ಶಾಸಕ ಸಂಗಣ್ಣ ಕರಡಿ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ

ಕೊಪ್ಪಳ ಅ. : ಕೊಪ್ಪಳ ತಾಲೂಕು ಡಂಬ್ರಳ್ಳಿಯ ಸಾವಯವ ಕೃಷಿಕರೊಂದೊಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅ. ೨೯ ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.
  ಮುಖ್ಯಮಂತ್ರಿಗಳು ಕೊಪ್ಪಳ ಕ್ಷೇತ್ರಕ್ಕೆ ಬಂದು, ಇಡೀ ದಿನ ಇಲ್ಲಿಯೇ ಇರುವ ಮೂಲಕ ಇಲ್ಲಿಯ ಜನರ ಸಮಸ್ಯೆಯನ್ನು ಆಲಿಸಿ, ಅದಕ್ಕೆ ಪರಿಹಾರ ಸೂಚಿಸಲು ಮುಂದಾಗಿರುವುದು ಸ್ವಾಗತಾರ್ಹ. ಅದರಲ್ಲೂ ಕ್ಷೇತ್ರದ ಡೊಂಬರಹಳ್ಳಿ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ನಡೆಸುವ ಮೂಲಕ ಅವರೊಂದಿಗೆ ನೇರವಾಗಿ ಮುಖಾಮುಖಿಯಾಗುತ್ತಿರುವುದು ಹಾಗೂ ಅದರಲ್ಲಿ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ಶ್ಲಾಘನೀಯವಾಗಿದೆ. ಇದೇ ಸಂದರ್ಭದಲ್ಲಿ ತಮಗೆ ಕ್ಷೇತ್ರದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಿದ್ದಾರೆ.
      ಕೊಪ್ಪಳ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ವಿಪರೀತವಾಗಿದೆ. ಪದೇ ಪದೇ ವಿದ್ಯುತ್ ಪರಿವರ್ತಕ ಸುಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಇದಕ್ಕೆ ಕಾರಣ ವಿದ್ಯುತ್ ಪರಿವರ್ತಕ ಸಾಮರ್ಥ್ಯಕ್ಕಿಂತ ಅಧಿಕ ಪಂಪ್‌ಸೆಟ್‌ಗಳು ಇರುವುದು. ಇದನ್ನು ಸರಿದೂಗಿಸಲು ಕನಿಷ್ಟ ೧೦೦ ವಿದ್ಯುತ್ ಪರಿವರ್ತಕಗಳ ಅಗತ್ಯವಿದೆ. ಇದರಲ್ಲಿ ೧೦೦ ಎಚ್.ಪಿಯ ೫೦ ಹಾಗೂ ೬೩ ಎಚ್.ಪಿಯ ೫೦ ವಿದ್ಯುತ್ ಪರಿವರ್ತಕಗಳನ್ನು ತುರ್ತಾಗಿ ಪೂರೈಕೆ ಮಾಡಲು ಆದೇಶ ಮಾಡುವ ಮೂಲಕ ಈ ಸಮಸ್ಯೆ ಶಾಶ್ವತ ಪರಿಹಾರ ನೀಡಬೇಕು.
     ಕೊಪ್ಪಳ ತಾಲೂಕಿನ ಬೆಟಗೇರಿ, ಅಳವಂಡಿ ಬಹದ್ದೂರುಬಂಡಿ ಗ್ರಾಮದ ಏತ ನೀರಾವರಿ ಯೋಜನೆಗಳನ್ನು ಈಗಾಗಲೇ ಸರ್ವೆ ಮಾಡಲಾಗಿದೆ. ಅವುಗಳಿಗೆ ತಾಂತ್ರಿಕ ಒಪ್ಪಿಗೆಯೂ ಸಿಕ್ಕಿದೆ. ಕಾರಣ ಈ ಮೂರು ಯೋಜನೆಗಳಿಗೆ ಮಂಜೂರಾತಿ ನೀಡುವ ಮೂಲಕ ಮಳೆಯಾಶ್ರಿತ ಪ್ರದೇಶಕ್ಕೆ ನೀರನ್ನು ಪೂರೈಕೆ ಮಾಡಬೇಕು. ಬರದ ಬವಣೆಯಿಂದ ರೈತರನ್ನು ಪಾರು ಮಾಡಬೇಕು.
