You are here
Home > Koppal News > ಸಂಭ್ರಮದ ಸ್ವಾತಂತ್ರೋತ್ಸವ

ಸಂಭ್ರಮದ ಸ್ವಾತಂತ್ರೋತ್ಸವ

 ಶಿವರಾಜ್ ಎಸ್. ತಂಗಡಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಭಾಷಣ

ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ೬೭ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ೨೦೧೩ರ ಆಗಸ್ಟ್ ೧೫ ರಂದು ಬೆಳಿಗ್ಗೆ ೯ ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ   ಶಿವರಾಜ್ ಎಸ್. ತಂಗಡಗಿ, ಮಾನ್ಯ ಸಣ್ಣ ನೀರಾವರಿ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರ ಭಾಷಣ
ಕೊಪ್ಪಳ ಜಿಲ್ಲೆಯ ಸಮಸ್ತ ನಾಗರೀಕ ಬಂಧುಗಳೆ, ಸ್ವಾತಂತ್ರ್ಯ ಹೋರಾಟಗಾರರೆ, ಚುನಾಯಿತ ಪ್ರತಿನಿಧಿಗಳೆ, ಶಾಲಾ ಕಾಲೇಜುಗಳ ಮುದ್ದು ಮಕ್ಕಳೆ, ಹಿರಿಯರೆ, ಮಾಧ್ಯಮದ ಸ್ನೇಹಿತರೆ, ಅಧಿಕಾರಿಗಳೆ ತಮಗೆಲ್ಲರಿಗೂ ೬೭ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಇಂದು ೬೭ನೇ ಸ್ವಾತಂತ್ರ್ಯ ದಿನೋತ್ಸವ. ನಮ್ಮ ಭಾರತವು ಬ್ರಿಟೀಷರ ಆಳ್ವಿಕೆಯ ಸಂಕೋಲೆಯಿಂದ  ಬಿಡುಗಡೆಯಾಗಿ ೬೬ ವರ್ಷ ಕಳೆದಿದ್ದು, ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರ ಬಾವುಟವನ್ನು ಹಾರಿಸುವ ಸೌಭಾಗ್ಯ ಈಗ ನನಗೆ ದೊರೆತಿದ್ದು, ಅತ್ಯಂತ ಸಂತೋಷವೆನಿಸಿದೆ. 
ಇಂತಹ ಶುಭ ಘಳಿಗೆ ಹಾಗೂ ರಾಷ್ಟ್ರೀಯ ಹಬ್ಬದ ಆಚರಣೆ ಸಂದರ್ಭದಲ್ಲಿ   ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ, ಕೋಮು ಸಾಮರಸ್ಯ, ಸೌಹಾರ್ದತೆ, ಭಾವೈಕ್ಯತೆ ನೆಲೆಗೊಂಡು ಜನತೆ ಸಂತೋಷ-ಸಮಾಧಾನಗಳಿಂದ ಶಾಂತಿಯುತ ಸಹಬಾಳ್ವೆ ನಡೆಸಲಿ ಎಂದು ಹಾರೈಸುತ್ತೇನೆ. 
ದೇಶದ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ, ಇಂದಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾಗಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ಟಿಪ್ಪುಸುಲ್ತಾನ್‌ರವರು, ಝಾನ್ಸಿರಾಣಿ ಲಕ್ಷ್ಮೀಬಾಯಿಯವರು, ಮಹಾತ್ಮಾಗಾಂಧೀಜಿರವರು, ಬಾಲಗಂಗಾಧರ ತಿಲಕ್‌ರವರು, ಗೋಪಾಲಕೃಷ್ಣ ಗೋಖಲೆಯವರು, ಜವಾಹರಲಾಲ್ ನೆಹರುರವರು, ಮೌಲಾನಾ ಅಬ್ದುಲ್ ಕಲಾಂ ಆಜಾದ್‌ರವರು, ಸುಭಾಷ್‌ಚಂದ್ರ ಭೋಸ್‌ರವರು, ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು, ಲಾಲಬಹದ್ದೂರ್ ಶಾಸ್ತ್ರಿಯವರು ಹೀಗೆ ನಮ್ಮ ಅನೇಕ ರಾಷ್ಟ್ರೀಯ ಮಹಾಪುರುಷರು, ದೇಶ ಪ್ರೇಮಿಗಳು ತಮ್ಮ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ.  
