ಮಾನ್ವಿಯ ಮಹನೀಯರು ಮತ್ತು ಸಂಸಾರ ಸಗ್ಗ ಕೃತಿಗಳ ಬಿಡುಗಡೆ ಸಮಾರಂಭ

ಕೊಪ್ಪಳ: ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಇವರ ಸಂಪಾದಕತ್ವದಲ್ಲಿ ಸಂಗ್ರಹಗೊಂಡಿರುವ ಮಾನ್ವಿ ತಾಲೂಕಿನ ಸಾಹಿತ್ಯ ಕ್ಷೇತ್ರದ ೫೦ ಜನ ಮಹನೀಯರ ಜೀವನ ಚರಿತ್ರೆಗಳ ’ಮಾನ್ವಿಯ ಮಹನೀಯರು’ ಮತ್ತು ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಅವರ ಕುಟುಂಬದಲ್ಲಿ ನಡೆದ ಹಾಸ್ಯ ಪ್ರಸಂಗಗಳ ’ಸಂಸಾರ ಸಗ್ಗ’ ಎಂಬ ಎರಡು ಕೃತಿಗಳ ಬಿಡುಗಡೆ ಸಮಾರಂಭವನ್ನು ಕೊಪ್ಪಳದ ಮೇಘನಾ ಪ್ರಕಾಶನ ವತಿಯಿಂದ ಅ.೧೯ ರಂದು ರವಿವಾರ ಬೆಳಿಗ್ಗೆ ೧೦ ಗಂಟೆಗೆ ತಾಲೂಕಾ ಪಂಚಾಯತ್ ಸಭಾಂಗಣ ಮಾನ್ವಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಈ ಎರಡು ಕೃತಿಗಳ ಲೋಕಾರ್ಪಣೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಕಾರ್ಯಕ್ರಮ ಉದ್ಘಾಟಿಸುವರು. ಸುದ್ದಿಮೂಲ ಪತ್ರಿಕೆಯ ತಾಲೂಕಾ ವರದಿಗಾರ ಪಿ.ಪರಮೇಶ ಅಧ್ಯಕ್ಷತೆ ವಹಿಸುವರು. 
ಮಾನ್ವಿಯ ಮಹನೀಯರು ಕೃತಿಯ ಕುರಿತು ಸಿಂಧನೂರಿನ ನಿವೃತ್ತ ಪ್ರಾಚಾರ್ಯ ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಮಾತನಾಡುವರು. ಸಂಸಾರ ಸಗ್ಗ ಕೃತಿಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪೋಸ್ಟ್ ಡಾಕ್ಟ್ರೋಲ್ ಫೆಲೋ ಡಾ.ಗಾದೆಪ್ಪ ಸಿದ್ರಾಂಪೂರ ಮಾತನಾಡುವರು. ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಕೆ.ಈ.ನರಸಿಂಹ, ರಾಷ್ಟ್ರಕವಿ ಕುವೆಂಪು ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ರಮೇಶಬಾಬು ಯಾಳಗಿ ಭಾಗವಹಿಸುವರು.
ಈ ಸಂಧರ್ಭದಲ್ಲಿ ಗ್ರಂಥ ದಾನಿಗಳಾದ ಪುರಸಭೆ ಸದಸ್ಯ ಸಬ್ಜಲಿಸಾಬ್,  ಪೋತ್ನಾಳ್ ಜ್ಞಾನಭಾರತಿ ವಿದ್ಯಾಮಂದಿರ ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ್ ಇವರನ್ನು ಸನ್ಮಾನಿಸಲಾಗುವುದು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹಾಗೂ ತಾಲೂಕಾ ಜಾನಪದ ಪರಿಷತ್ತು ಇವುಗಳ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಕಲರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮೇಘನಾ ಪ್ರಕಾಶನದ ಪ್ರಕಾಶಕರಾದ ಮಂಜುಳಾ ಎಸ್.ಕೊಟ್ನೆಕಲ್   ಕೋರಿದ್ದಾರೆ.

Related posts

Leave a Comment