ವಿದ್ಯಾರ್ಥಿದೆಸೆಯಲ್ಲಿಯೇ ಕಾನೂನಿನ ಜ್ಞಾನ ಹೊಂದುವುದು ಸೂಕ್ತ ಶಿವರಾಮ್ ಕೆ.

 ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿಯೇ ಕಾನೂನಿನ ಜ್ಞಾನ ಹೊಂದುವುದು, ಇಂದಿನ ದಿನಮಾನಕ್ಕೆ ಸೂಕ್ತ ಎಂದು ಕೊಪ್ಪಳದ ಸಿವಿಲ್ ಜಡ್ಜ್ (ಹಿರಿಯ ವಿಭಾಗ) ಶಿವರಾಮ್ ಕೆ. ಅವರು ಅಭಿಪ್ರಾಯಪಟ್ಟರು.
  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
  ಶಾಲಾ ಮಕ್ಕಳಿಗೆ ಕಾನೂನು ಹಲವಾರು ಹಕ್ಕುಗಳನ್ನು ಕೊಡಮಾಡಿದೆ, ಈ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿ ಅರಿವು ಹೊಂದುವುದು ಅಗತ್ಯ.  ವಿದ್ಯಾರ್ಥಿಗಳು ಶಿಸ್ತು ಬದ್ಧ ಜೀವನವನ್ನು ಮೈಗೂಡಿಸಿಕೊಂಡಲ್ಲಿ, ಅವರ ಭವಿಷ್ಯ ಉಜ್ವಲವಾಗಲಿದೆ.  ಇಲ್ಲದಿದ್ದಲ್ಲಿ ಅಪರಾಧ ಲೋಕದ ಸುಳಿವಿಗೆ ವಿದ್ಯಾರ್ಥಿಗಳು ಬಲಿಯಾಗುವ ಪರಿಸ್ಥಿತಿ ಒದಗುತ್ತದೆ.  ಮೌಲ್ಯಾಧಾರಿತ ಜೀವನ ಪದ್ಧತಿಯಿಂದ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದ್ದು, ಕೇವಲ ಸರ್ಕಾರಿ ಉದ್ಯೋಗವನ್ನೇ ದೃಷ್ಟಿಯಾಗಿಟ್ಟುಕೊಂಡು ವ್ಯಾಸಂಗ ಮಾಡಬಾರದು.  ಅಂಕಗಳು ಕಡಿಮೆ ಬಂದ ಮಾತ್ರಕ್ಕೆ ಅಧೈರ್ಯಗೊಂಡು ವಿದ್ಯಾರ್ಥಿಗಳು ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳಬಾರದು.  ಅದೂ ಸಹ ಕಾನೂನಿಗೆ ವಿರುದ್ಧವಾಗಿದ್ದು, ಜಗತ್ತು ವಿಶಾಲವಾಗಿದ್ದು, ಬದುಕು ಕಟ್ಟಿಕೊಳ್ಳಲು ನೂರೆಂಟು ಮಾರ್ಗಗಳಿವೆ.  ಸ್ವಯಂ ಉದ್ಯೋಗ ಕೈಗೊಳ್ಳುವವರೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.  ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ ಕಾನೂನಿನ ಅರಿವು ಹೊಂದಿದಲ್ಲಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಹಕಾರಿಯಾಗಲಿದೆ.  ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ, ಶೋಷಿತರಿಗೆ ಉಚಿತ ಕಾನೂನು ನೆರವು ಮತ್ತು ಸಲಹೆ ನೀಡುತ್ತಿದೆ.  ಕಾನೂನು ಸೇವಾ ಪ್ರಾಧಿಕಾರದ ಸಹಾಯವನ್ನು ಅನ್ಯಾಯಕ್ಕೊಳಗಾದವರು ಪಡೆದುಕೊಳ್ಳಬಹುದು.  