ನಮ್ಮ ಕೊಪ್ಪಳ ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕಾಣಿಕೆ ಕೊಟ್ಟಿದೆ. ಮುಂಡರಗಿ ಭೀಮರಾಯರು, ಹಮ್ಮಿಗೆ ಕೆಂಚನಗೌಡರವರು ತೋರಿಸಿದ ದಿಟ್ಟತನ ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕೊಡುಗೆ ನೀಡಿದೆ.  ಇಟಗಿಯ ವೀರಭದ್ರಯ್ಯನವರು, ಶಿರೂರು ವೀರಭದ್ರಯ್ಯನವರು, ಶಿವಮೂರ್ತಿಸ್ವಾಮಿ ಅಳವಂಡಿಯವರು, ಜನಾರ್ಧನರಾಯ ದೇಸಾಯಿಯವರು, ಎಲ್.ಕೆ.ಷರಾಫ್‌ರವರು, ಬಿಂದು ಮಾಧವರಾವ್‌ರವರು, ಬಿ.ಕೆ.ಪ್ರಾಣೇಶಾಚಾರ್ಯರವರು ಮೊದಲಾದ ಧೀಮಂತರುಗಳ ಸೇವೆಯನ್ನು ಇಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ರಾಷ್ಟ್ರೀಯ ಮಹಾಪುರುಷರುಗಳ ಹೋರಾಟ, ತ್ಯಾಗ, ಬಲಿದಾನ ಹಾಗೂ ರಾಷ್ಟ್ರಪ್ರೇಮ ಚಿರಸ್ಮರಣೀಯ. ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಂಡು ಅವರಿಗೆ ನಮ್ಮ ನಿಮ್ಮೆಲ್ಲರ ಗೌರವಪೂರ್ವಕ ನಮನ ಹಾಗೂ ಕೃತಜ್ಞತೆಗಳನ್ನು ಈ ಶುಭ ಸಂದರ್ಭದಲ್ಲಿ ಅರ್ಪಿಸೋಣ. 
ಸ್ವಾತಂತ್ರ್ಯಾ ನಂತರ ನಮ್ಮ ದೇಶ ಎಲ್ಲ ರಂಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ.   ವಿಜ್ಞಾನ, ತಂತ್ರಜ್ಞಾನಗಳನ್ನು ಸಮರ್ಥವಾಗಿ ಅಳವಡಿಸಿಕೊಂಡ ಕಾರಣ ಜಾಗತಿಕ ಮಟ್ಟದಲ್ಲಿ ಇಂದು ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಹಾಗೂ ನಮ್ಮ ರಾಜ್ಯವು ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇನೆ.
ವರುಣ ದೇವನ ಕೃಪೆಯಿಂದ ಈ ಬಾರಿ ಉತ್ತಮ ಮಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿರುವುದು ಸಂತಸ ತಂದಿದೆ.  ಈಗಾಗಲೇ ಕಳೆದ ಜುಲೈ ೦೯ ರಿಂದಲೇ ಕಾಲುವೆಗಳಿಗೆ ನೀರು ಹರಿಸಲಾಗಿದ್ದು ರೈತರು ನೆಮ್ಮದಿಯಿಂದ ಇರುವಂತಾಗಿದೆ.
ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ರಾಜ್ಯ    
    ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿದೆ.
ಬಡವರು ಸ್ವಾಭಿಮಾನದಿಂದ ತಮ್ಮ ಬದುಕು ಸಾಗಿಸುವಂತಾಗಲು ಪ್ರತಿ ಕೆ.ಜಿ.ಗೆ ಕೇವಲ     ೧ ರೂ. ನಂತೆ ಪ್ರತಿ ಕುಟುಂಬಕ್ಕೆ ೩೦ ಕೆ.ಜಿ. ಅಕ್ಕಿಯನ್ನು ನೀಡುವ ‘ಅನ್ನಭಾಗ್ಯ’ ಯೋಜನೆಯನ್ನು ನಮ್ಮ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಕೊಪ್ಪಳ ಜಿಲ್ಲೆ     ಒಂದರಲ್ಲಿಯೇ ಸುಮಾರು ಎರಡು ಲಕ್ಷದ ಇಪ್ಪತೈದು ಸಾವಿರದ ಐದುನೂರ ನಲವತ್ತ       ಮೂರು (೨,೨೫,೫೪೩)   ಬಡ ಕುಟುಂಬಗಳು ‘ಅನ್ನಭಾಗ್ಯ’ ಯೋಜನೆಯ ಸೌಲಭ್ಯ     ಪಡೆಯುವಂತೆ ಮಾಡಿರುವುದು ನಮ್ಮ ಸರ್ಕಾರದ ಉತ್ತಮ ಸಾಧನೆಯಾಗಿದೆ.
ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮುದ್ದುಮಕ್ಕಳನ್ನು ಅಪೌಷ್ಠಿಕತೆಯಿಂದ ದೂರಮಾಡಲು, ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೦೧ ರಿಂದ ೧೦ ನೇ ತರಗತಿಯವರೆಗಿನ ಮಕ್ಕಳಿಗೆ ಅಲ್ಲದೆ ಅಂಗನವಾಡಿ ಮಕ್ಕಳಿಗೂ ಸಹ ಹಾಲು ವಿತರಣೆ ಮಾಡುವಂತಹ ‘ಕ್ಷೀರಭಾಗ್ಯ’ ಯೋಜನೆಯನ್ನು ನಮ್ಮ ಸರ್ಕಾರ ಇದೇ ಆಗಸ್ಟ್ ೦೧ ರಿಂದ ರಾಜ್ಯಾದ್ಯಂತ ಜಾರಿಗೊಳಿಸಿದೆ.   ಜಿಲ್ಲೆಯಲ್ಲಿ ಒಂದು ಲಕ್ಷದ ಎಪ್ಪತ್ತೊಂಬತ್ತು ಸಾವರಿದ ಏಳುನೂರ ತೊಂಭತ್ನಾಲ್ಕು (೧,೭೯,೭೯೪) ಅಂಗನವಾಡಿ ಮಕ್ಕಳು ಮತ್ತು ಜಿಲ್ಲೆಯ ೧,೧೧೦ ಸರ್ಕಾರಿ ಮತ್ತು ೪೩ ಅನುದಾನಿತ ಶಾಲೆಗಳಲ್ಲಿ ೧ ರಿಂದ ೧೦ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಒಂದು ಲಕ್ಷದ ತೊಂಭತ್ತೆಂಟು ಸಾವಿರದ ನೂರ ಎಪ್ಪತ್ತೆರಡು (೧೯೮೧೭೨) ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಹಾಲು ವಿತರಣೆ ಮಾಡಲಾಗುತ್ತಿದ್ದು,  ಒಟ್ಟು ಮೂರು ಲಕ್ಷದ ಎಪ್ಪತ್ತೇಳು ಸಾವಿರದ ಒಂಭೈನೂರ ಅರವತ್ತಾರು (೩,೭೭,೯೬೬) ವಿದ್ಯಾರ್ಥಿಗಳು ಕ್ಷೀರ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಸುಮಾರು ವರ್ಷಗಳಿಂದ ಹೈದರಾಬಾದ್-ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂಬಂಧ ಹೋರಾಟಗಳು ನಡೆಯುತ್ತಲೇ ಬಂದಿದ್ದವು.  ಪ್ರಸ್ತುತ ಈಗ ಇರುವ ನಮ್ಮ ಕೇಂದ್ರದ ಯು.ಪಿ.ಎ. ಸರ್ಕಾರವು ಸಂವಿಧಾನ ಕಲಂ ೩೭೧(ಜೆ) ನ್ನು ಜಾರಿಗೆ ತಂದಿದೆ. ಆದ್ದರಿಂದ ಈ ಭಾಗದ ಜನರ ಬಹುದಿನಗಳ ಆಶೋತ್ತರಗಳನ್ನು ಈಡೇರಿಸಿದ ಕೀರ್ತಿ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ.  
ಹೈದರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ಕಲಂ ೩೭೧(ಜೆ) ತಿದ್ದುಪಡಿ ಅನ್ವಯ ಈ ಭಾಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ದೊರಕಿಸುವುದು, ಅಲ್ಲದೆ ವಿಶೇಷ ಅನುದಾನ ಒದಗಿಸುವ ನಿಯಮಾವಳಿಗಳನ್ನು ರಚಿಸಲಾಗಿದೆ. ಸದರಿ ಹೈದರಾಬಾದ್-ಕರ್ನಾಟಕ ವಿಶೇಷ ಸ್ಥಾನಮಾನ ನಿಯಮಾವಳಿ ರಚನೆ ಕುರಿತು ರಾಜ್ಯ ಸರ್ಕಾರದಿಂದ ರಚಿಸಲಾದ ಸಂಪುಟ ಉಪ ಸಮಿತಿಯಲ್ಲಿ ನಾನು ಸಹ ಒಬ್ಬ ಸದಸ್ಯನಾಗಿ ನಿಯಮಾವಳಿಗಳನ್ನು ರೂಪಿಸುವಲ್ಲಿ ಪಾಲ್ಗೊಂಡಿರುವುದು ನನಗೆ ಹೆಮ್ಮೆ ತರುವ ವಿಷಯವಾಗಿದೆ.  ಶೀಘ್ರದಲ್ಲೇ ಈ ಭಾಗದ ಜನರು ಇದರ ಸೌಲಭ್ಯ ಪಡೆಯಲಿದ್ದು, ಬಹು ವರ್ಷಗಳ ಕನಸು ನನಸಾಗುವ ದಿನ ಹತ್ತಿರವಾಗುತ್ತಿದೆ ಎಂಬುದನ್ನು ತಿಳಿಸಲು ನನಗೆ ಅತೀವ ಸಂತೋಷವೆನಿಸುತ್ತದೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ನಮ್ಮ ಸರ್ಕಾರ, ನೆನೆಗುದಿಗೆ ಬಿದ್ದಿರುವ ಅನೇಕ ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು “ಕೆರೆ ಅಭಿವೃದ್ಧಿ ಪ್ರಾಧಿಕಾg”ವನ್ನು ರಚಿಸಲು ಕ್ರಮ ಕೈಗೊಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲದ ಮಟ್ಟ ಸುಧಾರಣೆಯಾಗಲಿದೆ.  
ಪ್ರಸಕ್ತ ಸಾಲಿನಲ್ಲಿ ನಮ್ಮ ಜಿಲ್ಲೆಗೆ ನಬಾರ್ಡ್ ಯೋಜನೆಯಡಿ ೧,೦೭೬ ಲಕ್ಷ ರೂ. ವೆಚ್ಚದಲ್ಲಿ ೨೪ ಕಾಮಗಾರಿಗಳನ್ನು ಕೈಗೊಂಡು, ಇದರಿಂದ ೧೪೮೪ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೊಳಿಸಲು ಉದ್ದೇಶಿಸಲಾಗಿದೆ.  ಅದೇ ರೀತಿ ನಾನ್ ನಬಾರ್ಡ್ ಯೋಜನೆಯಡಿ ೪೩೬ ಲಕ್ಷ ರೂ. ವೆಚ್ಚದಲ್ಲಿ ಒಟ್ಟು ೯ ಕಾಮಗಾರಿಗಳನ್ನು ಪೂರ್ಣಗೊಳಿಸಿ, ೬೪೭ ಹೆಕ್ಟೇರ್ ಪ್ರದೇಶವನ್ನು ನೀರಾವರಿಯನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ.  ವಿಶೇಷ ಅಭಿವೃದ್ಧಿ ಯೋಜನೆಯಡಿ ೭೪೨.೫೦ ಲಕ್ಷ ರೂ. ಅನುದಾನದಲ್ಲಿ ಒಟ್ಟು ೧೧ ಕಾಮಗಾರಿಗಳನ್ನು ಕೈಗೊಂಡು ೮೫೩ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುವುದು.  ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ೩೩೫ ಲಕ್ಷ ರೂ. ವೆಚ್ಚದಲ್ಲಿ ೪೮ ಕಾಮಗಾರಿಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ.
೧೩ನೇ ಹಣಕಾಸು ಯೋಜನೆಯಡಿ ಜಿಲ್ಲೆಯಲ್ಲಿ ೨,೧೦೨.೩೨ ಲಕ್ಷ ರೂ. ಗಳ ವೆಚ್ಚದಲ್ಲಿ ೧೧೭೦ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಯೋಜನೆಗಳ ಪುನರುಜ್ಜೀವನ ಕಾಮಗಾರಿಗಳನ್ನು ಕೈಗೊಂಡಿದ್ದು, ೨೬ ಕಾಮಗಾರಿಗಳ ಪೈಕಿ ಈಗಾಗಲೇ ೨೧ ಕಾಮಗಾರಿಗಳು ಪೂರ್ಣಗೊಂಡಿವೆ.
ಜಿಲ್ಲೆಯಲ್ಲಿ ಈ ವರ್ಷ ಒಟ್ಟು ೩೫೦೩ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ, ಅಂತಹ ಮಕ್ಕಳಿಗೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ಔಷಧೋಪಚಾರ ನೀಡಲು ಕ್ರಮ ಕೈಗೊಳ್ಳಲಾಗಿದೆ.   ಜಿಲ್ಲೆಯ ತೀವ್ರ ಅಪೌಷ್ಠಿಕ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ಹಾಗೂ ಪೂರಕ ಪೌಷ್ಠಿಕ ಆಹಾರ ನೀಡಲು ೫೭೮.೪೪ ಲಕ್ಷ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ.  ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ಪ್ರಸಕ್ತ ಸಾಲಿಗೆ ೨೭ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ನಮ್ಮ ಸರ್ಕಾರ ಗ್ರಾಮ ಸ್ವರಾಜ್ಯ ಯೋಜನೆಯಡಿ ಜಿಲ್ಲೆಯ ಅತಿ ಹಿಂದುಳಿದ ತಾಲೂಕಾಗಿರುವ ಕುಷ್ಟಗಿಗೆ ಒಟ್ಟು ೨೪ ಹೆಚ್ಚುವರಿ ಅಂಗನವಾಡಿ ಕಟ್ಟಡಗಳು, ಜೊತೆಗೆ ಕೇಂದ್ರ ಸರ್ಕಾರದ ಒಂದಾವರ್ತಿ ಅನುದಾನದಡಿ  ಜಿಲ್ಲೆಯಲ್ಲಿ ಒಟ್ಟು ೪೩ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲು ೭೬೩.೮೦ ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ.
ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರಾಷ್ಟ್ರೀಯ ಮಾಧ್ಯಮಿಕ ಯೋಜನೆಯಡಿ ಪ್ರಸಕ್ತ ಸಾಲಿಗಾಗಿ ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳಿಗಾಗಿ ಶಾಲಾ ಕಟ್ಟಡ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ೨,೪೯೫.೭೩ ಲಕ್ಷ ರೂ. ಅನುದಾನ ನಿಗದಿಪಡಿಸಿದೆ.  ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಈ ವರ್ಷ ಜಿಲ್ಲೆಗೆ               ೪,೪೧೫.೧೪ ಲಕ್ಷ ರೂ. ಗಳ ಅನುದಾನ ಹಂಚಿಕೆ ಮಾಡಲಾಗಿದೆ.  