      ೨೨೦ ಕೆ.ವಿ. ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಸ್ಥಳವನ್ನು ಗುರುತಿಸಿ ಫೈನಲ್ ಮಾಡಿದೆ. ಇದನ್ನು ತ್ವರಿತಗೊಳಿಸುವ ಮೂಲಕ ಜಿಲ್ಲಾ ಕೇಂದ್ರವಾದರೂ ಇದುವರೆಗೂ ಇಲ್ಲದ ೨೨೦ ಕೆ.ವಿ. ವಿದ್ಯುತ್ ಪ್ರಸರಣ ಕೇಂದ್ರವನ್ನು ಪ್ರಾರಂಭಿಸಬೇಕು. ಈ ಕುರಿತು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು.
       ಸಂಚಾರಿ ಪೊಲೀಸ್ ಠಾಣೆ ಃ- ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳ ನಗರದಲ್ಲಿ ಇದುವರೆಗೂ ಸಂಚಾರಿ ಪೊಲೀಸ್ ಠಾಣೆಯೇ ಇಲ್ಲ. ಇದರಿಂದ ಸಂಚಾರ ನಿಯಂತ್ರಣದಲ್ಲಿ ಇರದೆ ಅಪಘಾತಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ಇತ್ತೀಚಿಗೆ ಕೊಪ್ಪಳ ನಗರದಲ್ಲಿ ಜನದಟ್ಟಣೆ ಮತ್ತು ವಾಹನ ದಟ್ಟಣೆ ಹೆಚ್ಚಳವಾಗಿರುವುದರಿಂದ ನಿಯಂತ್ರಣ ಬೇಕೇ ಬೇಕು. ಅದ್ದರಿಂದ ತಕ್ಷಣ ಸಂಚಾರಿ ಪೊಲೀಸ್ ಠಾಣೆಗೆ ಮಂಜೂರಿ ಮಾಡಬೇಕು. ಇದರ ಅಗತ್ಯತೆ ಕುರಿತು ಈಗಾಗಲೇ ಸಾಕಷ್ಟು ಸಾರಿ ಪೊಲೀಸ್ ಇಲಾಖೆಯೇ ಪ್ರಸ್ಥಾವನೆ ಸಲ್ಲಿಸಿದೆ.
       ಉನ್ನತ ಶಿಕ್ಷಣ ಃ- ಕೊಪ್ಪಳ ಜಿಲ್ಲೆಯಾಗಿ ೧೪-೧೫ ನೇ ವರ್ಷ ಆಗುತ್ತಾ ಬಂದರೂ ಇನ್ನು ಶೈಕ್ಷಣಿಕವಾಗಿ ಆಗಬೇಕಾದ ಕಾಲೇಜುಗಳು, ಉನ್ನತ ಕೋರ್ಸ್‌ಗಳು ಪ್ರಾರಂಭವಾಗಿಲ್ಲ. ಆದ್ದರಿಂದ ತಕ್ಷಣ ವಿವಿಯದ ಉನ್ನತ ಶಿಕ್ಷಣ(ಪಿಜಿ ಸೆಂಟರ್) ಕೇಂದ್ರ,  ಜೊತೆಗೆ ಇಂಜನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ನೀಡಬೇಕು.
       ಸಿಂಗಟಾಲೂರು ಏತ ನೀರಾವರಿ ಯೋಜನೆ ಃ- ಈಗಾಗಲೇ ಸರ್ಕಾರ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಕೊಪ್ಪಳ ತಾಲೂಕಿಗೆ ಆದ್ಯತೆ ನೀಡಿ ನೀರಾವರಿ ಸೌಲಭ್ಯ ಕಲ್ಪಿಸಿದೆ. ಕಾಲುವೆ ನಿರ್ಮಾಣದ ಟೆಂಡರ್ ಕೂಡಾ ಆಗಿದೆ. ಆದರೆ, ಕಾರಣಾಂತರಗಳಿಂದ ಅದು ರದ್ಧಾಗಿರುವುದರಿಂದ ಅದನ್ನು ಪುನರ್ ಕರೆಯುವುದು ಸೇರಿದಂತೆ ಎಲ್ಲ ರೀತಿಯಿಂದಲೂ ಅದನ್ನು ಬೇಗನೆ ಅನುಷ್ಠಾನ ಮಾಡುವುದಕ್ಕೆ ಕ್ರಮಕೈಗೊಳ್ಳಬೇಕು ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
Please follow and like us:
error

Related posts

Leave a Comment