ಕನ್ನಡ ಭಾಷಾಭಿವೃದ್ಧಿಯ ಹೆಚ್ಚಿನ ಹೊಣೆ ಯುವಕರ ಮೇಲಿದೆ- ಎಸ್. ರಾಜಾರಾಂ

 ನಗರೀಕರಣದ ಭರಾಟೆಯಲ್ಲಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಆತಂಕ ಎದುರಾಗಿದ್ದು, ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಹೆಚ್ಚಿನ ಹೊಣೆ ಇಂದಿನ ಯುವಕರ ಮೇಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಹೇಳಿದರು.

     ವಾರ್ತಾ ಇಲಾಖೆಯು ಹಿರೇಸಿಂದೋಗಿಯ ಸರ್ಕಾರಿ ಪದವಿ ಪೂವ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹಿರೇಸಿಂದೋಗಿಯ ಸ.ಪ.ಪೂ. ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ’ಕನ್ನಡ ಭಾಷಾಭಿವೃದ್ಧಿಯಲ್ಲಿ ಯುವಕರ ಪಾತ್ರ’ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕನ್ನಡತಾಯಿ ಭುವನೇಶ್ವರಿ ದೇವಿಗೆ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

     ರಾಜ್ಯದ ಬಹುತೇಕ ನಗರಗಳಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಆಂಗ್ಲ ಭಾಷಾ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದೇ ಸಂಸ್ಕೃತಿ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಣೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.  ಹಾಗೆಂದು ಇತರೆ ಭಾಷಾ ಕಲಿಕೆಗೆ ವಿರೋಧವಿಲ್ಲ.  ಆದರೆ, ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ.  ಜಗತ್ತಿನ ಹಲವು ಭಾಷೆಗಳು ಇಂಗ್ಲೀಷ್ ಭಾಷೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿ ವಿನಾಶದ ಅಂಚಿಗೆ ತಲುಪಿರುವ ಬಗ್ಗೆ ವರದಿಗಳು ಹೇಳುತ್ತವೆ.  ಕನ್ನಡ ಭಾಷೆ ವಾಸ್ತವವಾಗಿ ಇಂಗ್ಲೀಷ್ ಭಾಷೆಗಿಂತ ಪ್ರಾಚೀನವಾದದ್ದು, ಸಾಹಿತ್ಯಕವಾಗಿ ಅತ್ಯಂತ ಶ್ರೀಮಂತವಾಗಿರುವ ಕನ್ನಡ ಭಾಷೆಯಲ್ಲಿ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಧಾಟಿಯಿದೆ.  ಪುಸ್ತಕಗಳಿಗಿಂದ ಜಾನಪದ ಸಾಹಿತ್ಯದಲ್ಲಿ ಕನ್ನಡ ಭಾಷೆಯ ವೈಶಿಷ್ಟ್ಯ ಅಜರಾಮರವಾಗಿ ಉಳಿದಿದೆ.  ಕನ್ನಡ ಉಳಿಸಬೇಕಿದ್ದಲ್ಲಿ, ಮನೆಯಿಂದಲೇ ಕನ್ನಡ ಪಾಠ ಆರಂಭವಾಗಬೇಕು, ಮನೆಯಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಬೇಕು.  ನಮ್ಮ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿಯೇ ಕನ್ನಡವನ್ನು ಕನ್ನಡಕ ಹಾಕಿಕೊಂಡ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಕೀಯ ದೇಶಗಳ ಸಂಸ್ಕೃತಿ ಇಲ್ಲಿ ಹೆಚ್ಚು ಆಮದಾಗುತ್ತಿದೆ.  ಇದರಿಂದಾಗಿ ರಾಜ್ಯದ ರಾಜಧಾನಿಯಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ.  ಶಿಕ್ಷಣ ಕ್ಷೇತ್ರದಲ್ಲಂತೂ ಭಾಷೆಯನ್ನು ವ್ಯಾಪಾರೀಕರಣಗೊಳಿಸಲಾಗುತ್ತಿದ್ದು,  ಕನ್ನಡ ಭಾಷೆಯೆಂದರೆ ಕೀಳರಿಮೆ ತೋರುವ ಪ್ರವೃತ್ತಿಯನ್ನು ನಾವು ತೊಡೆದುಹಾಕುವ ಕಾರ್ಯ ಮಾಡಬೇಕಿದೆ.  ಈ ನಿಟ್ಟಿನಲ್ಲಿ ಯುವಕರು ಹೆಚ್ಚು ಶ್ರಮಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಯುವಕರಲ್ಲಿ ಮನವಿ ಮಾಡಿದರು.

     ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಕನ್ನಡ ಉಪನ್ಯಾಸಕ ಶಂಕ್ರಯ್ಯ ಅಬ್ಬಿಗೇರಿಮಠ ಅವರು, ಪರಭಾಷೆಯ ಹಾವಳಿಯಿಂದ ಕನ್ನಡ ಭಾಷೆ ಸೊರಗುತ್ತಿದೆ.  ಜ್ಞಾನ ಹೆಚ್ಚಿಸಿಕೊಳ್ಳಲು ಎಲ್ಲ ಭಾಷೆಗಳನ್ನು ಕಲಿಯುವ ಅಗತ್ಯವಿದ್ದರೂ, ಮಾತೃ ಭಾಷೆಯ ಮೇಲೆ ಮೊದಲು ಹಿಡಿತ ಸಾಧಿಸುವ ಸಾಧನೆಯಾಗಬೇಕು.  ಆದಾಗ ಮಾತ್ರ ಇತರೆ ಭಾಷೆಗಳ ಕಲಿಕೆಗೆ ಸಹಕಾರಿಯಾಗಲಿದೆ.  ಭಾಷೆಗಳು ಎಷ್ಟೇ ಇದ್ದರೂ ಅದರ ಭಾವ ಒಂದೇ ಆಗಿರುತ್ತದೆ.  ಔದಾರ್ಯಕ್ಕೆ ಮತ್ತೊಂದು ಹೆಸರೇ ಕನ್ನಡವಾಗಿದ್ದು, ಕವಿರಾಜ ಮಾರ್ಗ ಸೇರಿದಂತೆ ಅನೇಕ ಪ್ರಾಚೀನ ಗ್ರಂಥಗಳಲ್ಲಿಯೂ ಸಹ ಕನ್ನಡಿಗರ ಔದಾರ್ಯದ ವರ್ಣನೆಯಾಗಿದ್ದು, ಆದರೆ ಈ ಔದಾರ್ಯದ ದುರುಪಯೋಗ ಇತ್ತೀಚೆಗೆ ಹೆಚ್ಚಾಗುತ್ತಿದೆ.  ನಮ್ಮ ಭಾಷೆಯನ್ನು ಇತರರಿಗೆ ಕಲಿಸಬೇಕಿರುವ ನಾವು, ಅವರ ಭಾಷೆಯನ್ನು ಕಲಿತು, ಅವರೊಂದಿಗೆ ಅವರ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದೇವೆ.  ಭಾಷೆಯ ಅಭಿವೃದ್ಧಿಯಲ್ಲಿ ಮಡಿವಂತಿಕೆ ತೋರುವ ಅಗತ್ಯವಿಲ್ಲದಿದ್ದರೂ, ವ್ಯವಹಾರಿಕವಾಗಿ ಭಾಷೆಯನ್ನು ಮೌಲ್ಯಯುತವಾಗಿ ಅಭಿವೃದ್ಧಿಪಡಿಸಬೇಕಿದೆ ಎಂದರು.
     ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ. ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.  ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.  ಕಾಲೇಜಿನ ಪ್ರಾಚಾರ್ಯ ಡಿ.ಪಿ. ಶಂಕ್ರಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗ್ರಾಮದ ಮುಖಂಡರೂ ಆದ ಯಲ್ಲಪ್ಪ ಮಾದಿನೂರ, ಉಪನ್ಯಾಸಕರುಗಳಾದ ಹನುಮಂತಪ್ಪ ಅಂಡಗಿ, ರೇಖಾ ತೆಂಬದಮನಿ, ಸವಿತಾ ಸ್ವಾಮಿ ಎಂ.ಎಸ್., ಲತಾ ಕೆ.ಬಿ. ಮುಂತಾದವರು ಉಪಸ್ಥಿತರಿದ್ದರು.  ಪ್ರಾರಂಭದಲ್ಲಿ ಉಪನ್ಯಾಸಕ ಪ್ರದೀಪ್‌ಕುಮಾರ್ ಸ್ವಾಗತಿಸಿದರು, ವಿದ್ಯಾರ್ಥಿ ಮಂಜುನಾಥ ಮಠದ ಪ್ರಾರ್ಥಿಸಿದರು, ಉಪನ್ಯಾಸಕ ಐ.ಎನ್. ಪಾಟೀಲ್ ವಂದಿಸಿದರು, ರಾಚಪ್ಪ ಕೇಸರಬಾಳು ಕಾರ್ಯಕ್ರಮ ನಿರೂಪಿಸಿದರು.

Please follow and like us:
error