fbpx

ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ : ಸಚಿವ ತಂಗಡಗಿ

ಶಿಕ್ಷಣ ಕ್ಷೇತ್ರವನ್ನು ಬಲಗೊಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ ನೀಡುವುದರ ಜೊತೆಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಮೂಲಕ ಶಾಲಾ ದಾಖಲಾತಿಯನ್ನು ಹೆಚ್ಚಿಸಲಾಗುತ್ತಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗಾಗಿ ಹಾಲು ವಿತರಿಸುವಂತಹ ಕ್ಷೀರಭಾಗ್ಯ ಯೋಜನೆ ಮೊದಲಾದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಹೇಳಿದರು.

ಕುಷ್ಟಗಿ ತಾಲೂಕಿನ ಬ್ಯಾಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕುಷ್ಟಗಿ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ  ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರದ ಉದ್ಘಾಟಿಸಿ ಅವರು ಮಾತನಾಡಿದರು.   
ಶಿಕ್ಷಕರ ವೃತ್ತಿಗೆ ಬೇರೆಲ್ಲ ವೃತ್ತಿಗಿಂತ ಅಧಿಕ ಗೌರವವಿದ್ದು, ಶಿಕ್ಷಕರು ರಾಜಕೀಯ ಸುಳಿಗೆ ಸಿಲುಕದೆ, ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು. ಶಿಕ್ಷಕರ ನಡವಳಿಕೆ, ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ, ಶಿಕ್ಷಕರು ಅತ್ಯಂತ ಎಚ್ಚರಿಕೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ. ಶಾಲೆಗಳಿಗೆ ಅಗತ್ಯವಿರುವ ಕಟ್ಟಡಗಳು, ಮೂಲಭೂತ ಸೌಕರ್ಯ ಕಲ್ಪಿಸುವ ಜೊತೆಗೆ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.  ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಿ ಹಾಕಬೇಕಾಗಿದೆ ಎಂದ ಅವರು, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿ ಜಿಲ್ಲೆಯು ೧೩ ನೇ ಸ್ಥಾನಗಳಿಸಿದ್ದು, ಈ ಬಾರಿ ಇನ್ನಷ್ಟು ಹೆಚ್ಚಿನ ಸ್ಥಾನ ಪಡೆದುಕೊಳ್ಳಲು ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದು ಅವರು, ಬ್ಯಾಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಡುವುದು ಹಾಗೂ ನಿಡಶೇಸಿ ಗ್ರಾಮದ ಕೆರೆಯನ್ನು ಹೂಳೆತ್ತುವ ಕೆಲಸ ಕೈಗೊಳ್ಳಬೇಕೆಂದು ಗ್ರಾಮಸ್ಥರ ವಿವಿಧ ಬೇಡಿಕೆಗಳಿಗೆ ಸಚಿವರು ಸ್ಪಂದಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಕಠಿಣ ಪರಿಶ್ರಮಪಡಬೇಕು. ಶಿಕ್ಷಕರ ವೃತ್ತಿಗೆ ಬೇರೆಲ್ಲ ವೃತ್ತಿಗಿಂತ ಅಧಿಕ ಗೌರವವಿದ್ದು, ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು, ಶಾಲಾ ಕೊಠಡಿಗಳಲ್ಲಿ ದೇಶದ ಭವಿಷ್ಯ ರೂಪುಗೊಳ್ಳುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಿ ಸೇವೆ ಸಲ್ಲಿಸಬೇಕು.   ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಭ್ಯ ಸಂಸ್ಕೃತಿ ಮತ್ತು ಮನೋ ಸ್ಥೈರ್ಯ ವೃದ್ಧಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ಒದಗಿಸಲಿದ್ದು, ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಿಗೆ ಶೌಚಾಲಯ ಹೊಂದಿ ಜಿಲ್ಲೆಯನ್ನು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಣ ತೊಡಬೇಕೆಂದು ಕರೆ ನೀಡಿದರು. 
ತಾ.ಪಂ.ಅಧ್ಯಕ್ಷೆ ಶರಣಮ್ಮ ಅಂಗಡಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಮ್ಮ ವಿರುಪಾಕ್ಷಗೌಡ ಹೇರೂರು, ಜಿ.ಪಂ.ಸದಸ್ಯರಾದ ಹನಮಕ್ಕ ಹನಮಂತಪ್ಪ ಚೌಡ್ಕಿ, ಅನ್ನಪೂರ್ಣಮ್ಮ ಕಂ.ವಾಲ್ಮೀಕಿ, ಲಕ್ಷ್ಮೀದೇವಿ ಬಸವರಾಜ ಹಳ್ಳೂರ, ಎಪಿಎಂಸಿ ಅಧ್ಯಕ್ಷ ಹನಮಗೌಡ ಪಾಟೀಲ್, ಕೊರಡಕೇರಾ ಗ್ರಾ.ಪಂ.ಅಧ್ಯಕ್ಷೆ ಲಲಿತಮ್ಮ ಹನುಮಗೌಡ ಪಾಟೀಲ್, ತಾ.ಪಂ.ಸದಸ್ಯರಾದ ಲಕ್ಷ್ಮೀದೇವಿ ಶರಣಪ್ಪ ಮೇಟಿ, ನಿಂಗಮ್ಮ ಜ.ಮಾಲಿ ಪಾಟೀಲ್, ಎಪಿಎಂಸಿ ಸದಸ್ಯರಾದ ಮಹಾಲಿಂಗಪ್ಪ ದೋಟಿಹಾಳ, ಬಿ.ಆರ್.ಸಿ. ಸಮನ್ವಯಾಧಿಕಾರಿ ಸುರೇಂದ್ರ ಕಾಂಬ್ಳೆ, ಬಿಇಓ ಕಛೇರಿಯ ವೆಂಕನಗೌಡ ದಾದ್ಮಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಶರಣಪ್ಪ ನಿಡಶೇಸಿ, ಸರಕಾರಿ ನೌಕರರ ಸಂಘದ ನಿರ್ದೇಶಕ ಚಂದುಸಾಬ ಪಿ. ಸೇರಿದಂತೆ ಕುಷ್ಟಗಿ ತಾಲೂಕಿನ ಶಿಕ್ಷಕ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರುಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ಶರಣು ತೆಮ್ಮಿನಾಳ ಸ್ವಾಗತಿಸಿ ಕೊನೆಯಲ್ಲಿ ನಿರೂಪಿಸಿದರು. ಕುಷ್ಟಗಿ ತಾಲೂಕ ಮಟ್ಟದ ಉತ್ತಮ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಕುಷ್ಟಗಿ ಪಟ್ಟಣದ ವಿವಿಧೆಡೆ ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. 
Please follow and like us:
error

Leave a Reply

error: Content is protected !!