೆ ಸಲ್ಲಿಸಿದ್ದ ಮನವಿಗೆ ಸರ್ಕಾರ ಸ್ಪಂದಿಸಿ, ಯೋಜನೆ ಮಂಜೂರು ಮಾಡಿದೆ.  ಇದೀಗ ಈ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶಾಸಕ ಸಂಗಣ್ಣ ಕರಡಿ ಅವರು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ನಂತರ ಮಾತನಾಡಿದ ಅವರು, ವಾಜಪೇಯಿ ವಸತಿ ಯೋಜನೆಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಮಾ. ೨೩ ರವರೆಗೆ ವಿಸ್ತರಿಸಲಾಗಿದ್ದು, ಸಾರ್ವಜನಿಕರು, ಅರ್ಜಿ ಸಲ್ಲಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮಾ. ೧೯ ಕ್ಕೆ ಜಿಲ್ಲಾಸ್ಪತ್ರೆ ಉದ್ಘಾಟನೆ : ಕೊಪ್ಪಳ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾ ಆಸ್ಪತ್ರೆ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು,  ಜಿಲ್ಲಾ ಆಸ್ಪತ್ರೆ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲು ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ.  ಈಗಾಗಲೆ ಮುಖ್ಯಮಂತ್ರಿಗಳು ಮಾ. ೧೯ ರಂದು ಜಿಲ್ಲೆಗೆ ಭೇಟಿ ನೀಡಲು ಸಮ್ಮತಿಸಿದ್ದಾರೆ ಎಂದರು.  
  ಕೊಪ್ಪಳ ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನದಲ್ಲಿ ಜಗಜ್ಯೋತಿ ಬಸವೇಶ್ವರರು, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಈಗಾಗಲೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಶಾಸಕ ಸಂಗಣ್ಣ ಕರಡಿ ಅವರು ಉದ್ಯಾನವನಕ್ಕೆ ಭೇಟಿ ನೀಡಿ, ಕಾಮಗಾರಿಯ ಪರಿಶೀಲನೆ ನಡೆಸಿದರು.  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ನಿರ್ಮಿತಿ ಕೇಂದ್ರದ ಶಶಿಧರ್, ನಗರಾಭಿವೃದ್ಧಿ ಕೋಶದ ಅಧಿಕಾರಿ ಆರ್. ಕಾಂಬ್ಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಬಸವರಾಜ ಪುರದ, ಸದಾಶಿವಯ್ಯ ಹಿರೇಮಠ, ಫಕೀರಪ್ಪ ಆರೇರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:
error