ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಿಸಲು ಸರ್ಕಾರಕ್ಕೆ ಒತ್ತಾಯ.

ಕೊಪ್ಪಳ ಫೆ. ೨೬  ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡುವ ಮೂಲಕ ವೇತನ ತಾರತಮ್ಯವನ್ನು ನಿವಾರಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಡಳಿತ ಭವನದ ಎದುರು ಶುಕ್ರವಾರದಂದು ಘೋಷಣೆಗಳನ್ನು ಹಾಕಲಾಯಿತು.
     ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆ ಪತ್ರವನ್ನು  ಜಿಲ್ಲಾಧಿಕಾರಿಗಳ ಮೂಲಕ  ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಕೋರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಅವರು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಸಲ್ಲಿಸಿದರು.  ಇದಕ್ಕೂ ಪೂರ್ವದಲ್ಲಿ ನೌಕರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಲ್ಲಿ ಅಜಗಜಾಂತರ ವ್ಯೆತ್ಯಾಸವಿದೆ.  ಈಗಾಗಲೆ ಕೇಂದ್ರ ಸರ್ಕಾರ ನೌಕರರ ವೇತನ ಪರಿಷ್ಕರಿಸಲು ೭ ನೇ ವೇತನ ಆಯೋಗ ರಚಿಸಿ, ಶಿಫಾರಸು ಜಾರಿಗೊಳಿಸುವ ಹಂತದಲ್ಲಿದೆ.  ಈಗಲೇ ಕೇಂದ್ರ ನೌಕರರಿಗೂ ರಾಜ್ಯ ಸರ್ಕಾರಿ ನೌಕರರಿಗೂ ಕನಿಷ್ಠ ಶೇ. ೨೦. ೫೧ ರಿಂದ ಗರಿಷ್ಠ ಶೇ. ೮೬. ೩೯ ರಷ್ಟು ವ್ಯೆತ್ಯಾಸವಿದೆ.  ಇನ್ನು ೭ ನೇ ವೇತನ ಆಯೋಗದ ಶಿಫಾರಸು ಜಾರಿಗೊಂಡಲ್ಲಿ, ಈ ವ್ಯೆತ್ಯಾಸ ಕನಿಷ್ಠ ಶೇ. ೪೪. ೦೬ ರಿಂದ ಗರಿಷ್ಠ ಶೇ. ೧೦೯. ೯೪ ರವರೆಗೆ ಆಗಲಿದೆ.  ಅಂದರೆ ಒಬ್ಬ ಡಿ-ಗ್ರೂಪ್ ನೌಕರನಿಗೆ ಕೇಂದ್ರ ಸರ್ಕಾರ ನೀಡುವಷ್ಟು ವೇತನವನ್ನು, ರಾಜ್ಯ ಸರ್ಕಾರದ ಅಧಿಕಾರಿ ವೃಂದದವರು ಪಡೆಯುತ್ತಿದ್ದಾರೆ.  ಸಮಾನ ಕೆಲಸಕ್ಕೆ ಸಮಾನ ವೇತನ ನೀತಿ ಎಲ್ಲರಿಗೂ ಅನ್ವಯವಾಗಬೇಕು.  ಈಗಾಗಲೆ ನಮ್ಮ ನೆರೆಹೊರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ದೇಶದ ೨೪ ರಾಜ್ಯಗಳು ತನ್ನ ನೌಕರರಿಗೆ ಕೇಂದ್ರ ಸರ್ಕಾರದ ವೇತನಕ್ಕೆ ಅನುಗುಣವಾಗಿ ವೇತನವನ್ನು ನೀಡುತ್ತಿವೆ.  ಆದರೆ ಕರ್ನಾಟಕ ರಾಜ್ಯ ಸರ್ಕಾರ   ಈ ನೀತಿಯನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ.  ರಾಜ್ಯ ಸರ್ಕಾರಿ ನೌಕರರು ದೇಶದಲ್ಲೇ ಅತ್ಯಂತ ಕಡಿಮೆ ವೇತನ ಮತ್ತು ಭತ್ಯೆಗಳನ್ನು ಪಡೆಯುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ.  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನುಷ್ಠಾನಗೊಳಿಸಬೇಕು ಎನ್ನುವ ಏಕೈಕ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.  ವೇತನ ಪರಿಷ್ಕರಣೆ ಕುರಿತಂತೆ ಮುಖ್ಯಮಂತ್ರಿಗಳು ನೌಕರರ ಸಂಘಕ್ಕೆ ಭರವಸೆಯನ್ನು ನೀಡಿದ್ದು,  ಸದ್ಯದಲ್ಲೇ ಮಂಡನೆಯಾಗಲಿರುವ ಆಯ-ವ್ಯಯದಲ್ಲಿ ವೇತನ ಪರಿಷ್ಕರಣೆ ಕುರಿತಂತೆ
ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.  ಸದ್ಯ ರಾಜ್ಯದ ಎಲ್ಲ
ಜಿಲ್ಲಾಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮತ್ತು ತಾಲೂಕು ಕೇಂದ್ರಗಳಲ್ಲಿ
ತಹಸಿಲ್ದಾರರ ಮೂಲಕ ಮನವಿ ಪತ್ರವನ್ನು ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿಗಳಿಗೆ
ಸಲ್ಲಿಸುವಂತಹ ಕಾರ್ಯಕ್ರಮವನ್ನು ಹಾಕಿಕೊಂಡಿದೆ.  ಒಂದು ವೇಳೆ ರಾಜ್ಯ ಸರ್ಕಾರಿ ನೌಕರರ
ಸಂಘದ ಬೇಡಿಕೆ ಈಡೇರದಿದ್ದಲ್ಲಿ, ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಚರ್ಚಿಸಿ, ಮುಂದಿನ
ಹೋರಾಟದ ಮಾರ್ಗಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧ್ಯಕ್ಷ ನಾಗರಾಜ
ಜುಮ್ಮನ್ನವರ್ ಅವರು ಹೇಳಿದರು.
     ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಪ್ಪ ಜೋಗಿನ್ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವ ಮನವಿ ಪತ್ರವನ್ನು ಓದಿದರು.  ಮನವಿ ಪತ್ರವನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ನೌಕರರ ಸಂಘದ ಮನವಿ ಪತ್ರವನ್ನು ನಿಯಮಾನುಸಾರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.  ನೌಕರರ ಸಂಘದ ಹಲವು ಪದಾಧಿಕಾರಿಗಳು ಸೇರಿದಂತೆ ನೂರಾರು ಸರ್ಕಾರಿ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error