fbpx

ಖಾಯಂ ಪಡಿತರ ಚೀಟಿ ಪಡೆಯಲು ಸೂಚನೆ

 ಜಿಲ್ಲೆಯಲ್ಲಿ ಕಳೆದ ನವೆಂಬರ್ ೨೦೧೧ ರಲ್ಲಿ ಆನ್‌ಲೈನ್ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಹಾಗೂ ತಾತ್ಕಾಲಿಕದಿಂದ ಖಾಯಂ ಪಡಿತರ ಚೀಟಿಗಾಗಿ ಫೋಟೋ, ಬಯೋಮೆಟ್ರಿಕ್ ನೀಡಿದವರ ಖಾಯಂ ಪಡಿತರ ಚೀಟಿಗಳನ್ನು ಮುದ್ರಿಸಿ ಪೂರೈಸಲಾಗಿದ್ದು, ಇದುವರೆಗೂ ಪಡಿತರ ಚೀಟಿಯನ್ನು ಪಡೆದುಕೊಳ್ಳದೇ ಇರುವವರು ಕೂಡಲೆ ತಮ್ಮ ಖಾಯಂ ಪಡಿತರ ಚೀಟಿಯನ್ನು ತಪ್ಪದೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸೂಚನೆ ನೀಡಿದ್ದಾರೆ.
  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ನವೆಂಬರ್ ೨೦೧೧ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ರೇಷನ್ ಕಾರ್ಡುಗಾಗಿ ಅರ್ಜಿ ಸಲ್ಲಿಸಿದವರಿಗೆ ಹಾಗೂ ತಾತ್ಕಾಲಿಕದಿಂದ ಖಾಯಂ ಪಡಿತರ ಚೀಟಿಗಾಗಿ ಭಾವಚಿತ್ರ ಹಾಗೂ ಜೀವಮಾಪನ ನೀಡಿದ ಕಾರ್ಡುದಾರರಿಗೆ ಖಾಯಂ ಪಡಿತರ ಚೀಟಿಗಳನ್ನು ಮುದ್ರಿಸಿ ವಿತರಿಸುವ ಕಾರ್ಯ ಕಳೆದ ಹಲವಾರು ತಿಂಗಳುಗಳಿಂದ ಗ್ರಾಮೀಣ ಪ್ರದೇಶದವರಿಗಾಗಿ ಜಿಲ್ಲೆಯ ಗ್ರಾ.ಪಂ. ಕಛೇರಿಗಳಲ್ಲಿ ಹಾಗೂ ಪಟ್ಟಣ/ನಗರ ಪ್ರದೇಶದವರಿಗಾಗಿ ತಹಶೀಲ್ದಾರರ ಕಛೇರಿಗಳಲ್ಲಿ ನಡೆದುಕೊಂಡು ಬಂದಿರುತ್ತದೆ. ಈವರೆಗೆ ಜಿಲ್ಲೆಯಲ್ಲಿ ೨೩೭೨೬ ಆನ್‌ಲೈನ್ ಖಾಯಂ ಪಡಿತರ ಚೀಟಿಗಳು ಹಾಗೂ ೮೦೧೪೮ ತಾತ್ಕಾಲಿಕದಿಂದ ಖಾಯಂ ಪಡಿತರ ಚೀಟಿಗಳನ್ನು ವಿತರಣೆಯಾಗಿದ್ದು,  ಇನ್ನೂ ೫೭೬೨ ಆನ್‌ಲೈನ್ ಖಾಯಂ ಪಡಿತರ ಚೀಟಿಗಳು ಹಾಗೂ ೨೭೯೨೬ ತಾತ್ಕಾಲಿಕದಿಂದ ಖಾಯಂ ಆಗಿ ಮುದ್ರಣವಾಗಿ ವಿತರಣೆಯಾಗದೇ ಜಿಲ್ಲೆಯ ಎಲ್ಲಾ ಗ್ರಾ.ಪಂ. ಕಛೇರಿಗಳಲ್ಲಿ ಹಾಗೂ ತಹಶೀಲ್ದಾರರ ಕಛೇರಿಗಳಲ್ಲಿ ಉಳಿದಿರುತ್ತವೆ. ಆದ್ದರಿಂದ ತಾತ್ಕಾಲಿಕ ಕಾರ್ಡುದಾರರು ಹಾಗೂ ಆನ್‌ಲೈನ್ ಅರ್ಜಿದಾರರು ತಮ್ಮ ಖಾಯಂ ಕಾರ್ಡುಗಳನ್ನು ಪಡೆದುಕೊಂಡು ಆಹಾರಧಾನ್ಯ/ಸೀಮೆಎಣ್ಣೆ ಪಡೆದುಕೊಳ್ಳುವಂತೆ ಕಳೆದ ೬ ತಿಂಗಳುಗಳಿಂದ ಪದೇ ಪದೇ ಪ್ರಕಟಣೆ ನೀಡಲಾಗಿದ್ದು, ನ್ಯಾಯಬೆಲೆ ಅಂಗಡಿಕಾರರ ಮೂಲಕವು ಕಾರ್ಡುದಾರರಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿ ಖಾಯಂ ಪಡಿತರ ಚೀಟಿ ಪಡೆದ ಕಾರ್ಡುದಾರರಿಗೆ ಮಾತ್ರ ಆಹಾರಧಾನ್ಯ, ಸೀಮೆ ಎಣ್ಣೆ ವಿತರಿಸುವಂತೆ ಸೂಚಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಇನ್ನು ಅನೇಕ ಕಾರ್ಡುಗಳು ವಿತರಣೆಯಾಗದಿರುವುದು, ಕಾರ್ಡುದಾರರ ಇರುವಿಕೆ ಹಾಗೂ ಅರ್ಹತೆಯ ಬಗ್ಗೆ ಸಂಶಯ ಮೂಡುವಂತಾಗಿದೆ.  ಆದ್ದರಿಂದ ಪಡಿತರ ಚೀಟಿಯನ್ನು ಪಡೆದುಕೊಂಡು ಹೋಗದೇ ಇರುವವರ ಪಟ್ಟಿಯನ್ನು ಇದೇ ತಿಂಗಳು ಆಯಾ ನ್ಯಾಯಬೆಲೆ ಅಂಗಡಿಕಾರರಿಗೆ ನೀಡಲಾಗಿದೆ.  ಈ ಪಟ್ಟಿಯಲ್ಲಿರುವ ಗ್ರಾಮೀಣ ಪ್ರದೇಶದ ಕಾರ್ಡುದಾರರು   ಗ್ರಾ.ಪಂ.ಕಛೇರಿಗಳಿಗೆ ಹಾಗೂ ಪಟ್ಟಣ/ನಗರ ಪ್ರದೇಶದವರಾಗಿದ್ದಲ್ಲಿ ತಹಶೀಲ್ದಾರರ ಕಛೇರಿಗೆ ತೆರಳಿ ಖಾಯಂ ಪಡಿತರ ಚೀಟಿಗಳನ್ನು ಪಡೆದು, ಜೂನ್-೨೦೧೩ ನೇ ಮಾಹೆಯ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಕೋರಲಾಗಿದೆ. 
ಒಂದು ವೇಳೆ ಖಾಯಂ ಕಾರ್ಡುಗಳನ್ನು ಪಡೆದುಕೊಳ್ಳದಿದ್ದಲ್ಲಿ ತಾತ್ಕಾಲಿಕ ಕಾರ್ಡುದಾರರಿಗೆ ಜುಲೈ-೨೦೧೩ ನೇ ಮಾಹೆಯಿಂದ ಆಹಾರಧಾನ್ಯ ನಿಲ್ಲಿಸುವುದಲ್ಲದೇ ತಾತ್ಕಾಲಿಕದಿಂದ ಖಾಯಂ ಆಗಿ ಮುದ್ರಿತವಾಗಿ ವಿತರಣೆಯಾಗದ ಹಾಗೂ ಮುದ್ರಿತವಾದ ಆನ್‌ಲೈನ್ ಖಾಯಂ ಕಾರ್ಡಗಳನ್ನು ರದ್ದುಪಡಿಸಲಾಗುವುದೆಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಡಿಸೆಂಬರ್-೨೦೧೦ ಕ್ಕಿಂತ ಮುಂಚೆ ಖಾಯಂ ಪಡಿತರ ಚೀಟಿಯನ್ನು ಪಡೆದುಕೊಂಡಿರುವ ಕಾರ್ಡುದಾರರು ಇಂತಹ ಕಾರ್ಡುಗಳನ್ನು ನವೀಕರಿಸಿಕೊಳ್ಳುವ ಸಲುವಾಗಿ ಗ್ರಾಮೀಣ ಪ್ರದೇಶದವರು ಸಂಬಂಧಪಟ್ಟ ಗ್ರಾ.ಪಂ.ಕಛೇರಿಗಳಿಗೆ ಹಾಗೂ ಪಟ್ಟಣ, ನಗರ ಪ್ರದೇಶಗಳಲ್ಲಿ ಸೇವಾ ಕೇಂದ್ರಗಳಿಗೆ ಹೋಗಿ ಭಾವಚಿತ್ರ ಮತ್ತು ಜೀವಮಾಪಕವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!