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ವರ್ಷ ಶೇ. ೮೧.೯೩ ರಷ್ಟು ಉತ್ತಮ ಫಲಿತಾಂಶ ಪಡೆದಿದ್ದು, ಕಳೆದ ವರ್ಷ ೨೬ನೇ ಸ್ಥಾನದಲ್ಲಿದ್ದ ನಮ್ಮ ಕೊಪ್ಪಳ ಜಿಲ್ಲೆ ಈ ವರ್ಷ ರಾಜ್ಯದಲ್ಲಿ ೧೬ನೇ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಿದೆ.  ಮುಂಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆ ಶೈಕ್ಷಣಿಕವಾಗಿ ಇನ್ನಷ್ಟು ಉತ್ತಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸುವ ಅಗತ್ಯವಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಒಂದು ಲಕ್ಷದ ಇಪ್ಪತ್ತೆಂಟು ಸಾವರಿದ ಆರು ನೂರ ನಲವತ್ತನಾಲ್ಕು (೧,೨೮,೬೪೪) ಕುಟುಂಬಗಳ ನೋಂದಣಿ ಮಾಡಿಸಿ, ಅವರಿಗೆ ಉದ್ಯೋಗ ಚೀಟಿಗಳನ್ನು ನವೀಕರಿಸಿ ದೃಢೀಕರಣಗೊಳಿಸಲಾಗಿದೆ.  ಪ್ರಸಕ್ತ ವರ್ಷ ಈ ಯೋಜನೆಗಾಗಿ ೮೧.೧೧ ಕೋಟಿ ರೂ. ಗಳ ಕ್ರಿಯಾ ಯೋಜನೆಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ತಯಾರಿಸಲಾಗಿದೆ.
ಈ ಯೋಜನೆಯಡಿ ಈಗಾಗಲೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ೪೩,೨೫೦ ಮಾನವ ದಿನಗಳನ್ನು ಸೃಜಿಸಲಾಗಿದ್ದು, ೮೮೧.೦೮ ಲಕ್ಷ ರೂ. ಗಳ ಅನುದಾನ ಬಳಕೆ ಮಾಡಲಾಗಿದೆ.
ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರೈತರು ತಮ್ಮ ಆರ್ಥಿಕ ಮಟ್ಟ ಸುಧಾರಿಸಲು ಅನುಕೂಲವಾಗುವಂತೆ ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮ ಹೊಲಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯುವಂತೆ ಮಾಡಲು ವಿಶೇಷ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು ೧೭,೫೦೦ ಕ್ಕೂ ಹೆಚ್ಚು ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸಿದ್ದು, ಇದರಿಂದ ಒಟ್ಟು ೨೭,೦೦೦ ಎಕರೆಯಷ್ಟು ಜಮೀನಿನಲ್ಲಿ ಮುಂದಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳು ಕಾಣಲಿವೆ.  ಇದಕ್ಕಾಗಿ ಒಟ್ಟು ೩೨ ಲಕ್ಷ ತೋಟಗಾರಿಕೆ ಬೆಳೆಗಳ ಸಸಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.  
