ಫೆ.೦೪ ರಂದು ಕೊಪ್ಪಳದಲ್ಲಿ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮ

 ಆಧುನೀಕರಣ ಭರಾಟೆಯಲ್ಲಿ ದೇಶಿಯ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇವುಗಳನ್ನು ಘೋಷಿಸಲು ಅನುಕೂಲವಾಗುವಂತೆ ವಾರ್ತಾ ಇಲಾಖೆಯು ಇದೇ ಫೆ.೦೪ ರಂದು ಕೊಪ್ಪಳದಲ್ಲಿ ಬುಡಕಟ್ಟು ಕಲಾವಿದರ ಜನಪದ ಕಲೆಗಳನ್ನು ಪ್ರದರ್ಶಿಸುವ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಅಶೋಕ ವೃತ್ತದಲ್ಲಿರುವ ಸಾಹಿತ್ಯ ಭವನದಲ್ಲಿ ಸಂಜೆ ೬.೦೦ ಗಂಟೆಗೆ ಆಯೋಜಿಸಲಾಗಿದೆ. 
ಇಂದಿನ ದಿನಗಳಲ್ಲಿ ಜನಪದ ಕಲೆಗಳು ಪ್ರೋತ್ಸಾಹಕರ ಬೆಂಬಲವಿಲ್ಲದೆ ಅವನತಿಯ ಹಾದಿ ಹಿಡಿಯುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನಪದ ಕಲೆಗಳ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಅನೇಕ ಪ್ರಗತಿಪರ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಇಂತಹ ಕಲೆಗಳಿಗೆ ಪುನರುಜ್ಜೀವನ ನೀಡುವ ಉದ್ದೇಶ ಹೊಂದಿದೆ.
ಈ ಹಿನ್ನಲೆಯಲ್ಲಿ ವಾರ್ತಾ ಇಲಾಖೆಯು ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮವನ್ನು ಇದೇ ಫೆ.೦೪ ರಂದು ಕೊಪ್ಪಳದಲ್ಲಿ ಏರ್ಪಡಿಸುವ ಮೂಲಕ ಈ ಕಲೆಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಕಲಾಸಕ್ತರ ಸಮಕ್ಷಮ ಪ್ರದರ್ಶನವನ್ನು ಏರ್ಪಡಿಸಿದೆ.
ಈ ಉತ್ಸವದಲ್ಲಿ ದೈವೀ ಆರಾಧನೆಯ ಹಿನ್ನಲೆಯಲ್ಲಿ ಬೆಳೆದು ಬಂದ ಮಹಿಳಾ ಡೊಳ್ಳು ಕುಣಿತ, ಜಾತ್ರಾ ಉತ್ಸವಗಳಲ್ಲಿ ಸಂಭ್ರಮ ಹೆಚ್ಚಿಸುವ ತಾಷಾರಂಡೋಲ, ಬುಡಕಟ್ಟು ಜನರ ಬದುಕನ್ನು ಅನಾವರಣಗೊಳಿಸುವ ಹಕ್ಕಿ-ಪಿಕ್ಕಿ ಜನಪದ ಕುಣಿತ, ಶತಮಾನಗಳ ಹಿಂದೆ ಆಫ್ರಿಕಾದಿಂದ ವಲಸೆ ಬಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆ ಕಂಡುಕೊಂಡಿರುವ ಸಿದ್ಧಿ ಜನಾಂಗದವರು ಪ್ರದರ್ಶಿಸುವ ಢಮಾಮಿ ಕುಣಿತ ಹಾಗೂ ಪುಗಡಿ ಕುಣಿತ ಸೇರಿದಂತೆ ಇತರ ಕಲಾ ಪ್ರಕಾರಗಳು ಕರ್ನಾಟಕ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮದಲ್ಲಿ ಅನಾವರಣಗೊಳ್ಳಲಿದೆ. 
ಕೊಪ್ಪಳದಲ್ಲಿ ಪ್ರಪ್ರಥಮ ಬಾರಿಗೆ ಏರ್ಪಡಿಸಿರುವ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವಂತೆ ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ಕಂಬಿ, ಸಹಾಯಕ ನಿರ್ದೇಶಕರಾದ ಬಿ.ವಿ.ತುಕಾರಾಂ ಹಾಗೂ ಜಾನಪದ ಸಂಭ್ರಮದ ನಿರ್ದೇಶಕರಾದ ಅಮರದೇವ ಅವರು ಕೋರಿದ್ದಾರೆ. 
Please follow and like us:
error

Related posts

Leave a Comment