ತಮ್ಮ ಹಕ್ಕುಗಳನ್ನು ಪಡೆಯಲು ಕಾನೂನಿನ ಜ್ಞಾನ ಹೊಂದಬೇಕು ಎಂದು ಸಿವಿಲ್ ಜಡ್ಜ್ ಕೆ. ಶಿವರಾಮ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ ಕಾವೇರಿ ಅವರು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳೇ, ಮುಂದಿನ ಭವಿಷ್ಯದ ನಾಗರೀಕರು, ನಮ್ಮ ದೇಶದ ಮುಂದಿನ ನಾಗರೀಕತೆ ಹೆಚ್ಚು ಗುಣಮಟ್ಟದ್ದಾಗಿರಬೇಕು ಎಂದರೆ ವಿದ್ಯಾರ್ಥಿಗಳು ತಮ್ಮ  ಹಕ್ಕುಗಳ ಬಗ್ಗೆ ಹಾಗೂ ಕಾನೂನಿನ ಬಗ್ಗೆ ತಿಳುವಳಿಕೆ ಹೊಂದಿರಬೇಕು.  ನಮ್ಮ ದೇಶದ ಸಂವಿಧಾನ ಸಾಮಾಜಿಕ ನ್ಯಾಯ ಒದಗಿಸುವಂತಹ ಉನ್ನತ ವ್ಯವಸ್ಥೆಯಾಗಿದ್ದು, ಎಲ್ಲರೂ ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಬೇಕು,  ಅದರಲ್ಲಿನ ಪ್ರಮುಖ ಅಂಶಗಳು, ಮೂಲಭೂತ ಹಕ್ಕುಗಳ ಬಗ್ಗೆ ಹಾಗೂ ನಮ್ಮ ದೇಶದ ಕಾನೂನು ವ್ಯವಸ್ಥೆಯ ಬಗ್ಗೆ ಜ್ಞಾನ ಹೊಂದಬೇಕು.  ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಯಾವ ರೀತಿ ಜೀವನ ರೂಪಿಸಿಕೊಳ್ಳುತ್ತಾರೆಯೋ, ಅವರ ಭವಿಷ್ಯದ ಬದುಕು ಅದೇ ರೀತಿಯಲ್ಲಿಯೇ ರೂಪುಗೊಳ್ಳುತ್ತದೆ ಎಂದರು.
  ಕಾರ್ಯಕ್ರಮದ ಅಂಗವಾಗಿ ಬಾಲನ್ಯಾಯ ಮಂಡಳಿ ಸದಸ್ಯೆ ಸಾವಿತ್ರಿ ಮುಜುಂದಾರ್ ಅವರು ಮಕ್ಕಳ ಪಾಲನೆ ಮತ್ತು ಸಂರಕ್ಷಣೆ ಕುರಿತು, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ.ವಿ. ಕಣವಿ ಅವರು ಮೂಲಭೂತ ಹಕ್ಕುಗಳು ಹಾಗೂ ಜನನ ಮತ್ತು ಮರಣ ನೊಂದಣಿ ಕಾಯ್ದೆ ಕುರಿತು ಹಾಗೂ ಸಮಾಜಶಾಸ್ತ್ರ ಉಪನ್ಯಾಸಕಿ ಸರೋಜ ಅವರು ಮಕ್ಕಳ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಮತ್ತು ಪಾಲಕರ ಕರ್ತವ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
  ಪ್ರಾಚಾರ್ಯ ಎಸ್.ಬಿ. ರಾಜೂರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶರಣಪ್ಪ ನಾಯಕ, ಕೊಪ್ಪಳ ಪಿಎಸ್‌ಐ ಬಸವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಜಪೂತ್ ಎಸ್.ಎ. ಅವರು ಸ್ವಾಗತಿಸಿದರು, ಉಪನ್ಯಾಸಕ ಬಸವರಾಜ ಸವಡಿ ವಂದಿಸಿದರು, ಹೆಚ್.ಎಸ್. ಬಾರಕೇರ ಕಾರ್ಯಕ್ರಮ ನಿರೂಪಿಸಿದರು.

Leave a Reply