ಆನೆಗೊಂದಿ ಉತ್ಸವ : ವೇದಿಕೆ ಹಾಗೂ ಮೆರವಣಿಗೆಯಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ

ಕೊಪ್ಪಳ ಏ. :  ಇದೇ ಏ. ೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವ ಆನೆಗೊಂದಿ ಉತ್ಸವದ ಪ್ರಮುಖ ವೇದಿಕೆ ಹಾಗೂ ಸಮಾನಾಂತರ ವೇದಿಕೆ ಕಾರ್ಯಕ್ರಮಗಳು ಅಲ್ಲದೆ ಮೆರವಣಿಗೆಗೆ ಸ್ಥಳೀಯ ಕಲಾವಿದರು ಮತ್ತು ಕಲಾತಂಡಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದರು.
  ಆನೆಗೊಂದಿ ಉತ್ಸವ ಆಚರಣೆ ಸಂಬಂಧ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಆನೆಗೊಂದಿ ಉತ್ಸವದಲ್ಲಿ ರಾಜ್ಯ ಮಟ್ಟದ ಕಲಾವಿದರು, ನೆರೆಹೊರೆಯ ಜಿಲ್ಲೆಗಳ ಕಲಾವಿದರು, ಸ್ಥಳೀಯ ಕಲಾವಿದರು ಅಲ್ಲದೆ ಸೆಲೆಬ್ರಿಟಿ ಕಲಾವಿದರ ಆಯ್ಕೆ ಸಂದರ್ಭದಲ್ಲಿ ಆಯಾ ಕಲಾವಿದರ ಪ್ರತಿಭೆಗೆ ಅನುಗುಣವಾಗಿ ಮನ್ನಣೆ ನೀಡುವಂತಾಗಬೇಕು.  ಮುಖ್ಯ ವೇದಿಕೆ ಮತ್ತು ಸಮಾನಾಂತರ ವೇದಿಕೆಗಳಿಗೆ ಅಲ್ಲದೆ ಮೆರವಣಿಗೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು.  ಒಟ್ಟಾರೆ ಸ್ಥಳೀಯ ಶಾಸಕರೊಂದಿಗೆ ಸಮಾಲೋಚಿಸಿ, ಕಲಾವಿದರ ಆಯ್ಕೆಪಟ್ಟಿಯನ್ನು ಅಂತಿಮಗೊಳಿಸುವಂತೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
  ಮುಖ್ಯ ವೇದಿಕೆಯನ್ನು ಆಕರ್ಷಕಗೊಳಿಸಲು,  ಪ್ರಕೃತಿ ಸೌಂದರ್ಯವನ್ನು ಬಳಸಲು ಈಗಾಗಲೆ ನಿರ್ಧರಿಸಲಾಗಿದ್ದು, ಮುಖ್ಯ ವೇದಿಕೆಗೆ ಯಾವುದೇ ಬ್ಯಾಕ್‌ಡ್ರಾಪ್ ಬಳಸಲಾಗುತ್ತಿಲ್ಲ.  ಬದಲಿಗೆ ವೇದಿಕೆ ಹಿಂಭಾಗದಲ್ಲಿನ ಪ್ರಕೃತಿ ನಿರ್ಮಿತ ಬಂಡೆ,ಕಲ್ಲುಗಳಿಗೆ ವರ್ಣಮಯ ವಿದ್ಯುತ್ ದೀಪಾಲಂಕಾರಗೊಳಿಸಿ ಅಲಂಕರಿಸುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಆನೆಗೊಂದಿ ಉತ್ಸವಕ್ಕೆ ಸಂಬಂಧಿಸಿದಂತೆ ವೇದಿಕೆಯ ಸಿದ್ಧತೆ, ಕಲಾವಿದರ ಡ್ರೆಸ್ಸಿಂಗ್ ರೂಂ, ಮಾಧ್ಯಮ ಕೇಂದ್ರ, ಆಸನಗಳ ವ್ಯವಸ್ಥೆ, ಬ್ಯಾರಿಕೇಡಿಂಗ್, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಕಲಾವಿದರು, ಪೊಲೀಸರು, ಅತಿಥಿ ಗಣ್ಯರು, ಮಾಧ್ಯಮದವರಿಗೆ ಸೂಕ್ತ ಊಟೋಪಹಾರದ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕ್ರೀಡೆಗಳು : ಆನೆಗೊಂದಿ ಉತ್ಸವ ನಿಮಿತ್ಯ ಏ. ೧೨ ರಂದು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಕ್ರೀಡಾಕೂಟ ಹಮ್ಮಿಕೊಳ್ಳಲಾಗುವುದು.  ಪುರುಷರಿಗಾಗಿ ೧೨ ಕಿ.ಮೀ. ಮ್ಯಾರಥಾನ್ ಓಟ, ಕುಸ್ತಿ, ಭಾರ ಎತ್ತಿ ಬಸ್ಕಿ ಹೊಡೆಯುವ ಅಪ್ಪಟ ಗ್ರಾಮೀಣ ಕ್ರೀಡೆಯನ್ನು ಆಯೋಜಿಸಲಾಗುವುದು.  ಮಹಿಳೆಯರಿಗೆ ವಾಲಿಬಾಲ್, ೬ ಕಿ.ಮೀ. ಮ್ಯಾರಥಾನ್ ಓಟ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗುವುದು.  ಅಲ್ಲದೆ ಮಕ್ಕಳಿಂದ ಮಲ್ಲಕಂಭ ಸ್ಪರ್ಧೆ ಮತ್ತು ಪ್ರದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು ಸಭೆಗೆ ವಿವರಿಸಿದರು.
ಮೆರವಣಿಗೆಗೆ ರಂಗು : ಆನೆಗೊಂದಿ ಉತ್ಸವದ ಅಂಗವಾಗಿ ಏ. ೧೧ ರಂದು ಬೆಳಿಗ್ಗೆ ೮ ಗಂಟೆಗೆ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನದಿಂದ ಮೆರವಣಿಗೆಯನ್ನು ಪ್ರಾರಂಭಿಸಲಾಗುವುದು.  ಮೆರವಣಿಗೆಯಲ್ಲಿ ಚಿಲಿಪಿಲಿ ಗೊಂಬೆಗಳು, ಮಹಿಳಾ ಡೊಳ್ಳು, ಪೂಜಾಕುಣಿತ, ತಾಷರಂಡೋಲು ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆಗೆ ರಂಗು ತುಂಬಲಿವೆ.  ಮೆರವಣಿಗೆಗೆ ಸ್ಥಳೀಯ ೧೫ ತಂಡಗಳು ಹಾಗೂ ಹೊರಜಿಲ್ಲೆಗಳ ೦೫ ತಂಡಗಳನ್ನು ಆಹ್ವಾನಿಸಲಾಗುವುದು.  ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯನ್ನು ಆಕರ್ಷಕಗೊಳಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ತಿಳಿಸಿದರು.
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಗಂಗಾವತಿ ಡಿವೈಎಸ್‌ಪಿ ವಿನ್ಸೆಂಟ್ ಶಾಂತಕುಮಾರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply