ಕೃಷಿ ಪದವಿ ಪ್ರವೇಶ: ಅಭ್ಯರ್ಥಿಗಳಿಗೆ ಮಾಹಿತಿ ಶಿಬಿರ

  ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಘಟಕವು ಕೃಷಿ ಪದವಿಗೆ ಪ್ರವೇಶ ಪಡೆಯಬಯಸುವ ಅಭ್ಯರ್ಥಿಗಳಿಗೆ ಮೇ. ೧೪ ರಂದು ಒಂದು ದಿನದ ಮಾಹಿತಿ ಶಿಬಿರ ಆಯೋಜಿಸಿದೆ.
  ಪದವಿ ವ್ಯಾಸಂಗಕ್ಕಾಗಿ ಪ್ರತಿ ವರ್ಷ ಪದವಿ ಪೂರ್ವ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಲ್ಲಿ ಗೊಂದಲ ಹಾಗೂ ವಿಚಲಿತ ಮನೋಭಾವನೆ ಮೂಡುವುದು ಸಾಮಾನ್ಯವಾಗಿದೆ. ಇಂಜಿನೀಯರಿಂಗ ಹಾಗೂ ವೈದ್ಯಕೀಯ ಪ್ರವೇಶಗಳಲ್ಲಿಯ ಪ್ರತಿ ವರ್ಷದ ಗೊಂದಲಗಳಿಂದಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಪರದಾಡುವಂತಾಗಿರುತ್ತದೆ. ಕೃಷಿ ಪದವಿಗೆ ಪ್ರವೇಶ ಬಯಸುವ ಆಸಕ್ತ ವಿದ್ಯಾರ್ಥಿಗಳಿಗೆ ಇಂತಹ ತೊಂದರೆಗಳು ಉಂಟಾಗದಿರಲು ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ. ಇತರೆ ವೃತ್ತಿಪರ ಪದವಿ ಶಿಕ್ಷಣಗಳಲ್ಲಿ ಕೃಷಿ ಪದವಿ ಶಿಕ್ಷಣವೂ ಹೆಚ್ಚಿನ ಮಹತ್ವ ಪಡೆದಿದೆ. ಇಂದು ಅನೇಕ ಪ್ರತಿಭಾವಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿಯ ವಿದ್ಯಾರ್ಥಿಗಳು ಕೃಷಿ ಪದವಿ ವ್ಯಾಸಂಗಕ್ಕೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಈ ಕುರಿತು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವುದು, ಪ್ರವೇಶದ ಕೆಲವು ಪ್ರಮುಖ ಹಂತಗಳು, ಪದವಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಹಾಗೂ ಕೃಷಿ ಪದವಿಯೊಂದಿಗೆ, ಕೃಷಿ ಅಭಿಯಾಂತ್ರಿಕ ಮತ್ತು ಕೃಷಿ ಸಂಬಂಧಿಸಿದ ಇತರೆ ಪದವಿ ಕಾರ್ಯಕ್ರಮಗಳ ಬಗ್ಗೆ ವಿಸ್ತೃತವಾದ ಚರ್ಚೆ ಹಾಗೂ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲು ಕೊಪ್ಪಳದ ಕರ್ನಾಟಕ ಸರಕಾರಿ ನೌಕರರ ಭವನ ಆವರಣ, ಪ್ರವಾಸಿ ಮಂದಿರ ಎದುರು ಇರುವ ಕೃಷಿ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಮೇ. ೧೪ ರಂದು ಸೋಮವಾರ  ಸಾಯಂಕಾಲ ೪.೦೦ ಗಂಟೆಗೆ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿದೆ. ಸಾಕಷ್ಟು ಪಾಲಕರು ಮತ್ತು ವಿದ್ಯಾರ್ಥಿಗಳು ವಿಚಾರಿಸುತ್ತಿರುವ ಹಿನ್ನಲೆಯಿಂದಾಗಿ ಈ ಮಾಹಿತಿ ಶಿಬಿರವನ್ನು ಏರ್ಪಡಿಸಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಇದರ ಸದುಪಯೋಗ ಪಡೆಯಬೇಕು ಹೆಚ್ಚಿನ ವಿವರಗಳಿಗೆ ದೂ: ೦೮೫೩೯-೨೩೦೨೦೫ ಕ್ಕೆ ಸಂಪರ್ಕಿಸುವಂತೆ  ತಿಳಿಸಿದೆ.
Please follow and like us:
error