ಸರ್ವರಿಗೂ ಮಕರ ಸಂಕ್ರಾಂತಿಯ ಶುಭಾಶಯ…. ಬಾಳು ಬಂಗಾರವಾಗಲಿ.

ಸಂಕ್ರಾಂತಿ ಎಂದರೆ ನಮಗೆ ನೆನಪಾಗುವುದು ಮಕರ ಸಂಕ್ರಾಂತಿ. ಸೂರ್ಯ ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವ ದಿನವಿದು. ಸೂರ್ಯ ಪ್ರತಿ ಮಾಸವೂ ರಾಶಿಯಿಂದ ರಾಶಿಗೆ ಕ್ರಮಿಸುತ್ತಾನೆ. ಅವೂ ಸಂಕ್ರಾಂತಿಗಳೇ. ಈ ಸಂಕ್ರಾಂತಿಯ ದಿನ ಸೂರ್ಯ ದಕ್ಷಿಣ ದಿಕ್ಕಿನ ಚಲನೆಯನ್ನು ನಿಲ್ಲಿಸಿ ಉತ್ತರ ದಿಕ್ಕಿನ ಚಲನೆ ಪ್ರಾರಂಭಿಸುತ್ತಾನೆ. ದಕ್ಷಿಣ ದಿಕ್ಕು ಯಮನ ದಿಕ್ಕು, ಅಂದರೆ ಸಾವಿನದಿಕ್ಕು. ಉತ್ತರದಿಕ್ಕು ದೇವತೆಗಳ ದಿಕ್ಕು. ಸಾವಿನಿಂದ ದೈವತ್ವದ ಕಡೆಗೆ ಹೊರಳುವ ಕಾರಣದಿಂದ ಇದನ್ನು ಹಬ್ಬದಂತೆ ಆಚರಿಸುತ್ತಿರಬಹುದು. (ಸೂರ್ಯ ದಕ್ಷಿಣದಿಕ್ಕಿಗೆ ಹೊರಳುವ ಸಂಕ್ರಾಂತಿ ಕರ್ಕಾಟಕ ಸಂಕ್ರಾಂತಿ.) ಇವುಗಳಲ್ಲಿ ಸಂಕ್ರಾಂತಿಯು ವೈಜ್ಞಾನಿಕವಾಗಿಯೂ ವಿಶೇಷವಾದ ಮಹತ್ವವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಜನವರಿ೧೪ ಅಥವಾ ೧೫ರಂದು ಬರುವುದಲ್ಲದೆ ಉತ್ತರಾಯಣ ಅಂದರೆ ಸೂರ್ಯನ ಉತ್ತರ ದಿಕ್ಕಿನ ಪ್ರಯಾಣದ ಆರಂಭವನ್ನು ಸೂಚಿಸುವ ಕಾಲವೂ ಆಗಿದೆ. ಉತ್ತರಾಯಣದಲ್ಲಿ ಮರಣ ಹೊಂದಿದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯೂ ಅನಾದಿ ಕಾಲದಿಂದಲೂ ಇದೆ. ಇಚ್ಛಾ ಮರಣಿಯಾದ ಭೀಷ್ಮ ಪಿತಾಮಹರು ಈ ದಿನಕ್ಕಾಗೇ ಕಾದಿದ್ದು ದೇಹತ್ಯಾಗ ಮಾಡಿದರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಈ ಕಾಲವನ್ನು ‘ಮಕರ ಸಂಕ್ರಾಂತಿ’ ಎನ್ನುತ್ತಾರೆ. ನಮ್ಮ ಕಡೆ ಸಂಕ್ರಾಂತಿ ಬಂತೆಂದರೆ ಅವರೇಕಾಯ ಸಡಗರ! ಹಬ್ಬಕ್ಕೆ ೨ದಿನಮೊದಲೇ ಅವರೇಕಾಯನ್ನು ಬಿಡಿಸಿ, ಅವರೇ ಕಾಳನ್ನು ನೆನೆಸಿಟ್ಟು, ಹಿಂದಿನ ದಿನ ಕಾಳನ್ನು ಚಿಲುಕಿಸುವ (ನೆಂದ ಕಾಳನ್ನು ಬೆರಳಿನಿಂದ ಒತ್ತಿ ಬೇಳೆಯನ್ನು ಬೇರ್ಪಡಿಸುವುದು) ಸಂಭ್ರಮ! ಹಬ್ಬದ ದಿನ ಚಿಲುಕವರೆ ಬೇಳೆಯ ಹುಗ್ಗಿ, ಅವರೆ ಕಾಳಿನ ಹುಳಿ,….ಎಲ್ಲಾ ಅವರೇಮಯ! ಜೊತೆಗೆ ಸಿಹಿ ಪೊಂಗಲ್ ಹಬ್ಬದ ವಿಶೇಷ. ಸಂಜೆ ಎಳ್ಳು ಬೀರುವ ಎಂದರೆ ಎಳ್ಳಿನ ಮಿಶ್ರಣ, ಸಕ್ಕರೆ ಅಚ್ಚು, ಕಬ್ಬು, ಬಾಳೆಹಣ್ಣು, ಉತ್ತುತ್ತೆ….ಮುಂತಾದವುಗಳನ್ನು ಮನೆಮನೆಗೂ ಹಂಚಿ ಬರುವ ಪದ್ಧತಿ. ಆಗ ಹಳ್ಳಿಯ ನಮ್ಮ ಮನೆಯಲ್ಲಿ ಬಿಳಿ ಎಳ್ಳನ್ನು ತಯಾರಿಸಲು ಎಳ್ಳನ್ನು ನೆನೆಸಿ ಸಾರಿಸಿದ ಮಣ್ಣಿನ ನೆಲದ ಮೇಲೆ ಉಜ್ಜುತ್ತಿದ್ದರು. ೧೫-೨೦ದಿನಗಳಿಗೆ ಮೊದಲೇ ಬೆಲ್ಲ ಮುರಿಯುವುದು, ಕೊಬ್ಬರಿ ಹೆಚ್ಚುವುದು, ನೆಲಗಡಲೆ ಬೀಜವನ್ನು ಹುರಿದು ಬೇಳೆ ಮಾಡಿಕೊಳ್ಳುವುದು……..ಮುಂತಾದ ಕೆಲಸಗಳನ್ನು ಅಮ್ಮ ಬಿಡುವಿಲ್ಲದ ದೈನಂದಿನ ಕೆಲಸಗಳ ನಡುವೆಯೇ ಮಾಡಿಕೊಳ್ಳುತ್ತಿದ್ದರು. ಸಕ್ಕರೆ ಅಚ್ಚನ್ನು ಮಾಡಲು ಪ್ರಾರಂಭಿಸಿದರೆಂದರೆ ನಮಗೆ ಎಲ್ಲಿಲ್ಲದ ಸಡಗರ! ಈ ಹಬ್ಬದ ಪದ್ಧತಿ ಇಲ್ಲದ ಪರ ಊರುಗಳಿಂದ ಬಂದು ನೆಲೆಸಿದವರೂ ಮಕ್ಕಳಿಗೆ ನಿರಾಸೆಯಾಗಬಾರದೆಂದು ಕೊಳ್ಳಲು ಸಿಗದೇ ಇದ್ದುದರಿಂದ ವಿಧಾನವನ್ನು ತಿಳಿದುಕೊಂಡು ಎಳ್ಳುಬೆಲ್ಲ ತಯಾರಿಸುತ್ತಿದ್ದರು. ಈಗ ಸಿದ್ಧಪಡಿಸಿದ ಮಿಶ್ರಣವನ್ನೇ ಅಂಗಡಿಗಳಲ್ಲಿ ಮಾರಲು ಇಟ್ಟಿರುತ್ತಾರೆ. ಒಮ್ಮೆ ಮಾರ್ಕೆಟ್‌ಗೆ ಹೋದರೆ ಹಬ್ಬಕ್ಕೆ ಏನೇನು ಬೇಕು ಎನ್ನುವುದನ್ನು ವ್ಯಾಪಾರಿಗಳೇ ನೆನಪಿಸಿ ಕೊಡುತ್ತಾರೆ. ಆದರೆ ಈ ಎಲ್ಲಾ ಆಚರಣೆಗಳು ಮಹತ್ವವನ್ನು ಕಳೆದುಕೊಳ್ಳುತ್ತಾ ನೀರಸವಾಗುತ್ತಿವೆಯೇನೋ ಎನಿಸುತ್ತಿದೆ. ‘ಸಂಕ್ರಾಂತೀಲಿ ಶಂಕದ ದ್ವಾರಾ(ಗಾತ್ರದ) ಚಳಿ ಹೋಗಿ ಸಾಸಿವೆ ಕಾಳು ದ್ವಾರಾ ಸೆಖೆ ಬಂತು’ ಅಂತ ನಮ್ಮ ಕಡೆ ಹೇಳುತ್ತಾರೆ. ಇದುವರಗೆ ಚಳಿಯ ಕೊರೆಯಿಂದ ಮೈಯಿನ ಚರ್ಮ ಬಿರುಕು ಬಿಟ್ಟಿರುತ್ತದೆ. ಸಂಕ್ರಾಂತಿಯಲ್ಲಿ ತಯಾರಿಸಿ ಪರಸ್ಪರ ಹಂಚಿ ತಿನ್ನುವ ಪಂಚ ಕಜ್ಜಾಯವು ಎಳ್ಳು, ಕೊಬ್ಬರಿ, ನೆಲಗಡಲೆ ಬೀಜ, ಕಡಲೆ ಮತ್ತು ಬೆಲ್ಲಗಳ ಮಿಶ್ರಣವಾಗಿದ್ದು ಅದರಲ್ಲಿ ಕೊಬ್ಬಿನ ಅಂಶವಿದ್ದು ಚರ್ಮವನ್ನು ರಕ್ಷಿಸುವ ಗುಣವನ್ನು ಹೊಂದಿದೆ. ‘ಎಳ್ಳು ಬೆಲ್ಲಿ ತಿಂದು ಒಳ್ಳೆಯ ಮಾತನಾಡು’ ಎನ್ನುವ ಉಕ್ತಿಯೂ ಇದೆ.ಇದಕ್ಕೆ ಸಮೀಕರಿಸುವಂತೆ ಮಹಾರಾಷ್ಟ್ರದಲ್ಲಿ ಎಳ್ಳು ಉಂಡೆಗಳನ್ನು ತಯಾರಿಸಿ ಹಂಚುತ್ತಾರೆ ಹಾಗೂ ಹಂಚುವಾಗ, ‘ತಿಲ್ ಗುಲ್ ಘ್ಯಾ ಗೂಡ್ ಗೂಡ್ ಬೋಲ್’ ಎಂದು ಹೇಳುತ್ತಾರೆ! ಇದರಿಂದ ಸಂಕ್ರಾಂತಿಯು ಆರೋಗ್ಯ ರಕ್ಷಣೆಯಲ್ಲದೇ ಉತ್ತಮ ಸಾಮರಸ್ಯವನ್ನೂ ಕಾಪಾಡುವ ಹಬ್ಬವಾಗಿದೆ ಎಂದು ತಿಳಿಯಬಹುದು. ಸಂಕ್ರಮಣ ಅಥವಾ ಸಂಕ್ರಾಂತಿ ಎಂದರೆ ಸಂಧಿ ಕಾಲ. ದಾಟುವಿಕೆ ಅಥವಾ ಮುಂದುವರಿಯುವಿಕೆ ಎಂಬ ಅರ್ಥವೂ ಇದೆ. ನಮ್ಮ ಈ ಸಂದಿಗ್ಧತೆಯಲ್ಲಿ ಆಚರಿಸುತ್ತಿರುವ ‘ಸಂಕ್ರಾಂತಿ’ಯು ನಮ್ಮನ್ನು ಧನಾತ್ಮಕತೆಯಿಂದೊಡಗೂಡಿದ ಉತ್ತಮರನ್ನಾಗಿಸಲಿ. ಎಲ್ಲೆಲ್ಲೂ ಶಾಂತಿ, ಸಂವೃದ್ಧಿಯು ನೆಲೆಸುವಂತಾಗಲಿ ಎಂದು ಆಶಿಸುತ್ತಾ………‘ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.

Please follow and like us:
error