ಕೊಪ್ಪಳಕ್ಕೆ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮಂಜೂರು

 : ಶಾಸಕ ಸಂಗಣ್ಣ ಕರಡಿ
  ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ೬ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ. ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಕೊಪ್ಪಳ ನಗರಕ್ಕೆ ಸರ್ಕಾರ ಮಂಜೂರು ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
     ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ, ಸರ್ಕಾರ ಕೊಪ್ಪಳಕ್ಕೆ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಮಂಜೂರು ಮಾಡುವ ಮೂಲಕ, ಶಿಕ್ಷಣ ಕ್ಷೇತ್ರಕ್ಕೆ ಹೊಸ ಕೊಡುಗೆಯೊಂದನ್ನು ಕೊಪ್ಪಳಕ್ಕೆ ನೀಡಿದಂತಾಗಿದೆ.  ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ೨೦೧೩-೧೪ನೇ ಶೈಕ್ಷಣಿಕ ಸಾಲಿನಿಂದ ಕೊಪ್ಪಳದಲ್ಲಿ ಪ್ರಾರಂಭವಾಗಲಿದೆ.  ಈ ವಸತಿ ಶಾಲೆಯಲ್ಲಿ ೬ ರಿಂದ ೧೨ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗಕ್ಕೆ ಅವಕಾಶವಿದ್ದು, ಪ್ರತಿ ತರಗತಿಯಲ್ಲಿ ೮೦ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು, ೨ ವಿಭಾಗಗಳಲ್ಲಿ ಅಂದರೆ ಪ್ರತಿ ವಿಭಾಗದಲ್ಲಿ ೪೦ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗುವುದು.  ೬ ನೇ ತರಗತಿಯಿಂದ ಪ್ರಾರಂಭಗೊಂಡು ೧೨ ನೇ ತರಗತಿ ಅಂದರೆ ದ್ವಿತೀಯ ಪಿಯುಸಿ ನಲ್ಲಿ ಪಿಸಿಎಂಬಿ ಮತ್ತು ಪಿಸಿಎಂಸಿ ಸಂಯೋಜನೆಗಳ ಐಚ್ಛಿಕ ವಿಷಯಗಳನ್ನು ಬೋಧಿಸಲಾಗುವುದು.  ಈ ವಸತಿ ಶಾಲೆಗೆ ನವೋದಯ ಮಾದರಿ ವಸತಿ ಶಾಲೆಗಳಲ್ಲಿರುವ ಹುದ್ದೆಗಳ ರೀತಿಯಲ್ಲಿಯೇ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸ್ನಾತಕೋತ್ತರ ಪದವೀಧರ ಭಾಷಾ ಶಿಕ್ಷಕರು, ಸಂಗೀತ/ಕಲಾ ಶಿಕ್ಷಕರು ಹೀಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು ೫೦ ಹುದ್ದೆಗಳನ್ನು ಮಂಜೂರು ಮಾಡಿದೆ.  ೨೦೧೩-೧೪ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಪ್ರಾರಂಭಿಸಲು ಆದೇಶ ನೀಡಲಾಗಿದ್ದು, ವಸತಿ ಶಾಲೆಗಳ ನಿರ್ವಹಣೆ ಮತ್ತು ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಬಿಡುಗಡೆ ಮಾಡಲಿದೆ.  ಕೊಪ್ಪಳ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಉಡುಗೊರೆಯಾಗಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಮಂಜೂರು ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಸಚಿವರು ಸೇರಿದಂತೆ ಎಲ್ಲ ಉನ್ನತ ಅಧಿಕಾರಿಗಳಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Please follow and like us:
error