ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ವಿಪತ್ತು ನಿರ್ವಹಣೆಗೆ ಸಹಕಾರಿ : ಆರ್. ಮನೋಜ್

  ಪ್ರಕೃತಿ ವಿಕೋಪ ಅಥವಾ ಮಾನವ ನಿರ್ಮಿತ ವಿಪತ್ತುಗಳ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡಲ್ಲಿ, ತ್ವರಿತವಾಗಿ ಹಾಗೂ ಸಮರ್ಥವಾಗಿ ವಿಕೋಪವನ್ನು ನಿರ್ವಹಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ವಿಕೋಪ ನಿರ್ವಹಣಾ ಯೋಜನೆಯ ಅಧಿಕಾರಿ ಹಾಗೂ ರಾಜ್ಯ ಸಹಕಾರ ಇಲಾಖೆ ಅಪರ ಕಾರ್ಯದರ್ಶಿ ಆರ್. ಮನೋಜ್ ಅವರು ಹೇಳಿದರು.
     ಕೊಪ್ಪಳ ಜಿಲ್ಲೆಯ ವಿಪತ್ತು ನಿರ್ವಹಣೆ ಯೋಜನೆಯನ್ನು ಸ್ವಯಂಚಾಲನೆಗೊಳಿಸುವ ಸಂಬಂಧ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದಲ್ಲಿ ವಿಕೋಪ ನಿರ್ವಹಣೆಗೆ ಸದ್ಯ ಇರುವ ವ್ಯವಸ್ಥೆ ಬಹಳಷ್ಟು ಹಳೆಯದಾಗಿದೆ.  ವಿಕೋಪ ನಿರ್ವಹಣೆಗೆ ೨೦೦೫ ರಲ್ಲಿಯೇ ಕಾಯ್ದೆ ಜಾರಿಗೊಳಿಸಲಾಗಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಮಹತ್ವದ ಜವಾಬ್ದಾರಿ ಇದೆ.  ಎಲ್ಲ ಇಲಾಖೆಗಳು ಕಂಪ್ಯೂಟರೀಕರಣಗೊಳ್ಳುತ್ತಿರುವ ಈ ಕಾಲದಲ್ಲಿ, ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ, ವಿಕೋಪ ನಿರ್ವಹಣೆ ಅತ್ಯಂತ ಸುಲಭವಾಗಲಿದೆ.  ಯಾವುದೇ ಬಗೆಯ ವಿಪತ್ತು ನಿರ್ವಹಣೆಯಲ್ಲಿ ಕಂದಾಯ, ಆಹಾರ, ಪೊಲೀಸ್, ಪಂಚಾಯತಿ ರಾಜ್ ಸೇರಿದಂತೆ ಎಲ್ಲ ಇಲಾಖೆಗಳಿಗೂ ತನ್ನದೇ ಆದ ಮಹತ್ವಪೂರ್ಣ ಜವಾಬ್ದಾರಿ ಇದೆ.  ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳೂ ತಮ್ಮ ತಮ್ಮ ಜವಾಬ್ದಾರಿಯನ್ನು ವಹಿಸಿ, ತ್ವರಿತವಾಗಿ ವಿಪತ್ತಿಗೆ ಸ್ಪಂದಿಸುವ ರೀತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ.  