ಡಿಸಿಎಂ ಹುದ್ದೆಗೆ ಕಿತ್ತಾಟ ಸಚಿವಾಕಾಂಕ್ಷಿಗಳ ಪೈಪೋಟಿ

*ಗೊಂದಲದ ಗೂಡಾದ ಬಿಜೆಪಿ *ಮತ್ತೊಂದು ಸಂಕಟದಲ್ಲಿ ವರಿಷ್ಠರು
*ಬಿಎಸ್‌ವೈ ನಿವಾಸದಲ್ಲಿ ಬಿರುಸಿನ ಮಾತುಕತೆ *ಡಿಸಿಎಂ ರೇಸಿನಲಿ
ಬೆಂಗಳೂರು, ಜು.9: ನಾಯಕತ್ವಕ್ಕಾಗಿ ನಡೆಯುತ್ತಿದ್ದ ಹಗ್ಗ ಜಗ್ಗಾಟ ಬಿಜೆಪಿಯೊಳಗೆ ಅಂತ್ಯ ಕಾಣುತ್ತಿದ್ದಂತೆ, ಉಪಮುಖ್ಯಮಂತ್ರಿ ಹುದ್ದೆಗಾಗಿ ಕಿತ್ತಾಟ, ಸಂಪುಟ ಸ್ಥಾನಕ್ಕೇರಲು ಉಭಯ ಬಣಗಳ ನಡುವೆ ನಡೆಯುತ್ತಿರುವ ಪೈಪೋಟಿಯಿಂದ ಗೊಂದಲದ ಗೂಡಾಗಿದ್ದು, ವರಿಷ್ಠರು ಮತ್ತೊಂದು ಸಂಕಟವನ್ನು ಎದುರಿಸುವಂತಾಗಿದೆ. ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ, ತೀವ್ರ ಹೋರಾಟ ನಡೆಸಿ ಅದನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಗಳ ಮೇಲೂ ಕಣ್ಣು ಹಾಕಿರುವುದು ಹೈಕಮಾಂಡ್‌ನ ನಿದ್ದೆಗೆಡುವಂತೆ ಮಾಡಿದೆ. ಈಗಿರುವ ಸಚಿವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಬೇಕು, ಉಪ ಮುಖ್ಯಮಂತ್ರಿ ಸ್ಥಾನ ತಮ್ಮ ಬಣದ ನಾಯಕನಿಗೆ ನೀಡಬೇಕು, ಹಣ ಕಾಸು, ಕಂದಾಯ, ಸಾರಿಗೆ ಸೇರಿದಂತೆ ಇತರ ಪ್ರಭಾವಿ ಖಾತೆಗಳನ್ನು ತಮ್ಮ ಬಣದ ಶಾಸಕರಿಗೆ ನೀಡಬೇಕು ಎಂಬುದು ಯಡಿಯೂರಪ್ಪ ಬಣ ಹೈಕಮಾಂಡ್ ಮುಂದಿಟ್ಟಿರುವ ಬೇಡಿಕೆ.
ಈ ಕುರಿತು ಇಂದು ಬಿರುಸಿನ ಚರ್ಚೆ ನಡೆದುದರಿಂದ ಡಾಲರ್ಸ್‌ ಕಾಲನಿಯಲ್ಲಿರುವ ಯಡಿಯೂರಪ್ಪನವರ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಾಡಾಗಿತ್ತು.ಇಂದು ಬೆಳಗ್ಗನಿಂದ ಯಡಿಯೂರಪ್ಪನವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಸೋಮಣ್ಣ ಸೇರಿದಂತೆ ಸುಮಾರು 20ಕ್ಕೂ ಅಧಿಕ ಶಾಸಕರು ಭಾಗವಹಿಸಿ ಸಮಾಲೋಚನೆ ನಡೆಸಿದರು.
ಸದಾನಂದ ಗೌಡರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವ ಮೂಲಕ ತಮ್ಮ ಬಣದ ಜಗದೀಶ್ ಶೆಟ್ಟರ್‌ಗೆ ಆ ಸ್ಥಾನ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿರುವ ಯಡಿಯೂರಪ್ಪ ಬಣ ವಿಜಯದ ಹುಮ್ಮಸ್ಸಿನಲ್ಲಿದ್ದು, ಮತ್ತೆ ಇತರ ಪಟ್ಟಗಳಿಗಾಗಿ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟು ಬ್ಲಾಕ್‌ಮೇಲ್ ಮಾಡಲು ತಂತ್ರ ನಡೆಸಿದೆ. ಉಪ ಮುಖ್ಯಮಂತ್ರಿ ಸ್ಥಾನದ ರೇಸಿನಲ್ಲಿ ಗೃಹ ಸಚಿವ ಅಶೋಕ್, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಸದಾನಂದ ಗೌಡರ ಆಪ್ತರಾಗಿರುವ ಗೋವಿಂದ ಕಾರಜೋಳರವರಿದ್ದು, ಇವರಿಗೆಲ್ಲರಿಗೂ ಟಾಂಗ್ ಕೊಡುವ ನಿಟ್ಟಿನಲ್ಲಿ ಬಿಎಸ್‌ವೈ ಬಣವೂ ತಮ್ಮವರಿಗೆ ಈ ಖಾತೆ ನೀಡುವಂತೆ ಆಗ್ರಹಿಸಿದೆ.
ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ತಮ್ಮ ಬಣದ, ಬಂಜಾರ ಸಮುದಾಯಕ್ಕೆ ಸೇರಿದ ರೇವೂ ನಾಯಕ್ ಬೆಳಮಗಿ, ನಾಯಕ ಸಮುದಾಯಕ್ಕೆ ಸೇರಿದ ರಾಜೂಗೌಡ ಅಥವಾ ಒಕ್ಕಲಿಗ(ಮಹಿಳಾ ಕೋಟಾ)ದಡಿ ಶೋಭಾ ಕಂರದ್ಲಾಜೆಗೇ ನೀಡಬೇಕು ಎಂದು ಬಿಎಸ್‌ವೈ ಬಣ ಬಿಗಿಪಟ್ಟು ಹಿಡಿದಿದೆ.ಜೊತೆಗೆ ಸಚಿವ ಸಂಪುಟ ಸ್ಥಾನಕ್ಕೇರಲೂ ಬಿಎಸ್‌ವೈ ಬಣದಲ್ಲಿ ಬಿರುಸಿನ ಪೈಪೋಟಿ ನಡೆಯುತ್ತಿದೆ. ಶಾಸಕರೊಂದಿಗೆ ಇಂದು ಬೆಳಗ್ಗೆ ಚರ್ಚೆ ನಡೆಸಿರುವ ಯಡಿಯೂರಪ್ಪ ಹಾಗೂ ಅವರ ಬಣದ ನಾಯಕರು, ಹೆಚ್ಚಿನ ಖಾತೆಗಳನ್ನು ತಮ್ಮವರಿಗೆ ನೀಡುವಂತೆ ವರಿಷ್ಠರಿಗೆ ಒತ್ತಡವೇರಿದೆ.
ಸಿ.ಟಿ.ರವಿಗೆ ಸಚಿವ ಸ್ಥಾನ ನೀಡದಂತೆ ಒತ್ತಾಯವೇರಿರುವ ಬಿಎಸ್‌ವೈ ಬಣ, ಜೀವರಾಜ್, ಬೇಳೂರು ಗೋಪಾಲ ಕೃಷ್ಣ, ಬಿ.ಪಿ.ಹರೀಶ್, ಹೇಮಚಂದ್ರ ಸಾಗರ್, ಶಿವನಗೌಡ ಪಾಟೀಲ್, ಚಂದ್ರಕಾಂತ ಬೆಲ್ಲದ್, ಸಿ.ಸಿ.ಪಾಟೀಲ್, ದೇವಪ್ಪ ಗೌಡ ಪಾಟೀಲ್ ಮೊದಲಾದವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯವೇರಿದೆ.
ಡಿಸಿಎಂ ಹುದ್ದೆಗೆ ಹೆಚ್ಚುತ್ತಿರುವ ಆಕಾಂಕ್ಷಿಗಳು
ಬಿಜೆಪಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಹೈಕಮಾಂಡ್ ಒಲವು ತೋರುತ್ತಿದ್ದಂತೆ ಆಕಾಂಕ್ಷಿಗಳ ಪಟ್ಟಿ ಕೂಡಾ ಬೆಳೆಯುತ್ತಿದೆ.ಗೃಹ ಸಚಿವ ಆರ್.ಅಶೋಕ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮೊದಲು ರೇಸಿನಲ್ಲಿದ್ದರು. ಅನಂತರ ಸಚಿವ ಗೋವಿಂದ ಕಾರಜೋಳರ ಹೆಸರು ಕೇಳಿ ಬಂದಿತ್ತು. ಇದೀಗ ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಬಿಎಸ್‌ವೈ ಬಣ ಈ ಖಾತೆ ತಮಗೆ ಸಿಗಬೇಕು ಎಂದು ಪಟ್ಟು ಹಿಡಿದಿದೆ.ಜಾತಿ ಆಧಾರದಲ್ಲಿ ಪರಿಶಿಷ್ಟ ಪಂಗಡದ ರೇವೂ ನಾಯಕ್ ಬೆಳಮಗಿ, ನಾಯಕ ಸಮುದಾಯದ ರಾಜೂಗೌಡ ಹಾಗೂ ಒಕ್ಕಲಿಗ ಸಮುದಾಯ್ದ ಶೋಭಾ ಕರಂದ್ಲಾಜೆಗೆ ಡಿಸಿ ಎಂ ಪಟ್ಟ ನೀಡುವಂತೆ ಒತ್ತಡವೇರಲಾಗಿದೆ.

Leave a Reply