ಮ್ಯಾಕ್ಸಿಕ್ಯಾಬ್‌ಗಳ ಹಾವಳಿ ನಿಯಂತ್ರಿಸಲು ಆರ್.ಟಿ.ಓ. ಗೆ ಜಿಲ್ಲಾಧಿಕಾರಿ ಸೂಚನೆ

ಕೊಪ್ಪಳ ಆ. : ಕೊಪ್ಪಳ ಜಿಲ್ಲೆಯಲ್ಲಿ ಟಾಟಾ ಏಸರ್, ಮ್ಯಾಕ್ಸಿಕ್ಯಾಬ್‌ಗಳು, ಕ್ರೂಸರ್ ವಾಹನಗಳ ಹಾವಳಿ ಮಿತಿಮೀರಿದ್ದು, ಈ ವಾಹನಗಳು ಮಿತಿ ಮೀರಿದ ವೇಗದಲ್ಲಿ ಓಡಾಡುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಈ ವಾಹನಗಳ ಹಾವಳಿಯನ್ನು ಕಂಡೂ ಕಾಣದಂತಿರುವ ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್ ಅವರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಟಾಟಾ ಏಸರ್, ಮ್ಯಾಕ್ಸಿಕ್ಯಾಬ್‌ಗಳು, ಕ್ರೂಸರ್ ವಾಹನಗಳ ಹಾವಳಿ ಮಿತಿ ಮೀರಿದೆ. ಕೊಪ್ಪಳ ನಗರದಲ್ಲಿ ಸರ್ಕಾರಿ ಬಸ್ ನಿಲ್ದಾಣದ ಎದುರುಗಡೆ ಸೇರಿದಂತೆ ನಗರದ ಪ್ರಮುಖ ವೃತ್ತಗಳು ಹಾಗೂ ಎಲ್ಲೆಂದರಲ್ಲಿ ಸಾಲಾಗಿ ನಿಂತುಕೊಂಡು ಕಾರ್ಯಾಚರಣೆ ಮಾಡುತ್ತಿವೆ. ಟಾಟಾ ಏಸರ್ ಹಾಗೂ ಕ್ರೂಸರ್ ವಾಹನಗಳಂತೂ ನಿಗದಿಗಿಂತ ಮೂರುಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಅತಿವೇಗದಲ್ಲಿ ಸಂಚರಿಸುತ್ತಿವೆ. ಜಿಲ್ಲೆಯ ಇತರೆ ತಾಲೂಕು ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಕೆಲವು ಸರಕು ಸಾಗಾಣಿಕೆ ವಾಹನಗಳು ಸಹ ಅನಧಿಕೃತವಾಗಿ ಸಿಟಿಂಗ್ ವ್ಯವಸ್ಥೆ ಮಾಡಿಕೊಂಡು, ಪ್ರಯಾಣಿಕರನ್ನು ತುಂಬಿಕೊಂಡು ಅತಿವೇಗದಲ್ಲಿ ಓಡಾಡುತ್ತಿವೆ. ಪಾದಚಾರಿಗಳು ರಸ್ತೆಯ ಮೇಲೆ ಓಡಾಡುವುದೇ ದುಸ್ತರವಾಗಿ ಪರಿಣಮಿಸಿದೆ. ಇದನ್ನು ತಡೆಗಟ್ಟಲು ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯತೆಯಿಂದ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ವಾಹನಗಳ ಪರ್ಮಿಟ್ ರದ್ದುಪಡಿಸಲು ಜಿಲ್ಲಾದಿಕಾರಿಗಳು ಸೂಚನೆ ನೀಡಿದರು.
ಅಸಮಾಧಾನ: ನಗರದ ಸಾರ್ವಜನಿಕ ಮೈದಾನದಲ್ಲಿ ನೂರಾರು ವಾಹನಗಳು, ಲಾರಿಗಳು, ಟ್ರಕ್‌ಗಳು ಬೀಡುಬಿಟ್ಟಿದ್ದು, ಈ ಭಾರಿ ವಾಹನಗಳಿಗೆ ಅಲ್ಲಿ ನಿಲ್ಲಲು ಅನುಮತಿ ನೀಡಿದವರು ಯಾರು. ಜಿಲ್ಲೆಯ ಮೋಟಾರು ವಾಹನಗಳ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಕಣ್ಣೆದುರಿಗೆ ನಡೆಯುತ್ತಿದ್ದರೂ, ಕಂಡೂ ಕಾಣದಂತಿರುವ ಮೋಟಾರು ವಾಹನ ನಿರೀಕ್ಷಕರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಬಹಳಷ್ಟು ಮೋಟಾರು ವಾಹನ ನಿರೀಕ್ಷಕರು ಕೇವಲ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಮ್ಮ ಕರ್ತವ್ಯವೆಂದು ಭಾವಿಸಿಕೊಂಡು ಉಳಿದೆಡೆ ನಿರ್ಲಕ್ಷ್ಯ ಮನೋಭಾವ ಧೋರಣೆ ತಳೆದಿರುವುದು ಸಮಂಜಸವಲ್ಲ. ಅಪಘಾತ ಕಾರಣಕ್ಕಾಗಿ ವಾಹನಗಳ ಮಾಲೀಕರು ಲಕ್ಷಾಂತರ ರೂಪಾಯಿಗಳನ್ನು ದಂಡಕಟ್ಟಿ ಕೈತೊಳೆದುಕೊಳ್ಳುತ್ತಾರೆ. ಆದರೆ ಒಬ್ಬ ವ್ಯಕ್ತಿಯ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಿವಿಮಾತು ಹೇಳಿದರು.
ಪರ್ಮಿಟ್ ರದ್ದುಗೊಳಿಸಿ: ನಗರದ ಬಸ್‌ನಿಲ್ದಾಣ ಎದುರುಗಡೆ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ವಾಹನಗಳು ನಿಂತುಕೊಂಡು, ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಒಮ್ಮೆ ಅವರಿಗೆ ಎಚ್ಚರಿಕೆ ನೀಡಿ, ನಂತರವೂ ಇದೇ ಪ್ರವೃತ್ತಿ ಮುಂದುವರೆದಲ್ಲಿ, ಅಂತಹ ವಾಹನಗಳ ಪರ್ಮಿಟ್ ಅನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply