fbpx

ಅವರು ಅವಮಾನಿಸಿದ್ದು ಸುರೇಶ್ ಭಟ್ಟರನ್ನಲ್ಲ, ಮಾನವೀಯ ಪ್ರಜ್ಞೆಯನ್ನು– ಶಶಿ ಪುತ್ತೂರು

ಗೋಮಾತೆಯ ಪರ ಎಂಬಂತೆ ಪೋಸುಕೊಟ್ಟುಕೊಂಡಿದ್ದ ಗುಂಪೊಂದು ಖಾವಿಧಾರಿಯಾಗಿದ್ದ ಸ್ವಾಮಿ ವಿವೇಕಾನಂದರ ಬಳಿ ಬಂದಿತ್ತು. ಈ ಸೋಗಲಾಡಿ ಗುಂಪನ್ನುದ್ದೇಶಿಸಿ ಸ್ವಾಮಿ ವಿವೇಕಾನಂದರು ‘‘ಮೊದಲು ನಿಮ್ಮ ಸುತ್ತಮುತ್ತಲೇ ಇರುವ ಶೋಷಿತರ, ಉಡಲು ಬಟ್ಟೆ, ಹೊತ್ತು ಊಟಕ್ಕೂ ಗತಿ ಇಲ್ಲದ ದಟ್ಟದರಿದ್ರರ ಬಗ್ಗೆ ಯೋಚಿಸಿ ನಂತರ ಈ ನಿಮ್ಮ ಗೋಮಾತೆ ಬಗ್ಗೆ ಯೋಚಿಸುವಿರಂತೆ ಎಂದು ಉಗಿದು ಅಟ್ಟಿದ್ದರಂತೆ. ಈ ಭೂಮಿ ಮಾನವನೊಬ್ಬನಿಗೇ ಸೇರಿದ್ದಲ್ಲ. ಎಲ್ಲಾ ಪ್ರಾಣಿಗಳಿಗೂ ಇಲ್ಲಿ ಜೀವಿಸುವ ಹಕ್ಕಿದ್ದೇ ಇದೆ. ಗೋವನ್ನು ಸೇರಿ ನಾಯಿ ಬೆಕ್ಕು ಕತ್ತೆ ಗುಬ್ಬಚ್ಚಿಗಳ ನೋವಿಗೂ ಸ್ಪಂದಿಸಬೇಕಾದುದು ಎಲ್ಲರ ಧರ್ಮ.
ಆದರೆ ಈ ಭಾವನೆ ಸ್ವಯಂಸ್ಫೂರ್ತಿಯಿಂದ ಬರಬೇಕೇ ವಿನಹ ಯಾವುದೋ ಪೂರ್ವಾಗ್ರಹಪೀಡಿತ ಸಿದ್ಧಾಂತದ ಹಿನ್ನೆಲೆಯಿಂದಲ್ಲ.
ಧರ್ಮವಂತರ ಪ್ರಕಾರ ಕಪ್ಪೆಯಂತಹ ಸಹಜ ಆಹಾರಕ್ಕೇ ರಕ್ಷಣೆ ಕೊಟ್ಟ ದಯಾಮಯಿ ಸರ್ಪವಿರುವ ನಾಡು ಶೃಂಗೇರಿ. ಆದರೀಗ ಇಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲದಂತಾಗಿರುವುದು ವಿಚಿತ್ರ. ಇಲ್ಲೀಗ ಧರ್ಮದ ಅಮಲನ್ನು ಹತ್ತಿಸಿಕೊಂಡ ವ್ಯಕ್ತಿಗಳು ಮನುಷ್ಯನೊಬ್ಬನ ಸಾವನ್ನೇ ಸಂಭ್ರಮದ ವಿಚಾರವನ್ನಾಗಿಸಿಕೊಂಡಿರುವುದು ತಮಾಷೆಯಾಗಿದೆ.
ಮಂಗಳೂರಿನಲ್ಲಿ ಸ್ವಾಮಿಯೊಬ್ಬರು ನ್ಯಾಯಾನ್ಯಾಯವನ್ನು ವಿಶ್ಲೇಷಿಸದೇ ಕೊಂದ ವ್ಯಕ್ತಿಗೆ 1ಲಕ್ಷ ರೂ. ಬಹುಮಾನವನ್ನೂ ಕೂಡ ಘೋಷಿಸುತ್ತ್ತಾರೆಂದರೆ ಮನುಷ್ಯ ಜೀವ ಈ ಮಟ್ಟಿಗೆ ಅಗ್ಗವೆನಿಸಿದ್ದರ ಹಿನ್ನೆಲೆಯಾದರೂ ಏನು? ಶೃಂಗೇರಿಯಲ್ಲಿ ಘಟಿಸಿದ ಅನುಮಾನಾಸ್ಪದ ಕೊಲೆಯ ವಿಚಾರ ಚರ್ಚಿಸುತ್ತಿದ್ದ ಕೋಮು ಸೌಹಾರ್ದ ವೇದಿಕೆಯ ಮುಖಂಡರಾದ ಶ್ರೀಯುತ ಸುರೇಶ್ ಭಟ್ಟರ ಮೇಲೆ ಇಂತಹ ಪೂರ್ವಾಗ್ರಹ ಪೀಡಿತ ಧರ್ಮದ ಅಮಲುಕೋರನೊಬ್ಬ ದಾಳಿ ನಡೆಸಿದ್ದು ಅತ್ಯಂತ ಖಂಡನೀಯ ವಿಚಾರ.
ಇತ್ತೀಚೆಗೆ ಉಡುಪಿಯ ಕೋಡಿಬೆಂಗ್ರೆಯಲ್ಲಿ ಎರಡು ದಿನದ ಕಾರ್ಯಾಗಾರವೊಂದು ನಡೆದಿತ್ತು. ಅಲ್ಲಿ ಹಿರಿಯ ಮಾನವ ಹಕ್ಕುಗಳ ಹೋರಾಟಗಾರ ನಗರಿ ಬಾಬಯ್ಯನವರು ಕಾರ್ಯಕ್ರಮದ ಕೊನೆಯಲ್ಲಿ ಶ್ರೀಯುತ ಸುರೇಶ್ ಭಟ್ಟರ ಬಗ್ಗೆ ಮಾತಾಡುತ್ತಾ, ಸುರೇಶ್ ಭಟ್ ಬಾಕ್ರಬೈಲು ಒನ್ ಮ್ಯಾನ್ ಆರ್ಮಿ ಇದ್ದಂತೆ ಎಂದಿದ್ದರು. ಹೌದು ಕರಾವಳಿಯಲ್ಲಿ ಚಿಗಿತು ಇಲ್ಲಿನ ಸಹಜ ಸೌಹಾರ್ದಕ್ಕೆ ಕೊಳ್ಳಿ ಇಡುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಇವರ ಹೋರಾಟ ನಿರಂತರ.
ಹೇಳಿ ಕೇಳಿ ಇವರು ಉಗ್ರ ಭಾಷಣಕಾರರಲ್ಲ. ನೋಡಿದರೆ ಎದೆ ಝಲ್ಲೆನಿಸುವ ದೇಹದಾರ್ಢ್ಯವೂ ಇವರದ್ದಲ್ಲ. ಕೃಶ ಶರೀರದ ವಯೋವೃದ್ಧರಾದ ಮೃದುಮಾತಿನ ಸರಳ ಸಜ್ಜನರಷ್ಟೆ. ಮೌಢ್ಯ ಮೂಲದ ಸಾಮಾಜಿಕ ಅನಿಷ್ಟಗಳ, ತಾರತಮ್ಯಗಳ ವಿರುದ್ಧ ಧನಿ ಎತ್ತಿದವರಿಗೆ ಬೆದರಿಕೆಗಳು ಇದ್ದದ್ದೇ. ಅಂಥಾ ಸಜ್ಜನ ದಾಬೋಲ್ಕರರನ್ನೇ ಕೊಲ್ಲಿಸಿ ಸಂಭ್ರಮಿಸಲಾಯ್ತು. ಅದೇ ರೀತಿ ವಯೋವೃದ್ಧರೆಂಬುದನ್ನೂ ಮರೆತು ಸುರೇಶ್ ಭಟ್ಟರ ಮೇಲೆ ಪುಂಡನೊಬ್ಬನನ್ನು ಛೂ ಬಿಟ್ಟು ಹಲ್ಲೆಮಾಡಲಾಗಿದೆ. ಇದೆಲ್ಲ ಯಾವ ಧರ್ಮ ಸಂಸ್ಕೃತಿಗಳು ಹೇಳುತ್ತವೆಯೋ ದೇವರೇ ಹೇಳಬೇಕು.
