ಕೊಪ್ಪಳದಲ್ಲಿ ಮತದಾರರ ಜಾಗೃತಿಗೆ ಮ್ಯಾರಥಾನ್ ಓಟ :

ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರ

 ನೈತಿಕ ಕಡ್ಡಾಯ ಮತದಾನಕ್ಕೆ ಮತದಾರರನ್ನು ಪ್ರೇರೇಪಿಸಲು, ಜಿಲ್ಲಾ ಸ್ವೀಪ್ ಸಮಿತಿಯು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಕಾಲೇಜುಗಳ ಸಹಯೋಗದೊಂದಿಗೆ ಬುಧವಾರ ನಗರದಲ್ಲಿ ಮ್ಯಾರಥಾನ್ ಓಟ ಸ್ಪರ್ಧೆ ಮತ್ತು ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
  ನಗರದ ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ ಓಟ ಸ್ಪರ್ಧೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು,  ಜನಹಿತ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುವಂತಹ ಜವಾಬ್ದಾರಿಯನ್ನು ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಹಿಸಿಕೊಡಲಾಗಿದ್ದು, ಇಂತಹ ಜನಪ್ರತಿನಿಧಿಗಳು ಈ ನಾಡಿನ ಎಲ್ಲ ಮತದಾರರ ಪ್ರತಿನಿಧಿಯಾಗಿರುತ್ತಾರೆ.  ಇಂತಹ ಜನಪ್ರತಿನಿಧಿಯನ್ನು ಶೇ. ೧೦೦ ರಷ್ಟು ಮತದಾರರೇ ಆಯ್ಕೆ ಮಾಡಿದಲ್ಲಿ, ಅದು ಸೂಕ್ತ.  ಆದರೆ ಕೇವಲ ಶೇ. ೬೦ ರಿಂದ ೬೫ ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದಲ್ಲಿ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ.  ಎಲ್ಲ ಮತದಾರರು ಅಂದರೆ ಶೇ.  ೧೦೦ ರಷ್ಟು ಮತದಾನವಾಗಬೇಕೆಂಬುದೇ ನಮ್ಮ ಜನತಂತ್ರದ ಸಿದ್ದಾಂತವಾಗಿದ್ದು, ಹೀಗಾದಾಗ ಮಾತ್ರ ಜನಪ್ರತಿನಿಧಿಯ ಆಯ್ಕೆ ಸಮಂಜಸ ಎನಿಸಿಕೊಳ್ಳುತ್ತದೆ.  ಯುವಜನತೆ ಕಡ್ಡಾಯವಾಗಿ ನೈತಿಕವಾದ ಮತದಾನ ಅಂದರೆ, ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸುವುದರ ಜೊತೆಗೆ, ಇತರೆ ಮತದಾರರಿಗೂ ಸಹ ಕಡ್ಡಾಯ ಮತ್ತು ನೈತಿಕ ಮತದಾನಕ್ಕೆ ಜಾಗೃತಿ ಮೂಡಿಸಬೇಕು.  ಮತದಾರರ ಜಾಗೃತಿ ಹೊಣೆಯನ್ನು ಯುವ ಮತದಾರರಾಗಿರುವ ಕಾಲೇಜು ವಿದ್ಯಾರ್ಥಿಗಳಿಗೆ ವಹಿಸಲಾಗಿದ್ದು, ಈ ನಿಟ್ಟಿನಲ್ಲಿ ಮ್ಯಾರಥಾನ್ ಓಟ ಸ್ಪರ್ಧೆಯನ್ನು ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.  ಇದೇ ರೀತಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಂಕ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ,  ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನರಾವ್ ಮುಂತಾದವರು ಭಾಗವಹಿಸಿದ್ದರು.  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ತಿಮ್ಮಾರೆಡ್ಡಿ ಮೇಟಿ ಅವರು ವಿದ್ಯಾರ್ಥಿಗಳಿಗೆ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.  
  ನಗರದ ಸಾರ್ವಜನಿಕ ಮೈದಾನದಿಂದ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ ಮೂಲಕ ಶಿರಸಪ್ಪಯ್ಯನ ಮಠ ವರೆಗೆ ಮ್ಯಾರಥಾನ್ ಸ್ಪರ್ಧೆ ನಡೆಯಿತು.  ಯುವಕರು ಮತ್ತು ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಯಿತು.  ಈ ಸ್ಪರ್ಧೆಯಲ್ಲಿ ಅಳವಂಡಿಯ ಮಂಜಪ್ಪ ಪುರದ-ಪ್ರಥಮ.  ಇರಕಲ್ಲಗಡದ ರಾಮಪ್ಪ ಎಸ್.-ದ್ವಿತೀಯ.  ಅಳವಂಡಿಯ ಅಣ್ಣಪ್ಪ ಪುರದ- ತೃತೀಯ, ಇರಕಲ್ಲಗಡದ ಮಾರುತಿ ಕುದರಿಮೋತಿ- ನಾಲ್ಕನೆ, ಕೊಪ್ಪಳದ ರವಿ ದೇಸಾಯಿ- ಐದನೇ ಮತ್ತು ಕೊಪ್ಪಳದ ಪ್ರಶಾಂತ್ ಕಟ್ಟಿಮನಿ ಆರನೆ ಸ್ಥಾನ ಪಡೆದುಕೊಂಡರು.  ಯುವತಿಯರ ವಿಭಾಗದಲ್ಲಿ ಕೊಪ್ಪಳದ ಲಕ್ಷ್ಮಿ- ಪ್ರಥಮ, ಹುಲಿಗೆಮ್ಮ ಈಳಿಗೇರ- ದ್ವಿತೀಯ.  ಪಲ್ಲವಿ ಕುಲಕರ್ಣಿ- ತೃತೀಯ. ಜ್ಯೋತಿ ಬಸವರಾಜ್ ಬಿಂಡಗಿ- ನಾಲ್ಕನೆ ಮತ್ತು ಸೌಮ್ಯ ಜಂಬಣ್ಣ ರಂಜಪಲ್ಲ- ಐದನೇ ಸ್ಥಾನ ಪಡೆದುಕೊಂಡರು.  ವಿಜೇತರಿಗೆ ಬಹುಮಾನ ವಿತರಣೆ ಕೊಪ್ಪಳದಲ್ಲಿ ಜರುಗಲಿದೆ.  ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು.
Please follow and like us:
error