ನಿರ್ಮಲ ಭಾರತ ಅಭಿಯಾನದಡಿ ಜಿಲ್ಲೆಯಲ್ಲಿ ಈ ವರ್ಷ ೩೦,೦೦೦ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.  ಈವರೆಗೆ ಒಟ್ಟು ೨೫ ಗ್ರಾಮ ಪಂಚಾಯತಿಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದಿವೆ.  ಈ ಬಾರಿ ಜಿಲ್ಲೆಯ ೧೬ ಗ್ರಾಮ ಪಂಚಾಯತಿಗಳನ್ನು, “ನಿರ್ಮಲ ಗ್ರಾಮ ಪುರಸ್ಕಾರ”ಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
“ಕೆರೆ ಅಭಿವೃದ್ಧಿ ಪ್ರಾಧಿಕಾರ” ರಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.  ಈ ದಿಶೆಯಲ್ಲಿ ಪ್ರವಾಹ ಕಾಲದಲ್ಲಿ ನದಿಯಿಂದ ಪೋಲಾಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಕೊಪ್ಪಳ ಜಿಲ್ಲೆಯ ಹಲವಾರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗುತ್ತಿದೆ.  ಇದರಿಂದ ಬರಗಾಲ ಪೀಡಿತ ಪ್ರದೇಶದ ನೂರಾರು ರೈತರಿಗೆ ಅನುಕೂಲವಾಗುವ ಜೊತೆಗೆ ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲ ಮಟ್ಟವನ್ನು ಸುಧಾರಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಕೊಪ್ಪಳ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಆಗಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ.  ಸದರಿ ಮೆಡಿಕಲ್ ಕಾಲೇಜನ್ನು ಕೂಡಲೇ ಪ್ರಾರಂಭಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ತಮಗೆ ತಿಳಿಸಲು ಹರ್ಷಿಸುತ್ತೇನೆ.
ಸಣ್ಣ ನೀರಾವರಿ ಇಲಾಖೆಯ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾರ್ಯಕ್ರಮ ಜಾರಿಯಲ್ಲಿದೆ.  ಆದರೆ ವಿದ್ಯುಚ್ಛಕ್ತಿ ಸಂಪರ್ಕ ಕೊರತೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಇದರಿಂದ ಪೂರ್ಣ ಪ್ರಯೋಜನ ಸಿಗುತ್ತಿಲ್ಲ.  ಈ ಸಮಸ್ಯೆ ನೀಗಿಸಲು ಸೋಲಾರ್ ಪಂಪ್ ಅಳವಡಿಸಿ ಅವರ ಜಮೀನುಗಳಿಗೆ ಕನಿಷ್ಟ, ದಿನದಲ್ಲಿ ೧೦ ಗಂಟೆ ನೀರು ಹಾಯಿಸುವ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.  ಕೊಪ್ಪಳ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಇದರ ಲಾಭ ಸಿಗುವಂತೆ ಕ್ರಮಕೈಗೊಳ್ಳಲಾಗುತ್ತಿದೆ.
ದೇಶ ಕಟ್ಟುವ ಕೆಲಸದಲ್ಲಿ ಮಹಾತ್ಮ ಗಾಂಧೀಜಿರವರು, ಜವಹಾರ್ ಲಾಲ್ ನೆಹರೂರವರು, ವಲ್ಲಭಬಾಯಿ ಪಟೇಲರಂತೆ ಅಪರಿಮಿತ ಸ್ವಾತಂತ್ರ್ಯ ಹೋರಾಟಗಾರರು ಬೆವರು ಮತ್ತು ರಕ್ತಗಳೆರಡನ್ನೂ ಹರಿಸಿದ್ದಾರೆ.  ಈ ಕಾರ್ಯದಲ್ಲಿ ಕೊಪ್ಪಳ ಜಿಲ್ಲೆಯ ಪಾಲೂ ಇದೆ.  ಅವರ ತ್ಯಾಗ, ಬಲಿದಾನಗಳ ಅರಿವು ಇಂದು ನಮ್ಮ ಮುನ್ನಡೆಗೆ ದಾರಿದೀಪವಾಗಬೇಕಾಗಿದೆ.  ಈ ದೇಶದ ಸರ್ವತೋಮುಖ ಪ್ರಗತಿಗೆ ನಾವು ನೀವೆಲ್ಲಾ ಕಂಕಣಬದ್ಧರಾಗೋಣ ಎಂದು ಹೇಳುತ್ತಾ, ತಮಗೆಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳನ್ನು ತಿಳಿಸಿ, ನನ್ನ ಮಾತು ಮುಗಿಸುತ್ತೇನೆ.  
“ಜೈ ಹಿಂದ್ – ಜೈ ಕರ್ನಾಟಕ “

Leave a Reply

Top