ವಿವೇಕಾನಂದರು ಉಗಿದದ್ದು ಇಂಥಾ ಸೋಗಲಾಡಿಗಳಿಗೇ.. ಕರಾವಳಿ ಜಿಲ್ಲೆ ಮತಾಂಧ ಶಕ್ತಿಗಳ ಆಡಂಬೋಲವಾಗು ತ್ತಿದ್ದರೂ ಅವರ ಹುಚ್ಚಾಟಗಳಿಗೆ ತಡೆಯೊಡ್ಡಲು ಇಲ್ಲೇ ಅನೇಕ ವ್ಯಕ್ತಿಗಳು ಅಪಾಯವನ್ನೂ ಲೆಕ್ಕಿಸದೇ ಹೋರಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಉಡುಪಿಯಲ್ಲಿ ಹಾಜಬ್ಬ, ಹಸನಬ್ಬ ಬೆತ್ತಲೆ ಪ್ರಕರಣ ನಡೆದಾಗ ಎಂಥದಕ್ಕೂ ರೆಡಿ ಇರುವ ಒರಟು ಮತಾಂಧರ ಕೀಳು ಕೊಳಕು ಬಹಿರಂಗ ಬೈಗುಳಗಳನ್ನು ಎದುರಿಸಿ ಜಿ. ರಾಜಶೇಖರ್‌ರಂಥವರು ಹೋರಾಡಿದ್ದರು.
ದಿವಂಗತ ಕೆ. ಜೆ. ಶೆಟ್ಟಿ ಕಡಂದಲೆ, ದಿವಂಗತ ಬಿ.ವಿ. ಕಕ್ಕಿಲ್ಲಾಯ ರಂತಹ ವೃದ್ಧ ಜೀವಗಳು ಕೊನೆಗಾಲದವರೆಗೂ ಇಂಥವರ ವಿರುದ್ಧ ದನಿ ಎತ್ತಿದ್ದರು. ಇದೇ ಕರಾವಳಿಯಲ್ಲಿ ಸ್ವಲ್ಪಇನ್ನೂ ಹಿಂದಕ್ಕೆ ಹೋದರೆ ಸಮಾಜವನ್ನು ಎದುರು ಹಾಕಿಕೊಂಡು ಶೋಷಿತರ ಪರ ಹೋರಾಟ ನಡೆಸಿದ ಮಂಗಳೂರಿನ ಕುದ್ಮುಲ್ ರಂಗರಾಯರಿಗೂ ಇಂಥದ್ದೇ ಕಾರಣಕ್ಕಾಗಿ ಸಗಣಿ ಸೇವೆಯಾಗಿತ್ತಲ್ಲದೆ ಮಾನವ ಮಲದ ಸಹವಾಸವನ್ನೂ ಕೂಡ ಅವರು ಅನುಭವಿಸಿದ್ದರು (ಅವರ ಕೊರಗರ ಮಕ್ಕಳ ಶಾಲೆಯ ಬೀಗಕ್ಕೆ ಮಲವನ್ನು ಮೆತ್ತಿ ಅವರನ್ನು ವಿಚಲಿತಗೊಳಿಸಲು ನೋಡಿದ್ದರು) ಕೆಲ ಸಮಯದ ಹಿಂದೆ ಪ್ರಗತಿ ಪರ ಚಿಂತಕ ಪಟ್ಟಾಭಿರಾಮ ಸೋಮಯಾಜಿಯವರ ಮೇಲೂ ಇಂಥಾದ್ದೇ ಸಗಣಿ ದಾಳಿ ನಡೆದಿತ್ತು. ಈಗದು ಸುರೇಶ್ ಭಟ್ಟರ ಸರದಿ.