ಉದಾಹರಣಗೆ ಯಾವುದೋ ಒಂದು ಪ್ರದೇಶ ಪ್ರವಾಹಕ್ಕೆ ಒಳಗಾದಲ್ಲಿ, ಜನರ ರಕ್ಷಣೆಗೆ ಅಗತ್ಯವಿರುವ ಕ್ರಮಗಳು, ಸುರಕ್ಷಿತ ಸ್ಥಳಗಳಿಗೆ ಸಂತ್ರಸ್ಥರನ್ನು ಸಾಗಿಸುವುದು, ಗಂಜಿ ಕೇಂದ್ರ ಪ್ರಾರಂಭ ಹೀಗೆ ಯಾವುದೇ ನಿರ್ವಹಣಾ ಕಾರ್ಯಗಳಿಗೂ ಸೂಕ್ತ ಸಂಪರ್ಕ ಹಾಗೂ ಮಾಹಿತಿಗಳ ವಿವರ ಹೊಂದಬೇಕಾಗುತ್ತದೆ.  ಕಂಪ್ಯೂಟರೀಕರಣ, ಜಿಪಿಎಸ್ ವ್ಯವಸ್ಥೆ ಹೀಗೆ ತಂತ್ರಜ್ಞಾನ ಬಳಕೆಯಿಂದ ಕೆಲವೇ ಸೆಕೆಂಡುಗಳಲ್ಲಿ ಎಲ್ಲ ಮಾಹಿತಿಯನ್ನು ಪಡೆದು, ನಿರ್ವಹಣಾ ಕಾರ್ಯ ಕೈಗೊಳ್ಳಲು ಸಮಯದ ಉಳಿತಾಯ ಹಾಗೂ ಹೆಚ್ಚಿನ ಅನಾಹುತವನ್ನು ತಡೆಗಟ್ಟಬಹುದಾಗಿದೆ.  ಈ ನಿಟ್ಟಿನಲ್ಲಿ ಈಗಾಗಲೆ ಇಂತಹ ವ್ಯವಸ್ಥೆಯನ್ನು ರಾಯಚೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ, ಅಲ್ಲಿ ಯಶಸ್ಸು ಪಡೆಯಲಾಗಿದೆ.  ಇದೀಗ ಎರಡನೆ ಹಂತದಲ್ಲಿ ರಾಜ್ಯದ ಕೊಪ್ಪಳ, ಕೊಡಗು, ಬಾಗಲಕೋಟೆ, ಧಾರವಾಡ, ಬಿಜಾಪುರ ಮತ್ತು ಚಿಕ್ಕಮಗಳೂರು ಸೇರಿ ಒಟ್ಟು ೦೬ ಜಿಲ್ಲೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಸ್ವಯಂ ಚಾಲಿತ ವಿಕೋಪ ನಿರ್ವಹಣಾ ಯೋಜನೆ ಜಾರಿಗೊಳಿಸಲಾಗುತ್ತಿದೆ.  ಇದಕ್ಕಾಗಿ ಬೆಂಗಳೂರಿನ ವಿಜ್ಹಾರ್‍ಡ್ ಟೆಕ್ನಾಲಜಿ ಸಂಸ್ಥೆಯವರು ಸಾಫ್ಟವೇರ್ ಅಭಿವೃದ್ಧಿಪಡಿಸಿ ನೀಡಿದ್ದು, ಹಂತ ಹಂತವಾಗಿ ಸಾಫ್ಟ್‌ವೇರ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಹ ಉದ್ದೇಶಿಸಲಾಗಿದೆ.  ೨೦೧೩ ರ ಡಿಸೆಂಬರ್ ಮಾಸಾಂತ್ಯದ ವೇಳೆಗೆ ಈ ೦೬ ಜಿಲ್ಲೆಗಳಲ್ಲೂ ಸ್ವಯಂ ಚಾಲಿತ ವಿಕೋಪ ನಿರ್ವಹಣಾ ಯೋಜನೆ ಸಿದ್ಧವಾಗಲಿದೆ ಎಂದು ರಾಜ್ಯ ಸಹಕಾರ ಇಲಾಖೆ ಅಪರ ಕಾರ್ಯದರ್ಶಿ ಆರ್. ಮನೋಜ್ ಅವರು ಹೇಳಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಮಂಜುನಾಥ್, ಆಡಳಿತ ತರಬೇತಿ ಅಧಿಕಾರಿ ಜಿ. ವಿಶ್ವನಾಥ್, ವಿಜ್ಹಾರ್ಡ್ ಟೆಕ್ನಾಲಜಿ ಸಂಸ್ಥೆಯ ಸುಮೀಂದ್ರನಾಥ್, ಆರ್. ಧರ್ಮರಾಜು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
Please follow and like us:
error