ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕಾಲೇಜು ವಿದ್ಯಾರ್ಥಿಗಳಿಗೆ ಕರೆ

 ಕಾಲೇಜು ವಿದ್ಯಾರ್ಥಿಗಳು ನಾಟಕಗಳಂತಹ ಸೃಜನಶೀಲ ಚಟುವಟಿಕೆಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳುವುದನ್ನು ಕಲಿಯಬೇಕು ಎಂದು ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಹೇಳಿದರು.
  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಗುರುವಾರ ನಡೆದ ಸ್ಪರ್ಧಾತ್ಮಕ ಕಾಲೇಜು ರಂಗೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 
  ಕಾಲೇಜು ವಿದ್ಯಾರ್ಥಿಗಳು ತಮ್ಮ ಪಠ್ಯದ ಚಟುವಟಿಕೆಗಳ ಜೊತೆಗೆ ರಂಗ ಚಟುವಟಿಕೆಗಳಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.  ರಂಗ ಚಟುವಟಿಕೆ ಎಂದರೆ ಕೇವಲ ಬಣ್ಣ ಹಚ್ಚಿ ನಟಿಸುವುದು ಅಲ್ಲ. ಅದರಾಚೆಗಿನ ಮುಖಗಳು, ಕಥಾ ವಸ್ತು, ವಿಷಯಗಳ ಆಳವಾದ ಅರಿವು ಪಡೆದುಕೊಳ್ಳಬೇಕು.  ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳನ್ನು, ಕಲೆ ಸಾಹಿತ್ಯ, ಸಂಸ್ಕೃತಿಯಿಂದ ದೂರ ಮಾಡಲಾಗುತ್ತಿದೆ. ಅವರಲ್ಲಿ ತಾಳ್ಮೆ ಇಲ್ಲವಾಗಿದೆ. ರಂಗ ಚಟುವಟಿಕೆಗಳ ಮೂಲಕ ಯುವಕರಲ್ಲಿ ಹೊಸ ಆಲೋಚನೆಗಳು ಮೂಡಬೇಕು ಎಂದು ಅವರು ಹೇಳಿದರು.
  ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿ ಕಾಲೇಜು ರಂಗೋತ್ಸವದ ಉದ್ಘಾಟನೆ ನೆರವೇರಿಸಿದರು.  ರಂಗ ಕಲಾವಿದೆ ಜಿ. ವಂದನಾ, ರೇವಣಸಿದ್ದಯ್ಯ, ಕೊಟ್ರಯ್ಯಸ್ವಾಮಿ, ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ, ಎಸ್.ವಿ. ಪಾಟೀಲ್, ಮಹಾಂತೇಶ್ ಮಲ್ಲನಗೌಡರ್, ಶಿವಾನಂದ ಹೊದ್ಲೂರ್ ಮುಂತಾದವರು ಭಾಗವಹಿಸಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  
  ಸ್ಪರ್ಧಾತ್ಮಕ ಕಾಲೇಜು ರಂಗೋತ್ಸವ ಸ್ಪರ್ಧೆಯ ಜಾನಪದ ಮತ್ತು ನಾಟಕ ಕಲಾತಂಡ ವಿಭಾಗದಲ್ಲಿ ಗಂಗಾವತಿಯ ಚನ್ನಬಸವ ಮಹಿಳಾ ಮಹಾವಿದ್ಯಾಲಯ, ಗುಂಜಳ್ಳಿ ಹಿರೇನಾಗಪ್ಪ ವಾಣಿಜ್ಯ ವಿದ್ಯಾಲಯ,  ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳ ಕಲಾತಂಡಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.  
Please follow and like us:
error