ಭವ್ಯ ಭಾರತ ನಿರ್ಮಾಣಕ್ಕೆ ವಿವೇಕಾನಂದರೇ ಸ್ಫೂರ್ತಿ : ರಾಘವೇಶಾನಂದಜೀ ಶ್ರೀಗಳು

ಕೊಪ್ಪಳ, ೦೧ : ಭವ್ಯ ಭಾರತ ನಿರ್ಮಾಣದ ಕನಸು ಕಂಡಿದ್ದ ಸ್ವಾಮಿ ವಿವೇಕಾನಂದರು, ಕಠಿಣ ಪರಿಶ್ರಮ, ದೂರದೃಷ್ಟಿ, ದಾರ್ಶನಿಕ ಸತ್ಯತೆಯ ಮೂಲಕ ಇಡೀ ಜಗತ್ತನ್ನು ಬೆಳಗಿದರು. ಸತ್ಯ ಮಾರ್ಗವೊಂದೇ ಸಕಲರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ದಾರಿ. ನರೇಂದ್ರ ಬಾಲಕನಾಗಿದ್ದಾಗಿಂದ ವಿವೇಕಾನಂದನಾಗುವವರೆಗೂ ಕಠಿಣ ಪರಿಶ್ರಮ ಪಟ್ಟವರು. ಧನಾತ್ಮಕ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ವಿವೇಕಾನಂದರ ಸದೃಢ ದೇಶದ ಕನಸು ನನಸಾಗಬೇಕಾದರೆ ಕಬ್ಬಿಣದಂಥ ಮಾಂಸಖಂಡ ಮತ್ತು ಉಕ್ಕಿನಂತಹ ನರಮಂಡಲವಿರುವ ಯುವಪಡೆ ಮುಂದೆ ಬರಬೇಕು ಎಂದು ವಿವೇಕಾನಂದರ ಜೀವನದ ಕೆಲವು ಸತ್ಯಘಟನೆಗಳನ್ನು ಮನೋಜ್ಞವಾಗಿ ವಿವರಿಸುವುದರ ಮೂಲಕ ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ಸೂತ್ರಗಳನ್ನು ಊಟಿಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ರಾಘವೇಶಾನಂದಜೀ ಶ್ರೀಗಳು ಹೇಳಿದರು.
ವ್ಯಕ್ತಿತ್ವ ವಿಕಸನ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರಿಂದ ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಪಾಲ್ಗೊಂಡು ಈ ಮೇಲಿನಂತೆ ನುಡಿದರು. ಹೊಸಪೇಟೆಯ ಸುಮೇಧಾನಂದ ಮಹಾರಾಜ ಶ್ರೀಗಳು ಹಾಗೂ ಕೊಪ್ಪಳದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಚೈತನ್ಯಾನಂದಜೀ ಸ್ವಾಮೀಜಿಯವರು ಆರಂಭದಲ್ಲಿ ರಾಷ್ಟ್ರೀಯ ಏಕತೆಯ ಭಜನೆ ಮಾಡಿದರು. ಶಾಲಾ ಪ್ರಾಚಾರ್ಯ ಎ. ಧನಂಜಯನ್ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಸುಷ್ಮಾ, ಮಧು, ಶ್ವೇತಾ ಪ್ರಾರ್ಥಿಸಿದರೆ, ಅಮೃತಾ ಕುಲಕರ್ಣಿ ನಿರೂಪಿಸದರು. ಶಿಕ್ಷಕ ಮಹೇಶ ಬಳ್ಳಾರಿ ಸ್ವಾಗತ, ಸಮೀರ ಜೋಶಿ ಪ್ರಾಸ್ತಾವಿಕ ಹಾಗೂ ವೀರೇಶ ಕೊಪ್ಪಳ ವಂದನಾರ್ಪಣೆ ನೆರವೇರಿಸಿದರು. ರಾಜ್ಯಪಾಲರ ಪ್ರಶಸ್ತಿ ಪುರಸ್ಕೃತ ಪಡೆದ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಮತ್ತು ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.

Leave a Reply