fbpx

ಮಾಧ್ಯಮಗಳೆಲ್ಲ ಮಾರಾಟ ವಾಗಿವೆ -ಕೇಜ್ರಿವಾಲ್ ಹೇಳಿದ ಅರ್ಧಸತ್ಯ

 

ಈ ದೇಶದ ಮಾಧ್ಯಮಗಳೆಲ್ಲ ಮಾರಾಟ ವಾಗಿವೆ ಎಂದು ಆಮ್ ಆದ್ಮಿ ನಾಯಕ ಅರವಿಂದ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ ನಂತರ ಬಿಜೆಪಿಯಂಥ ಫ್ಯಾಶಿಸ್ಟ್ ಪಕ್ಷ ಕೇಜ್ರಿವಾಲ್‌ರನ್ನು ‘ಫ್ಯಾಶಿಸ್ಟ್’ ಎಂದು ಹಿಯಾಳಿಸುತ್ತಿದೆ. ಕೇಜ್ರಿವಾಲ್ ಹೇಳಬಾರ ದೇನನ್ನೂ ಹೇಳಿಲ್ಲ. ಎಲ್ಲರ ಮನಸಿನಲ್ಲಿರುವ ಕಳವಳಕ್ಕೆ ಅವರು ದನಿ ನೀಡಿದ್ದಾರೆ. ಮಾಧ್ಯಮ ಗಳು ಎಲ್ಲರನ್ನು ಟೀಕಿಸುವಂತೆ ಮಾಧ್ಯಮಗಳನ್ನು ವಿಮರ್ಶೆಗೊಳಪಡಿಸುವ ಅಧಿಕಾರ ಎಲ್ಲರಿಗೂ ಇದೆ. ಕಂಡದ್ದನ್ನಾಡಿದರೆ ಮೀಡಿಯಾಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತಿದೆ ಎಂದು ಬಹುತೇಕ ರಾಜಕಾರಣಿಗಳು ಹೆದರುತ್ತಾರೆ. ಆದರೆ ಕೇಜ್ರಿವಾಲ್ ಹೆದರದೆ ಮಾತಾಡಿದ್ದಾರೆ.
ಹಾಗೆ ನೋಡಿದರೆ ಅರವಿಂದ ಕೇಜ್ರಿವಾಲ್ ಆಡಿದ ಮಾತಿನಲ್ಲಿ ಯಾವ ತಪ್ಪೂ ಇಲ್ಲ. ನರಹಂತಕನೊಬ್ಬನನ್ನೂ ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತಿರುವ ಕಾರ್ಪೊರೇಟ್ ಮಾಧ್ಯಮಗಳು ವೀಕ್ಷಕರಿಗೆ ನೀಡುತ್ತಿರುವ ಸುದ್ದಿಗಳು ಎಂಥವೆಂದು ಎಲ್ಲರಿಗೂ ಗೊತ್ತಿದೆ. ಮೋದಿ ಆಡಳಿತದ ವೈಫಲ್ಯಗಳನ್ನೆಲ್ಲ ಮುಚ್ಚಿ ಆತನನ್ನು ರಾಷ್ಟ್ರ ಉದ್ದರಿಸಲು ಅವತರಿಸಿ ಬಂದಿರುವ ಪರಮಾತ್ಮ ಎಂದು ವೈಭವೀಕರಿಸು ತ್ತಿರುವುದನ್ನು ಕಂಡು ಎಂಥವರಿಗಾದರೂ ಕೋಪ ಬರುತ್ತದೆ. ಆ ಕೋಪವನ್ನೇ ಕೇಜ್ರಿವಾಲ್ ‘‘ದೇಶದ ಎಲ್ಲ ಮಾಧ್ಯಮಗಳು ಮಾರಾಟ ವಾಗಿವೆ ಎಂದು ಆರೋಪಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ಇದನ್ನೆ ಬಳಸಿಕೊಂಡ ಬಿಜೆಪಿ ನಾಯಕರು ಕೇಜ್ರಿವಾಲರನ್ನು ‘ಫ್ಯಾಶಿಸ್ಟ್’ ಎಂದು ಕರೆಯು ತ್ತಿದ್ದಾರೆ.
ವಾರ್ತಾಭಾರತಿ  ಅಂಕಣ
ಗುಜರಾತ್‌ನ ಮೋದಿ ಆಡಳಿತದ ಇನ್ನೊಂದು ಕರಾಳಮುಖವನ್ನು ಮಾಧ್ಯಮಗಳು ಬೇಕಂತಲೇ ತೋರಿಸುತ್ತಿಲ್ಲ. ಕಳೆದ ಹತ್ತು ವರ್ಷ ಗಳಲ್ಲಿ 800ಕ್ಕಿಂತ ಹೆಚ್ಚು ರೈತರು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ ಒಂದೇ ಒಂದು ರೂಪಾಯಿಗೆ ಕಾರ್ಪೊರೇಟ್ ಕಂಪೆನಿಗೆ ರೈತರ ಜಮೀನನ್ನು ಬಲವಂತವಾಗಿ ಕೊಡಿಸ ಲಾಗಿದೆ. ಗುಜರಾತ್‌ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದೆಲ್ಲ ಸಂಗತಿ ಗಳನ್ನು ಎಡಪಕ್ಷಗಳು ದೇಶದಲ್ಲಿ, ಕರ್ನಾಟಕದಲ್ಲಿ ಕೋಮು ಸೌಹಾರ್ದ ವೇದಿಕೆ ಈ ಮುಂಚೆಯೇ ಬಯಲು ಪಡಿಸಿವೆ.
ಮಾಧ್ಯಮಗಳು ಈ ಕಟುಸತ್ಯವನ್ನು ಮುಚ್ಚಿಟ್ಟವು. ಹಾಗೆಂದು ಮಾಧ್ಯಮಗಳು ವೃತ್ತಿನಿಷ್ಠೆಯನ್ನು ಸಂಪೂರ್ಣವಾಗಿ ತೊರೆದಿವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈಗ ಮೋದಿಯನ್ನು ವೈಭವೀಕರಿಸುತ್ತಿರುವ ಮಾಧ್ಯಮಗಳೇ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಸತ್ಯದ ಮೇಲೆ ಬೆಳಕು ಚೆಲ್ಲಿದ ಉದಾಹರಣೆ ಗಳಿವೆ. ಆದರೆ ಇಂಗ್ಲಿಷ್ ಪತ್ರಿಕೆಗಳಂತೆ ಗುಜರಾತ್‌ನ ಪ್ರಾದೇಶಿಕ ಪತ್ರಿಕೆಗಳು ಪ್ರಾಮಾಣಿಕವಾಗಿ ನಡೆದು ಕೊಳ್ಳಲಿಲ್ಲ ಎಂಬ ಟೀಕೆಯೂ ಇದೆ.
ಇದರ ಜೊತೆಗೆ ಇತ್ತೀಚಿನ ಹತ್ತು ವರ್ಷಗಳಲ್ಲಿ ದೃಶ್ಯ ಮಾಧ್ಯಮ ಸಂಪೂರ್ಣ ಕಾರ್ಪೊರೇಟೀಕರಣ ಗೊಂಡಿವೆ ಎಂಬುದು ಸುಳ್ಳಲ್ಲ. ಪತ್ರಿಕೋದ್ಯಮದ ನಾಲ್ಕು ದಶಕಗಳ ಅನುಭವವಿರುವ ನನಗೆ ಮಾಧ್ಯಮಗಳು ಮುಂಚಿನಂತಿಲ್ಲ ಎಂದು ಆಗಾಗ ಗಾಢವಾಗಿ ಅನಿಸುತ್ತಿರುತ್ತದೆ.
ಎಪ್ಪತ್ತರ ದಶಕದಲ್ಲಿ ನಾನು ‘ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದಾಗ ಖಾದ್ರಿ ಶಾಮಣ್ಣ, ಎಸ್.ವಿಜಯ ಶೀಲರಾವ್, ಕಲ್ಲೆ ಶಿವೋತ್ತಮ ರಾವ್, ಟಿ.ಎಸ್.ರಾವ್ ಪಾಟೀಲ ಪುಟ್ಟಪ್ಪ, ವಡ್ಡರ್ಸೆ ರಘುರಾಮ ಶೆಟ್ಟಿ ಅವರಂಥ ಘಟಾನುಘಟಿಗಳಿದ್ದರು. ಈ ಪೈಕಿ ಪಾಪು, ಕಲ್ಲೆ, ಜಯಶೀಲ ರಾವ್ ಈಗಲೂ ನಮ್ಮಿಂದಿಗಿ ದ್ದಾರೆ. ಅಂಥವ ರನ್ನೆಲ್ಲ ನೋಡಿದ ಜೊತೆಗೆ ಕೆಲಸ ಮಾಡಿದ ನನಗೆ ಈಗಿನ ಮಾಧ್ಯಮ ಎಲ್ಲೋ ಹಳಿ ತಪ್ಪಿದೆ ಎಂದು ಅನಿಸುತ್ತದೆ.
