ಆಲಿಕಲ್ಲು ಮಳೆ : ಹಾನಿ ಪ್ರದೇಶಕ್ಕೆ ಶಾಸಕರೊಂದಿಗೆ ಜಿ.ಪಂ. ಸಿ.ಇ.ಓ ಭೇಟಿ

  ಕೊಪ್ಪಳ ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
  ಕೆಲಸ ದಿನಗಳ ಹಿಂದೆ ತಾಲೂಕಿನಲ್ಲಿ ಸುರಿದ ಆಲಿಕಲ್ಲು ಮಳೆಗೆ ವಿವಿಧ ಗ್ರಾಮಗಳ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ.  ಈ ಹಿನ್ನೆಲೆಯಲ್ಲಿ ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಜಿ.ಪಂ. ಸಿಇಓ ಎಸ್. ರಾಜಾರಾಂ, ತಹಸಿಲ್ದಾರ್ ಬಿ.ಎಲ್. ಘೋಟೆ ಸೇರಿದಂತೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ತಾಲೂಕಿನ ಅಗಳಕೇರಾ, ಕಂಪಸಾಗರ, ಶಿವಪುರ, ಕವಳಿ, ಮಹಮದ್ ನಗರ, ನಾಗರಗಡ್ಡಿ ಮಠ, ನಾಯಾಯಣ ಪೇಟೆ, ಆಯೋಧ್ಯೆ ನಗರ, ಬಸಾಪುರ, ಹಳೆಬಂಡಿಹರ್ಲಾಪುರ, ಹೊಸಬಂಡಿಹರ್ಲಾಪುರ, ಬೇವಿನಹಳ್ಳಿ, ಹುಲಿಗಿ, ಹುಲಿಗಿ ತಾಂಡ, ಕವಳಿ ತಾಂಡ, ಹಳೆಕಂಪಸಾಗರ, ಹಿಟ್ನಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಭತ್ತ ಸೇರಿದಂತೆ ವಿವಿಧ ಕೃಷಿ ಬೆಳೆಗಳು, ಮಾವು, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಹಾನಿ ಬಗ್ಗೆ ಪರಿಶೀಲನೆ ನಡೆಸಲಾಯಿತು.  ಶಾಸಕ ಸಂಗಣ್ಣ ಕರಡಿ ಅವರು ಬೆಳೆ ಹಾನಿ ಅನುಭವಿಸಿದ ರೈತರಿಗೆ ಸಾಂತ್ವನ ವ್ಯಕ್ತಪಡಿಸಿದರು.  ಹಾನಿ ಅನುಭವಿಸಿದ ರೈತರಿಗೆ ಪರಿಹಾರ ದೊರಕಿಸಲು ಅನುದಾನ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಶಾಸಕ ಸಂಗಣ್ಣ ಕರಡಿ ಅವರು ಭರವಸೆ ನೀಡಿದ್ದಾರೆ. ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಕಾರ್ಯಪಡೆ ಸಭೆಯಲ್ಲಿ ಆಲಿಕಲ್ಲು ಮಳೆಯಿಂದ ಉಂಟಾದ ಬೆಳೆ ಹಾನಿ ಕುರಿತಂತೆ ಚರ್ಚೆ ನಡೆಸಲಾಯಿತು.  ಬೆಳೆ ನಷ್ಟದ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ವರದಿ ಪಡೆಯುವ ಕುರಿತಂತೆ ಚರ್ಚಿಸಲಾಯಿತು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ತಿಳಿಸಿದ್ದಾರೆ.
Please follow and like us:
error