ಮೋದಿ ಮೇನಿಯಾದ ಕಬಂಧ ಬಾಹು ಇದೀಗ ಎಲ್ಲೆಡೆ ಹಬ್ಬಿದೆ. ಮೋದಿಯ ವಿಜೃಂಭಣೆಗಾಗಿ ಕೋಟಿಗಟ್ಟಲೆ ಹಣ ವ್ಯಯವಾಗುತ್ತಿದೆ. ಮೋದಿಯನ್ನು ಟೀಕಿಸುವವರ ಮೇಲೆ ದಾಳಿಗಳ ಮೇಲೆ ದಾಳಿಗಳಾಗುತ್ತಿದೆ, ಆಮ್ ಆದ್ಮಿ ನಾಯಕ ಕೇಜ್ರಿವಾಲರಂಥವರ ಮೇಲೆಯೇ ಮೋದಿ ಚೇಲಾಗಳು ಬಹಿರಂಗವಾಗಿ ದೈಹಿಕ ದಾಳಿ ನಡೆಸುತ್ತಿರುವಾಗ ಉಳಿದವರ ಪಾಡೇನು? ಕರ್ನಾಟಕದಲ್ಲಿ ಮೋದಿ ವಿರುದ್ಧ ಬಹಿರಂಗವಾಗಿ ಧನಿ ಎತ್ತಿದವರಲ್ಲಿ ಸುರೇಶ್ ಭಟ್ಟರು ಅತ್ಯಂತ ಪ್ರಮುಖರು.
ದಾವಣಗೆರೆಯಲ್ಲಿ ಇವರ ‘ಮೋದಿ- ಮಂಕು ಬೂದಿ’ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಅಲ್ಲಿ ಭಾಗವಹಿಸಿದ್ದ ಯೋಗೇಶ್ ಮಾಸ್ಟರ್ ಮೇಲೆ ಯಾವುದೋ ನೆಪದಲ್ಲಿ (ನಾವೆಲ್ಲವನ್ನೂ ಗಮನಿಸುತ್ತಿದ್ದೇವೆ ಹುಷಾರ್ ಎಂದು ಸೂಚಿಸಲು) ದಾಳಿ ಮಾಡಲಾಗಿತ್ತು. ಕಬೀರ್ ಕೊಲೆ ವಿಚಾರದ ನೆಪದಲ್ಲಿ ಸುರೇಶ್ ಭಟ್ಟರ ಮೇಲೆ ದಾಳಿ ನಡೆದಿದ್ದರೂ ದಾಳಿಗೆ ಅದೊಂದೇ ಕಾರಣ ಇದ್ದಿರಲಾರದು.
ಈ ಕುಮ್ಮಕ್ಕಿನ ಹಿಂದೆ ಅನೇಕರ ಕೈವಾಡ ಇರುವ ಸಾಧ್ಯತೆಯೇ ಹೆಚ್ಚಿದೆ. ಹಿಂದುತ್ವವಾದಿಗಳ ಮಾನವ ವಿರೋಧಿ ಮಸಲತ್ತುಗಳನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸುವ, ಜನಪರ ಹೋರಾಟಕ್ಕೆ ಜೀವತುಂಬುವ ಸುರೇಶ್ ಭಟ್ಟರ ಸ್ಥೈರ್ಯವನ್ನು ಕುಗ್ಗಿಸುವ ಸಲುವಾಗಿ ಇಂತಹ ದಾಳಿಯನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ. ಆದರೆ ಈ ವಯೋವೃದ್ಧರ ಮೇಲೆ ನಡೆಸಲಾದ ದಾಳಿ ಧರ್ಮರಕ್ಷಕ(?)ರ ಅಸಲೀಯತ್ತನ್ನು ಸಾರ್ವಜನಿಕವಾಗಿ ಮತ್ತೊಮ್ಮೆ ಬೆತ್ತಲುಗೊಳಿಸಿದ್ದನ್ನು ಬಿಟ್ಟರೆ ಬೇರೇನನ್ನು ಮಾಡಲಾಗಿಲ್ಲ ಎಂಬುದು ಹಗಲಿನಷ್ಟೇ ಸತ್ಯ.                    

varthabharati

Please follow and like us:
error

Leave a Reply

error: Content is protected !!