fbpx

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಕ್ಷೇಪಣೆ ಆಹ್ವಾನ.

ಕೊಪ್ಪಳ, ನ.೧೬ (ಕ ವಾ)  ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಸಿಬ್ಬಂದಿ ಹುದ್ದೆಗೆ ನೇಮಕಾತಿಗಾಗಿ ಏರ್ಪಡಿಸಲಾಗಿದ್ದ ನೇರ ಸಂದರ್ಶನದ ನಂತರ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬೋಧಕ ಸಿಬ್ಬಂದಿಯ ನೇಮಕಾತಿಗಾಗಿ ಕಳೆದ ಸೆಪ್ಟಂಬರ್.೦೪ ರಂದು ನೇರ ಸಂದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಶನಕ್ಕೆ ಸಂಬಂಧಪಟ್ಟಂತೆ ಆಯ್ಕೆಗೊಂಡಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಸಂಭಾವ್ಯ ಪಟ್ಟಿ ಪ್ರಕಟಣೆಗೊಂಡ ದಿನಾಂಕದಿಂದ ೦೭ ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ನಂತರ ಬಂದಂತಹ ಆಕ್ಷೇಪಣೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಕ್ಷೇಪಣೆಗಳು ಬಾರದೇ ಇದ್ದಲ್ಲಿ ಈ ಪಟ್ಟಿಯನ್ನು ಅಂತಿಮ ಪಟ್ಟಿ ಎಂದು ಪರಿಗಣಿಸಲಾಗುವುದು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

 ನ. ೧೭ ರಂದು ಕೃಷಿ ಅಧಿಕಾರಿಗಳಿಗೆ ಒಂದು ದಿನದ ತರಬೇತಿ.
ಕೊಪ್ಪಳ ನ. ೧೬ (ಕ ವಾ)ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಕೃಷಿ ಸಂಶೋಧನಾ ಕೇಂದ್ರ, ಶಿರಗುಪ್ಪಾ, ಕೃಷಿ ಇಲಾಖೆ ಹಾಗೂ ಅಂತರರಾಷ್ಟ್ರೀಯ ಸಸ್ಯ ಪೋಷಕಾಂಶಗಳ ಸಂಸ್ಥೆ, ಹೈದರಾಬಾದ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಜಿಲ್ಲೆಯ ಕೃಷಿ ಅಧಿಕಾರಿಗಳಿಗೆ ಮೆಕ್ಕೆಜೋಳ ಪೋಷಕಾಂಶ ನಿರ್ವಹಣೆ ಕುರಿತು ನ. ೧೭ ರಂದು  ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. 
     ಈ ಕಾರ್ಯಕ್ರಮದಲ್ಲಿ, ಕೃಷಿ ವಿಶ್ವವಿದ್ಯಾಲಯ, ರಾಯಚೂರಿನ ಕುಲಪತಿ ಡಾ. ಪಿ.ಎಮ್. ಸಾಲಿಮಠ, ಡಾ. ಬಿ.ಎಮ್. ಚಿತ್ತಾಪುರ, ಸಂಶೋಧನಾ ನಿರ್ದೇಶಕರು. ಡಾ. ಎಸ್.ಕೆ. ಮೇಟಿ, ವಿಸ್ತರಣಾ ನಿರ್ದೇಶಕರು. ಡಾ. ಎ. ರಾಮದಾಸ, ಜಂಟಿ ಕೃಷಿ ನಿರ್ದೇಶಕರು, ಕೊಪ್ಪಳ ಹಾಗೂ ಡಾ. ಟಿ. ಸತ್ಯನಾರಾಯಣ, ಉಪನಿರ್ದೇಶಕರು, ಅಂತರರಾಷ್ಟ್ರೀಯ ಸಸ್ಯ ಪೋಷಕಾಂಶಗಳ ಸಂಸ್ಥೆ, ಹೈದರಾಬಾದ ರವರು ಭಾಗವಹಿಸಲಿದ್ದಾರೆ.  ಜಿಲ್ಲೆಯ ಸುಮಾರು ೬೫ – ೭೦ ಕೃಷಿ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ನ.೧೭ ರಂದು ಕೊಪ್ಪಳದಲ್ಲಿ ಗ್ರಾಹಕ ಜಾಗೃತಿ ಕಾರ್ಯಾಗಾರ.
ಕೊಪ್ಪಳ, ನ.೧೬ (ಕ ವಾ) ಕೊಪ್ಪಳ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಗ್ರಾಹಕ ಜಾಗೃತಿ ಕಾರ್ಯಾಗಾರವನ್ನು ನ.೧೭ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
     ಪ್ರಭಾರಿ ಜಿಲ್ಲಾಧಿಕಾರಿ ಡಾ||ಪ್ರವೀಣಕುಮಾರ ಜಿ.ಎಲ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯರುಗಳಾದ ರವಿರಾಜ್ ಕುಲಕರ್ಣಿ, ಸುಜಾತಾ ಅಕ್ಕಸಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಬಳಿಕ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ನ್ಯಾಯವಾದಿ ಎಂ.ಹನುಮಂತರಾವ್ ಅವರು ಗ್ರಾಹಕರ ಜಾಗೃತಿ ಆಂದೋಲನದಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ೧೯೮೬ ರ ಒಂದು ಮೈಲುಗಲ್ಲು ವಿಷಯ ಕುರಿತು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ ಅವರು ಗ್ರಾಹಕರ ವೇದಿಕೆ ರಾಜ್ಯ ಮತ್ತು ರಾಷ್ಟ್ರೀಯ ಆಯೋಗಗಳಿಂದ ಗ್ರಾಹಕರ ಪರವಾಗಿ ಬಂದಿರುವ ಮಹತ್ವದ ತೀರ್ಪುಗಳ ಕುರಿತು. ನ್ಯಾಯವಾದಿ ಸಾವಿತ್ರಿ ಮುಜುಮದಾರ್ ಅವರು ಗ್ರಾಹಕರ ಜಾಗೃತಿ ಚಳುವಳಿಯಲ್ಲಿ ಮಹಿಳೆಯರ ಪಾತ್ರ ಕುರಿತು ಹಾಗೂ ಆಹಾರ, ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಉಮೇಶ ಅವರು ಆಹಾರ ಕಲಬೆರಕೆ, ತಡೆಗಟ್ಟುವ ವಿಧಾನಗಳು ಮತ್ತು ಕಲಬೆರಕೆಯಲ್ಲಿ ತೊಡಗಿರುವವರಿಗೆ ಕಾನೂನನ್ವಯ ವಿಧಿಸಬಹುದಾದ ಶಿಕ್ಷೆಗಳು ಎಂಬ ವಿಷಯಗಳು ಕುರಿತು ಉಪನ್ಯಾಸ ಹಾಗೂ ಸಂವಾದ ನಡೆಸಲಿದ್ದಾರೆ.

Please follow and like us:
error

Leave a Reply

error: Content is protected !!