ಕ.ಸಾ.ಪ. ನಿಂಗೋಜಿಯವರ ಪಿತ್ರಾರ್ಜಿತ ಆಸ್ತಿಯಲ್ಲ – ಹನುಮಂತಪ್ಪ ಅಂಡಗಿ

ಕೊಪ್ಪಳ :- ಕನ್ನಡ ಸಾಹಿತ್ಯ ಪರಿಷತ್ತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಪ್ರತಿಯೊಬ್ಬ ಕನ್ನಡಿಗರ ಆಸ್ತಿ. ಇದಕ್ಕೆ ಭವ್ಯವಾದ ಪರಂಪರೆ ಇದೆ. ಇದು ಯಾರೊಬ್ಬರ ಸೊತ್ತಲ್ಲ. ಹೀಗಿದ್ದೂ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ವೀರಣ್ಣ ನಿಂಗೋಜಿಯವರು ಕ.ಸಾ.ಪ ತಮ್ಮ ಮನೆಯ ಪಿತ್ರಾರ್ಜಿತ ಆಸ್ತಿಯಂತೆ ಹೇಳಿಕೆ ನೀಡಿರುವುದು ದುರಂತದ ಸಂಗತಿ. ಹನುಮಂತಪ್ಪ ಅಂಡಗಿ ಚಿಲವಾಡಗಿ  ಕ.ಸಾ.ಪ. ದ ಉಸಾಬರಿಗೆ ಬಾರದಿರಲಿ ಎಂದು ಹೇಳಿಕೆ ನೀಡಿರುವ ಇವರು ತಮ್ಮ ಹೇಳಿಕೆಯನ್ನು ಹಿಂಪಡೆಯಲಿ ಇಲ್ಲವೇ ಕ್ಷಮೆ ಕೇಳಲಿ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿರುಗೇಟು ನೀಡಿದ್ದಾರೆ. 
ನಿಂಗೋಜಿಯವರು ಒಬ್ಬ ಪತ್ರಕರ್ತರು.ಪತ್ರಕರ್ತರಾದವರು ಯಾರ ಮೇಲೆಯೇ ಆಗಲಿ ಯಾವುದೇ ಆಪಾದನೆಯನ್ನು ಮಾಡುವ ಮೊದಲು ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳುತ್ತಾರೆ. ಆದರೆ ನಿಂಗೋಜಿಯವರು ನಾನು ಅಭಿನಂದನಾ ಗ್ರಂಥಗಳಿಗೆ ಸಂಭಾವನೆ ಪಡೆಯುತ್ತಿದ್ದೇನೆ ಎಂಬ ಆದಾರರಹಿತ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾನು ಯಾವ ಅಭಿನಂದನಾ ಗ್ರಂಥಕ್ಕೂ ಸಂಭಾವನೆ ಪಡೆದಿರುವುದಿಲ್ಲ. ನಿಂಗೋಜಿಯವರು ಈ ಆರೋಪ ಸಾಬೀತುಪಡಿಸಲಿ. ಈ ಆರೋಪ ಸಾಬೀತಾಗದಿದ್ದಲ್ಲಿ ಅನ್ಯರ ಮೇಲೆ ಆದಾರರಹಿತ ಆರೋಪ ಹೊರಿಸಿದ  ಕಾರಣಕ್ಕೆ ನೈತಿಕ ಹೊಣೆ ಹೊತ್ತು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲಿ. ಇಲ್ಲದಿದ್ದರೆ ಇವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ. 
ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯನಾಗಿರುವ ನನಗೆ ಕ.ಸಾ.ಪ ನಡೆಸುವ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವ, ಸೂಕ್ತ ಸಂದರ್ಭದಲ್ಲಿ ಸಲಹೆ ನೀಡುವ ಹಕ್ಕಿದೆ. 
ಎಂ.ಎಸ್. ಸವದತ್ತಿಯವರು ಸಾಹಿತಿಗಳೇ ಅಲ್ಲವೆಂದು ಹೇಳಿರುವ ನಿಂಗೋಜಿಯವರು ಬಿಜಾಪೂರ ಸಾಹಿತ್ಯ ಸಮ್ಮೇಳನದಲ್ಲಿ ಇವರ ಯಾವ ಕ್ಷೇತ್ರದ ಪರಿಗಣನೆಗಾಗಿ ಸನ್ಮಾನ ಮಾಡಿಸಿರುವರಿ? 
ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೊಗಳಿಕೆ, ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಕೇವಲ ಹೊಗಳಿಕೆ ಅಷ್ಟೆ ಬೇಕೆಂದರೆ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಲಿ  ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ನಿಂಗೋಜಿಯವರಿಗೆ ಸಲಹೆ ನೀಡಿದ್ದಾರೆ. 

Leave a Reply