fbpx

ಸರಳ ಸಾಹಿತ್ಯದ ವಚನಗಳ ಮೂಲಕ ಜನಪದ ಮಾತುಗಳಿಗೆ ಶಕ್ತಿ ತುಂಬಿದವರು ದೇವರದಾಸಿಮಯ್ಯ- ವಿಠ್ಠಪ್ಪಗೋರಂಟ್ಲಿ

ಕೊಪ್ಪಳ ಮಾ. ೨೫  : ಜನಪದ ಸಾಹಿತ್ಯ ಕಣ್ಮರೆಯಾಗುವ ಕಾಲಘಟ್ಟದಲ್ಲಿ, ಸರಳ ಸಾಹಿತ್ಯದ ವಚನಗಳನ್ನು ರಚಿಸಿ, ಜನಪದ ಮಾತುಗಳಿಗೆ ಶಕ್ತಿ ತುಂಬಿದವರು ದೇವರ ದಾಸಿಮಯ್ಯ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಹೇಳಿದರು.
  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕಾರಿ ಭಾಗವಹಿಸಿ ಮಾತನಾಡಿದರು.
  ಸಾಹಿತ್ಯಿಕ ಕ್ರಾಂತಿಗೆ ಮೂಲ ಪುರುಷ ದೇವರ ದಾಸಿಮಯ್ಯನವರು.  ಜನಪದ ಸಾಹಿತ್ಯ ಕಣ್ಮರೆಯಾಗುವ ಕಾಲಘಟ್ಟದಲ್ಲಿ, ದೇವರ ದಾಸಿಮಯ್ಯನವರು, ಸರಳ ಸಾಹಿತ್ಯದಲ್ಲಿ ವಚನಗಳನ್ನು ರಚಿಸಿ, ಜನಪದ ಮಾತುಗಳಿಗೆ ಶಕ್ತಿ ತುಂಬಿದರು. ಸಾಹಿತ್ಯ ಸರಸ್ವತಿಯನ್ನು ಜನಸಾಮಾನ್ಯರ ಭಾಷೆಯಾದ ಸರಳ ಕನ್ನಡದ ವಚನ ಸಿಂಹಾಸನಕ್ಕೆ ಏರಿಸಿ ಕುಳ್ಳಿರಿಸಿದ ಶ್ರೇಯಸ್ಸು ದೇವರ ದಾಸಿಮಯ್ಯನವರಿಗೆ ಸಲ್ಲಬೇಕು.  ತಮ್ಮ ವಚನಗಳಲ್ಲಿ ವೇದ, ಉಪನಿಷತ್ತುಗಳನ್ನು ಅಳವಡಿಸಿಕೊಂಡಿರುವ ದೇವರ ದಾಸಿಮಯ್ಯನವರು ರಾಮಲಿಂಗ ಎನ್ನುವುದನ್ನೇ ರಾಮನಾಥ ಎಂಬುದಾಗಿ ಅಂಕಿತನಾಮವನ್ನು ಇಟ್ಟುಕೊಂಡಿರುವುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.  ನೇಕಾರ ಜನಾಂಗದ ಮೂಲ ಪುರುಷರಾಗಿರುವ ಅವರು, ನೇಕಾರ ವೃತ್ತಿ ಪವಿತ್ರವಾದುದು,  ನೇಕಾರರು ಕುಶಲಕರ್ಮಿಗಳಾಗಿದ್ದು ಶ್ರಮಜೀವಿಗಳು ಎಂಬುದಾಗಿ ವಚನಗಳಲ್ಲಿ ಬಣ್ಣಿಸಿದ್ದಾರೆ.  ಜೇಡ ತನ್ನ ಜೊಲ್ಲನ್ನು ಬಳಸಿ, ಬಲೆ ಹೆಣೆದು ಅದರಲ್ಲಿಯೇ ತನ್ನ ಬದುಕು ರೂಪಿಸಿಕೊಳ್ಳುತ್ತದೆ.  ಇದೇ ಸಿದ್ಧಾಂತ ನೇಕಾರಿಕೆಯಲ್ಲಿ ನೂಲನ್ನು ತೆಗೆದು ನೇಕಾರಿಕೆ ವೃತ್ತಿಯ ಮೂಲಕ ಬದುಕನ್ನು ಕಟ್ಟಿಕೊಳ್ಳುತ್ತಾರೆ.  ಹೀಗಾಗಿ ಜೇಡರ ದಾಸಿಮಯ್ಯ ಎಂಬ ಹೆಸರು ನೇಕಾರಿಕೆ ವೃತ್ತಿಯ ದ್ಯೋತಕವಾಗಿರುವ ಸಾಧ್ಯತೆ ಇದೆ.  ವಚನಕಾರರು ಯಾರೂ ಸಹ ಮಠಗಳನ್ನು ಕಟ್ಟಲಿಲ್ಲ, ಅಲ್ಲಿದ್ದದ್ದು ಅನುಭವ ಮಂಟಪ ಮಾತ್ರ. ಮಾನಸಿಕ ಸುಸ್ಥಿತಿ ಕಾಯ್ದುಕೊಳ್ಳಲು ಶರಣರ ತತ್ವ ಸಂದೇಶಗಳು ಸಹಕಾರಿಯಾಗಿವೆ ಎಂಬುದಾಗಿ ವಿಠ್ಠಪ್ಪ ಗೋರಂಟ್ಲಿ ಅವರು ಅಭಿಪ್ರಾಯಪಟ್ಟರು.
  ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ ಅವರು ನೆರವೇರಿಸಿದರು.  ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಗಣ್ಯರಾದ ವೀರಣ್ಣ ಬಡಿಗೇರ್, ನಾಗರಾಜ ಬಳ್ಳಾರಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿದರು.  ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಸಮಾರಂಭಕ್ಕೂ ಮುನ್ನ ದೇವರದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆ ನಗರದ ಗೌರಿಶಂಕರ ದೇವಸ್ಥಾನದಿಂದ ಪ್ರಾರಂಭಗೊಂಡು, ಸಾಹಿತ್ಯ ಭವನದವರೆಗೂ ಸಾಗಿ ಬಂದಿತು.  ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.
Please follow and like us:
error

Leave a Reply

error: Content is protected !!