ಈಗ ಮಾಧ್ಯಮ ಅಂದರೆ ಆಗಿನಂತೆ ‘ಪತ್ರಿಕೋದ್ಯಮ ಮಾತ್ರ ಅಲ್ಲ. ಇದಕ್ಕಿಂತ ಪ್ರಭಾವಶಾಲಿಯಾದ ದೃಶ್ಯ ಮಾಧ್ಯಮವಿದೆ. ನಾನು ಪತ್ರಿಕೆ ಸೇರಿದಾಗ ಟಿವಿ ಇರಲಿಲ್ಲ. ಪತ್ರಿಕೆ ಹಾಗೂ ಮಾಧ್ಯಮ ಸಂಪೂರ್ಣವಾಗಿ ಉದ್ಯಮವಾಗಿರಲಿಲ್ಲ. ಲಾಭ ನಷ್ಟಕ್ಕಿಂತ, ಜಾಹೀರಾತು ಲೆಕ್ಕಾಚಾರಕ್ಕಿಂತ ಸತ್ಯದ ಮೇಲೆ ಬೆಳಕು ಚೆಲ್ಲಬೇಕೆನ್ನುವ ಹಠ ಮತ್ತು ಛಲ ಎಲ್ಲರಿಗೂ ಇತ್ತು. ಜಾತಿಗಲಭೆ, ಕೋಮು ಹಿಂಸಾಚಾರ ಆಗಲೂ ನಡೆಯುತ್ತಿದ್ದವು.
ಆದರೆ ಪತ್ರಿಕೆಗಳಲ್ಲಿ ಕೆಲಸ ಮಾಡುವ ವರದಿಗಾರರು ಧಾರ್ಮಿಕವಾಗಿ ಕಂದಾಚಾರಿಗಳಾಗಿದ್ದರೂ ಘಟನೆಯನ್ನು ವರದಿ ಮಾಡುವಾಗ ನಿಷ್ಪಕ್ಷಪಾತ ವಾಗಿ ಮಾಡುತ್ತಿದ್ದರು. ಎಲ್ಲಕ್ಕಿಂತ ವೃತ್ತಿನಿಷ್ಠೆ ಅವರಿಗೆ ಮುಖ್ಯವಾಗಿತ್ತು. ಆದರೆ ಈಗ? ಮಾಧ್ಯಮಗಳು ಮುಂಚಿ ನಂತಿಲ್ಲ. ವೃತ್ತಿನಿಷ್ಠೆಯ ಜಾಗದಲ್ಲಿ ಜಾತಿನಿಷ್ಠೆ, ಕೋಮುನಿಷ್ಠೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಉದಾಹರಣೆಗೆ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕೋಮುವಾದಿಗಳು ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ ನಡೆಸುತ್ತಿರುವಾಗ ಮಾಧ್ಯಮಗಳಲ್ಲಿ ಪ್ರಕಟ ವಾಗುವ ವರದಿಗಳು ನಿಷ್ಪಕ್ಷಪಾತವಾಗಿರು ವುದಿಲ್ಲ.
ಸತ್ಯ ಸಂಗತಿ ತಿಳಿಯಬೇಕಾದರೆ ಜನ ‘ವಾರ್ತಾಭಾರತಿ’ಯನ್ನೋ, ‘ಹಿಂದೂ’ವನ್ನೋ ಓದಬೇಕು. ಇಲ್ಲವೆ ವಾರಕ್ಕೊಮ್ಮೆ ಬರುವ ‘ಗೌರಿ ಲಂಕೇಶ್’ಗಾಗಿ ಕಾಯಬೇಕು. ಅಪರೂಪಕ್ಕೆ ನವೀನ್ ಸೂರಿಂಜೆಯಂತೆ ಸತ್ಯಸಂಗತಿ ವರದಿ ಮಾಡಲು ಹೋದವರು ಜೈಲಿನ ಕಂಬಿ ಎಣಿಸಬೇಕಾಗುತ್ತದೆ. ನಾಲ್ಕು ದಶಕಗಳ ಹಿಂದೆ ಸರಕಾರಿ ಸಾರಿಗೆ(ಸಿಟಿ) ಬಸ್‌ಗಳಲ್ಲಿ ಆಫೀಸಿಗೆ ಬರುತ್ತಿದ್ದ ಸಂಪಾದಕರನ್ನು ನೋಡಿದ್ದೇನೆ. ಕೆಲವೇ ಕೆಲವರು ಸ್ಕೂಟರ್ ಇಟ್ಟುಕೊಂಡಿದ್ದರು. ಆದರೆ ಈಗ ವರದಿಗಾರರಷ್ಟೆ ಅಲ್ಲ, ತಾಲೂಕುಗಳಲ್ಲಿರುವ ಆರೆಕಾಲಿಕ ಸುದ್ದಿಗಾರರು ದುಬಾರಿ ಕಾರುಗಳಲ್ಲಿ ಓಡಾಡುತ್ತಾರೆ.
ರಿಯಲ್ ಎಸ್ಟೇಟ್ ದಂಧೆ ಮಾಡುತ್ತಾರೆ. ಈ ಬಂಡವಾಳಶಾಹಿ ವ್ಯವಸ್ಥೆ ಮನುಷ್ಯರನ್ನು ಮೃಗಗಳನ್ನಾಗಿ, ಪ್ರಾಮಾಣಿಕರನ್ನು ಭ್ರಷ್ಟರನ್ನಾಗಿ ಮಾಡುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಪ್ರತಿ ಚಿಕ್ಕ ಊರಿನಲ್ಲೂ ಸುದ್ದಿಗಾಗಿ ಕಾಸು ಪಡೆಯುವ ದಂಧೆ ಹುಲುಸಾಗಿ ನಡೆದಿದೆ. ಅಪರೂಪಕ್ಕೊಬ್ಬ ಹಣ ಪಡೆಯದ ಪತ್ರಕರ್ತ ಇದ್ದರೆ ಆತನನ್ನು ಉಳಿದವರು ವಿಚಿತ್ರ ಪ್ರಾಣಿ ಎಂಬಂತೆ ನೋಡುತ್ತಾರೆ. ನಾಲ್ಕು ದಶಕಗಳ ಹಿಂದಿನ ಪತ್ರಿಕೆಗಳಲ್ಲಿ ಸಹಜವಾಗಿ ಬ್ರಾಹ್ಮಣರೇ ಹೆಚ್ಚಿನ ಸಂಖ್ಯೆ ಯಲ್ಲಿದ್ದರು. ಧಾರ್ಮಿಕವಾಗಿ ಅತ್ಯಂತ ಮಡಿವಂತ ರಾಗಿದ್ದ ಅವರು ಸುದ್ದಿಯನ್ನು ಬರೆಯುವಾಗ ವೃತ್ತಿನಿಷ್ಠೆಗೆ ರಜೆ ಕೊಡುತ್ತಿರಲಿಲ್ಲ. ಅಂದಿಗೂ ಇಂದಿಗೂ ಈ ದೇಶ, ಸಮಾಜ ಸಾಕಷ್ಟು ಬದಲಾಗಿದೆ.
ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಗಳಾಗಿವೆ. ಪೋಸ್ಟ್‌ಕಾರ್ಡುಗಳಲ್ಲಿ ಸುದ್ದಿ ಬರೆದು ಕಳುಹಿಸುತ್ತಿದ್ದ ಜಾಗದಲ್ಲಿ ಇ-ಮೇಲ್‌ಗಳು ಬಂದಿವೆ. ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಎಲ್ಲ ಅನುಕೂಲಗಳೂ ಇವೆ. ಆದರೆ ಮಾನವತೆ, ವೃತ್ತಿನಿಷ್ಠೆ ಎಲ್ಲೋ ಬತ್ತಿ ಹೋಗುತ್ತಿದೆ ಎಂಬ ಆತಂಕ ಪದೇ ಪದೇ ಉಂಟಾಗುತ್ತಿದೆ. ಅಂತಲೆ ಅರವಿಂದ್ ಕೇಜ್ರಿವಾಲ್ ಮಾಡಿದ ಟೀಕೆಯನ್ನು ಮಾಧ್ಯಮಗಳಲ್ಲಿ ಕೆಲಸ ಮಾಡುವ ವರು ಸ್ವಾಗತಿಸಬೇಕಾಗಿದೆ.
ಕೇಜ್ರಿವಾಲ್ ಹೇಳಿದ್ದು ಎಲ್ಲರಿಗೂ ಗೊತ್ತಿರುವ ಹಳೆಯ ಸತ್ಯ. ಸಾವಿರಾರು ಕೋಟಿಗೂ ಸುರಿದು ಚಾನೆಲ್ ಆರಂಭಿಸು ವವರಿಗೆ ತಮ್ಮ ವ್ಯಾಪಾರಿ ಹಿತಾಸಕ್ತಿಗಳಲ್ಲದೇ ಬೇರಾವ ಕಾಳಜಿ ಇರುವುದಿಲ್ಲ. ನರೇಂದ್ರ ಮೋದಿ ಪ್ರಧಾನಿ ಯಾದರೆ ದೇಶದ ಸಕಲ ಸಂಪತ್ತು ತಮ್ಮ ಮಡಿಲಿಗೆ ಬಂದು ಬೀಳುತ್ತದೆ ಎಂಬುದು ಅಂಬಾನಿ, ಅದಾನಿಯಂಥ ಕಾರ್ಪೊರೇಟ್ ಬಂಡವಾಳಗಾರರ ಲೆಕ್ಕಾಚಾರ ವಾಗಿದೆ. ಅಂತಲೆ ಸಹಜವಾಗಿ ತಮ್ಮ ಚೇಲಾ ಒಬ್ಬ ಪ್ರಧಾನಿಯಾಗಬೇಕೆಂದು ಅವರು ಬಯಸುತ್ತಾರೆ.
ಅಂತಲೆ ಮೋದಿ ಭಾಷಣಗಳು ಪ್ರತಿನಿತ್ಯವು ‘ಲೈವ್’ ಆಗಿ ಬರುತ್ತಿವೆ. ಬಹುತೇಕ ಟಿವಿ ಚಾನಲ್‌ಗಳನ್ನು ಇಂಥ ಹಣವಂತರೇ ನಡೆಸುತ್ತಿರುವುದರಿಂದ ತಮ್ಮ ಹಿತವನ್ನು ರಕ್ಷಿಸಬಲ್ಲ ವ್ಯಕ್ತಿಯ ಪರವಾಗಿ ಮಾಧ್ಯಮವನ್ನು ಅವರು ಬಳಸಿಕೊಳ್ಳುತ್ತಾರೆ. ಈ ಚಾನೆಲ್‌ಗಳಲ್ಲಿ ಕೆಲಸ ಮಾಡುವ ಅನೇಕ ಪತ್ರಕರ್ತರು ಪ್ರಾಮಾಣಿಕರಾಗಿದ್ದರೂ ಸಂಬಳ ಕೊಡುವ ಧಣಿಯನ್ನು ಎದುರು ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಲೆ ಪತ್ರಿಕಾ ಸ್ವಾತಂತ್ರ ಎಂಬುದೂ ಎಂದೂ ಪತ್ರಕರ್ತರ ಸ್ವಾತಂತ್ರ ವಾಗಿರಲಿಲ್ಲ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ.
