ರೈತರ ದತ್ತಾಂಶ ಸಂಗ್ರಹಣೆ ಅಭಿಯಾನ ಕೆ ಕಿಸಾನ ಕಾರ್ಯಕ್ರಮ ಜಾರಿ

 ರೈತರು ಮತ್ತು ರೈತರ ಕೃಷಿ ಭೂಮಿ ಬಗ್ಗೆ ಸಂಪೂರ್ಣವಾಗಿ ವಿವರಗಳನ್ನು ಸಂಗ್ರಹಿಸಿ ಸರಕಾರದ ಯೋಜನೆಯನ್ನು ನೇರವಾಗಿ ರೈತರಿಗೆ ತಲುಪಿಸಲು ಕೃಷಿ ಇಲಾಖೆಯು ಕೆ ಕಿಸಾನ್ ನೂತನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ೪ ತಾಲೂಕುಗಳ ಕಸಬಾ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ಇಲಾಖೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿಕರ ಮಾಹಿತಿ ಸಂಗ್ರಹಣೆ ಕಾರ್ಯ ಮೇ.೦೫ ರಿಂದ ರೈತ ಅನುವುಗಾರರ ಮೂಲಕ ಆರಂಭಗೊಳ್ಳಲಿದೆ. ರೈತರ ದತ್ತಾಂಶ ಸಂಗ್ರಹಣೆ ಕಾರ್ಯವನ್ನು ಜೂ.೧೫ ರೊಳಗಾಗಿ ಪೂರ್ಣಗೊಳಿಸಲಾಗುವುದು. ಮೊದಲ ಹಂತದ ಕಾರ್ಯಕ್ರಮ ಬಳಿಕ ಉಳಿದ ಎಲ್ಲಾ ಕಂದಾಯ ಹೋಬಳಿಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು, ಸಮೀಕ್ಷೆ ಪೂರ್ಣಗೊಂಡ ಬಳಿಕ ಆಧಾರ್ ಮಾದರಿಯಲ್ಲಿ ಪ್ರತಿಯೊಬ್ಬ ರೈತರಿಗೂ ಕೃಷಿ ಇಲಾಖೆ ವತಿಯಿಂದ ಅಧಿಕೃತ ಸಂಖ್ಯೆಯೊಂದನ್ನು ನೀಡಲಾಗುತ್ತದೆ. ರೈತರು ತಮಗೆ ನೀಡಿರುವ ಅಧಿಕೃತ ಸಂಖ್ಯೆಯನ್ನು ನೀಡಿ ತಮಗೆ ಸರಕಾರ ಸಿದ್ಧಪಡಿಸಿರುವ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ. 
ಸದ್ಯ ಪ್ರತಿ ತಾಲೂಕಿನ ಕಸಬಾ ಹೋಬಳಿಗಳಿಗೆ ಒಳಪಡುವ ರೈತರು ಕೆ ಕಿಸಾನ್ ಯೋಜನೆಯಡಿ ನೊಂದಾಯಿಸಲು ಅಗತ್ಯ ದಾಖಲೆಗಳಾದ ಆಧಾರ್, ಎಪಿಕ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಪಹಣಿ ಜೆರಾಕ್ಸ್ ಪ್ರತಿಗಳನ್ನು ಸಿದ್ದಪಡಿಸಿ ಇಟ್ಟುಕೊಳ್ಳಬೇಕು. ರೈತ ಅನುವುಗಾರರು ಮಾಹಿತಿ ಸಂಗ್ರಹಣೆಗಾಗಿ ಬಂದಾಗ ಅರ್ಜಿ ನಮೂನೆಯಲ್ಲಿರುವ ಎಲ್ಲಾ ಮಾಹಿತಿಯನ್ನು ನೀಡಿ ಸಹಕರಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು, ಕೊಪ್ಪಳ ಇವರು   ಮನವಿ ಮಾಡಿದ್ದಾರೆ.

Leave a Reply