ಆನ್‌ಲೈನ್ ಮುದ್ರಿತವಾದ ಜನನ ಮರಣ ಪ್ರಮಾಣ ಪತ್ರ ಕಡ್ಡಾಯ.

ಕೊಪ್ಪಳ, ಸೆ.೧೫ (ಕ ವಾ) ಆನ್‌ಲೈನ್ ಮುದ್ರಿತವಾದ ಜನನ ಮರಣ ಪ್ರಮಾಣ ಪತ್ರಗಳನ್ನು ಎಲ್ಲಾ ಉದ್ದೇಶ ಅಥವಾ ಉಪಯೋಗಗಳಿಗೆ ಕಡ್ಡಾಯಗೊಳಿಸಿ ಮುಖ್ಯ ನೋಂದಣಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ. 
            ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ೨೦೧೫ ರ ಫೆಬ್ರವರಿ ೦೧, ಮಾರ್ಚ್ ೦೧ ಮತ್ತು ಏಪ್ರೀಲ್ ೦೧ ರಿಂದ ಹಂತ ಹಂತವಾಗಿ ಜನನ, ಮರಣ ಮತ್ತು ನಿರ್ಜೀವ ಜನನ ಘಟನೆಗಳನ್ನು ಎನ್.ಐ.ಸಿ ವತಿಯಿಂದ ಅಭಿವೃದ್ಧಿಪಡಿಸಿರುವ ಇ-ಜನ್ಮ ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ, ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ನೀಡಲು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ೨೦೧೫ರ ಜುಲೈ ೦೧ ರಿಂದ ನಗರ ಪ್ರದೇಶದ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿ, ಗಣಕೀಕೃತ ಪ್ರಮಾಣ ಪತ್ರಗಳನ್ನು ನೀಡಲು ಸಹ ಕಡ್ಡಾಯಗೊಳಿಸಲಾಗಿದೆ.
            ಈ ಹಿನ್ನೆಲೆಯಲ್ಲಿ ಎಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪನೋಂದಣಾಧಿಕಾರಿಗಳು ೨೦೧೫ ರ ಸೆಪ್ಟಂಬರ್ ೦೧ ರಿಂದ ಕಡ್ಡಾಯವಾಗಿ ಜಾರಿಗೆ ಬರುವಂತೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ, ಗಣಕಯಂತ್ರದಿಂದ ಮುದ್ರಿತವಾದ ಜನನ, ಮರಣ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಕೈ ಬರಹದ ಪ್ರಮಾಣ ಪತ್ರಗಳನ್ನು ನೀಡಲು ಅವಕಾಶವಿರುವುದಿಲ್ಲ. ಅಲ್ಲದೆ, ೨೦೧೫ ರ ಸೆಪ್ಟಂಬರ್ ೦೧ ದಿನಾಂಕದ ನಂತರ ನೀಡುವ ಕೈಬರಹದ ಪ್ರಮಾಣ ಪತ್ರಗಳಿಗೆ ಮಾನ್ಯತೆ ಇರುವುದಿಲ್ಲ. ಆದ್ದರಿಂದ ಆನ್‌ಲೈನ್ ನೋಂದಣಿ ಜಾರಿಗೆ ಬಂದ ನಂತರ ಘಟಿಸುವ ಜನನ ಮರಣ ಘಟನೆಗಳ ಗಣಕೀಕೃತ ಪ್ರಮಾಣ ಪತ್ರಗಳನ್ನೇಹಾಜರುಪಡಿಸುವಂತೆ ಸಂಬಂಧಿಸಿದ ಎಲ್ಲಾ ಪ್ರಾಧಿಕಾರಗಳು ಸಾರ್ವಜನಿಕರಿಗೆ ಕಡ್ಡಾಯಗೊಳಿಸಬೇಕು ಹಾಗೂ ಕೈ ಬರಹದ ಪ್ರಮಾಣ ಪತ್ರಗಳನ್ನು ಅಂಗಕರಿಸಕೂಡದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Please follow and like us:
error