ದೇಶದಲ್ಲಿ ಆರ್ಥಿಕ ಉದಾರೀಕರಣದ ಪರಿಣಾಮವಾಗಿ ಮುಕ್ತ ಮಾರುಕಟ್ಟೆ ತಲೆ ಎತ್ತಿದ ನಂತರ ಎಲ್ಲವೂ ಮಾರಾಟದ ಸರಕಾಗಿದೆ. ಮಾಧ್ಯಮಗಳು ಮಾತ್ರವಲ್ಲ ಮನುಷ್ಯ ಇಲ್ಲಿ ಮಾರಾಟವಾಗುತ್ತಿದ್ದಾನೆ. ಸಾಹಿತ್ಯ, ಕಲೆ, ಸಂಗೀತಗಳು ಮಾರುಕಟ್ಟೆಗೆ ಬಂದಿವೆ. ಇಂಥ ಸನ್ನಿವೇಶದಲ್ಲಿ ಕೇಜ್ರಿ ವಾಲ್ ಬರೀ ಮೇಲ್ಪದರಿಗೆ ತಟ್ಟಿದರೆ ಪ್ರಯೋಜನವಿಲ್ಲ. ಖಾಯಿಲೆಯ ಮೂಲಕ್ಕೆ ಕೈಹಾಕಬೇಕು. ಅದಕ್ಕೆ ಪೂರ್ವಭಾವಿ ಯಾಗಿ ಖಚಿತವಾದ ಆರ್ಥಿಕ, ಸಾಮಾಜಿಕ ನೀತಿಗಳನ್ನು ಅವರು ರೂಪಿಸಿಕೊಳ್ಳಬೇಕು. ಇಲ್ಲವಾದರೆ ಉಡಾಫೆಯ ಮಾತುಗಳಿಂದ ಬಹಳ ಕಾಲ ರಾಜಕಾರಣದಲ್ಲಿ ಉಳಿಯಲು ಸಾಧ್ಯವಿಲ್ಲ.
ಆದರೆ ಫ್ಯಾಶಿಸ್ಟ್ ನರೇಂದ್ರ ಮೋದಿಗೆ ಹೋಲಿಸಿದರೆ ಅರವಿಂದ ಕೇಜ್ರಿವಾಲ್ ಸಾವಿರ ಪಾಲು ಬೇಕು. ಅಣ್ಣ ಹಝಾರೆ ಜೊತೆಗಿದ್ದಾಗ ಆರೆಸ್ಸೆಸ್‌ನ ಗೋವಿಂದಾಚಾರ್ಯರಂಥವರ ಒಡನಾಡ ಹೊಂದಿದ್ದರೂ ಈತ ಚಡ್ಡಿ ಅಲ್ಲ. ಕೋಮುವಾದಿ ಅಲ್ಲ. ಈಗಂತೂ ಯೋಗೇಂದ್ರ ಯಾದವ್‌ರಂಥ ಸಮಾಜವಾದಿ, ಕಮಲಮಿತ್ರ ಚಿನಾಯ, ಬಾಬು ಮ್ಯಾಥ್ಯೂ ಅವರಂಥ ಮಾಜಿ ಕಮ್ಯುನಿಸ್ಟರು, ಪ್ರಶಾಂತ್ ಭೂಷಣರಂಥ ಜನಪರ ವಕೀಲರು, ಮೇಧಾಪಾಟ್ಕರಂಥ ಗಾಂಧಿವಾದಿ ಹೋರಾಟಗಾರ್ತಿಯರು ಕೇಜ್ರಿವಾಲ್ ಜೊತೆಗಿ ರುವುದರಿಂದ ಆತ ದಾರಿ ತಪ್ಪುವ ಭೀತಿ ಇಲ್ಲ.
ಕೇಜ್ರಿವಾಲ್ ಪ್ರವೇಶದ ನಂತರ ಮೋದಿಯ ಹೂಂಕಾರ-ಅಹಂಕಾರಗಳಿಗೆಲ್ಲ ಕಡಿವಾಣ ಹಾಕಿದಂತಾಗಿದೆ. ಅಂತಲೆ ಚಡ್ಡಿಗಳು ಕೇಜ್ರಿವಾಲ್‌ರನ್ನು ಕಂಡರೆ ಉರಿದು ಬೀಳುತ್ತಿ ದ್ದಾರೆ. ಇಂಥ ಸನ್ನಿವೇಶದಲ್ಲಿ ಮಾಧ್ಯಮಗಳ ಬಗ್ಗೆ ಮಾತಾಡುವಾಗ ಕೇಜ್ರಿವಾಲ್ ಕೊಂಚ ಎಚ್ಚರವಹಿಸಬೇಕಾಗಿದೆ.                                             ಕೃಪೆ :  ವಾರ್ತಾಭಾರತಿ  ಅಂಕಣ
Please follow and like us:
error

Leave a Reply

error: Content is protected !!