ಕೊಪ್ಪಳಕ್ಕೆ ಮೆಡಿಕಲ್ ಕಾಲೇಜು: ಸಚಿವ ಮುರುಗೇಶ್ ನಿರಾಣಿ ಸ್ಥಳ ಪರಿಶೀಲನೆ

 : ಕೊಪ್ಪಳದಲ್ಲಿ ನೂತನವಾಗಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕೆನ್ನುವ ಸರ್ಕಾರದ ಆಶಯಕ್ಕೆ ಇಂಬು ಕೊಟ್ಟಂತೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮೆಡಿಕಲ್ ಕಾಲೇಜಿಗೆಂದು, ಜಿಲ್ಲಾಡಳಿತ ಭವನದ ಹಿಂದೆ ಗುರುತಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
  ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಅವರು, ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕೆನ್ನುವ ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಒಕ್ಕೊರಲಿನ ಬೇಡಿಕೆಗೆ ಸರ್ಕಾರ ಮನ್ನಣೆಯನ್ನು ನೀಡಿದ್ದು, ಮುಖ್ಯಮಂತ್ರಿಗಳು, ಮೆಡಿಕಲ್ ಕಾಲೇಜು ಮಂಜೂರಾತಿಗೆ ಹಸಿರು ನಿಶಾನೆ ತೋರಿಸಿದ್ದಾರೆ.  ಕೊಪ್ಪಳ ನಗರದಲ್ಲಿ ಈಗಾಗಲೆ ೨೫೦ ಹಾಸಿಗೆಯುಳ್ಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.  ಮೆಡಿಕಲ್ ಕಾಲೇಜು ಪ್ರಾರಂಭಿಸಲು, ಇದೇ ಸ್ಥಳಕ್ಕೆ ಹತ್ತಿರದಲ್ಲಿ ಸುಮಾರು ೪೦ ಎಕರೆಯಷ್ಟು ಜಮೀನಿನ ಅಗತ್ಯವಿದ್ದು, ಈಗಾಗಲೆ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ ಕರ್ನಾಟಕ ಗೃಹ ಮಂಡಳಿ ಅವರು ಸ್ವಾಧೀನ ಮಾಡಿಕೊಂಡಿರುವ ಜಮೀನನ್ನು ಗುರುತಿಸಿದ್ದಾರೆ.  ಒಂದು ಒಳ್ಳೆಯ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಹಿಂದುಳಿದ ಜಿಲ್ಲೆಯಾಗಿರುವ ಕೊಪ್ಪಳ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕೆನ್ನುವುದು ನಮ್ಮೆಲ್ಲರ ಒತ್ತಾಸೆಯಾಗಿದೆ.  ಮೆಡಿಕಲ್ ಕಾಲೇಜಿಗೆ ಸದ್ಯ ಗುರುತಿಸಲಾಗಿರುವ ಜಮೀನಿನ ಲಭ್ಯತೆ, ಸಾಧಕ, ಬಾಧಕಗಳ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಸೆ. ೨೧ ರಂದು ಪುನಃ ಬೆಂಗಳೂರಿನಲ್ಲಿ ಸಭೆ ಸೇರಿ ಚರ್ಚಿಸಿ, ಒಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.  ನಂತರ, ಗುಲಬರ್ಗಾದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ಪಡೆದು, ಮೆಡಿಕಲ್ ಕಾಲೇಜು ಮಂಜೂರಾತಿಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಉದ್ದೇಶವನ್ನು ಹೊಂದಲಾಗಿದೆ.  ಇದಕ್ಕೆ ಎಲ್ಲರ ಸಹಕಾರವೂ ಅಗತ್ಯವಾಗಿದೆ ಎಂದರು.
  ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಸಂಸದ ಶಿವರಾಮಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಸಹಾಯಕ ಆಯುಕ್ತ ಶರಣಬಸಪ್ಪ, ತಹಸಿಲ್ದಾರ್ ಬಿ.ಎಲ್. ಗೋಠೆ, ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply