ಫೆ. ೩ ರಿಂದ ಕೊಪ್ಪಳ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್‍ಯಾಲಿ- ತುಳಸಿ ಮದ್ದಿನೇನಿ

  ಭಾರತೀಯ ಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾರಿ ರ್‍ಯಾಲಿ ಬರುವ ಫೆ. ೦೩ ರಿಂದ ೧೦ ರವರೆಗೆ ಎಂಟು ದಿನಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್‍ಯಾಲಿ ಆಯೋಜಿಸುವ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ಭಾರತೀಯ ಸೇನೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್, ಸೋಲ್ಜರ್ ಸ್ಟೋರ್ ಕೀಪರ್, ನರ್ಸಿಂಗ್ ಅಸಿಸ್ಟೆಂಟ್, ಟೆಕ್ನಿಕಲ್ ಸೇರಿದಂತೆ  ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲು ಬೆಳಗಾವಿಯ ಸೇನಾ ಕಚೇರಿಯು ಕೊಪ್ಪಳ ಜಿಲ್ಲೆಯಲ್ಲಿ ಬರುವ ಫೆ. ೦೩ ರಿಂದ ಬೃಹತ್ ನೇಮಕಾತಿ ರ್‍ಯಾಲಿ ನಡೆಸಲು ಉದ್ದೇಶಿಸಿದೆ.  ಸೇನೆಯಲ್ಲಿ ಜಿಲ್ಲೆಯ ಯುವಕರು ಕೆಲಸಕ್ಕೆ ಸೇರಲು ಇದೊಂದು ಸುವರ್ಣ ಅವಕಾಶವಾಗಿದ್ದು, ರ್‍ಯಾಲಿಯಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಲಿದ್ದಾರೆ.  ಈ ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮಾಡಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಅಭ್ಯರ್ಥಿಗಳಿಗೆ ವಿಶೇಷ ತರಬೇತಿ ಹಮ್ಮಿಕೊಳ್ಳಬೇಕು.  ಭಾರತೀಯ ಸೇನೆಯ ಹುದ್ದೆಗಳಿಗೆ ಆಕರ್ಷಕ ವೇತನ ಹಾಗೂ ಇನ್ನಿತರ ಭತ್ಯೆಗಳು ದೊರಕುವುದರಿಂದ, ಜಿಲ್ಲೆಯ ಯುವಕರಿಗೆ ಕೆಲಸಕ್ಕೆ ಸೇರಲು ಇದೊಂದು ಉತ್ತಮ ಅವಕಾಶವಾಗಿದೆ.  ನೇಮಕಾತಿ ರ್‍ಯಾಲಿಯಲ್ಲಿ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಲಿರುವುದರಿಂದ, ಅಭ್ಯರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸಿಕೊಡಬೇಕು.  ಯಾವುದೇ ನೂಕು-ನುಗ್ಗಲು ಉಂಟಾಗದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು.  ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಪ್ರತಿದಿನ ಬೆಳಿಗ್ಗೆ ೫ ಗಂಟೆಗೆ ಪ್ರಾರಂಭಗೊಳ್ಳುವುದರಿಂದ ಈ ಸಂದರ್ಭದಲ್ಲಿ ತಜ್ಞ ವೈದ್ಯರು ಆಂಬುಲೆನ್ಸ್, ಸೂಕ್ತ ಔಷಧಿ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯೊಂದಿಗೆ ರ್‍ಯಾಲಿ ಪೂರ್ಣಗೊಳ್ಳುವವರೆಗೂ ಬೆಳಿಗ್ಗೆ ೫ ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು.  ಕೊಪ್ಪಳ ನಗರಸಭೆ ವತಿಯಿಂದ ಅಭ್ಯರ್ಥಿಗಳಿಗೆ ಕುಡಿಯುವ ನೀರಿಗಾಗಿ ೩ ರಿಂದ ೪ ಟ್ಯಾಂಕರ್‌ನಲ್ಲಿ ಸರಬರಾಜು ಮಾಡಬೇಕು.  ಶಾಮಿಯಾನ, ಲೈಟಿಂಗ್, ಸಿಟಿಂಗ್ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆಯವರು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದೆರು.
ಇಂಗ್ಲೀಷ್‌ನಲ್ಲಿ ಪ್ರಮಾಣಪತ್ರ:   ಸೇನಾ ಅಧಿಕಾರಿಗಳು, ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿವಿಧ ಪ್ರಮಾಣ ಪತ್ರಗಳನ್ನು ಇಂಗ್ಲೀಷ್ ಭಾಷೆಯ ನಮೂನೆಯಲ್ಲಿ ಮಾತ್ರ ಪಡೆಯುವುದರಿಂದ, ವಾಸಸ್ಥಳ ಪ್ರಮಾಣ ಪತ್ರ, ಜಾತಿ, ಆದಾಯ, ನಡತೆ ಪ್ರಮಾಣ ಪತ್ರ, ಇನ್ನಿತರ ಪ್ರಮಾಣ ಪತ್ರಗಳನ್ನು ಜಿಲ್ಲೆಯ ಅಭ್ಯರ್ಥಿಗಳ ಕೋರಿಕೆಯ ಮೇರೆಗೆ ಇಂಗ್ಲೀಷ್ ಭಾಷೆಯಲ್ಲಿಯೇ ನೀಡಲು ಕ್ರಮ ಜರುಗಿಸುವಂತೆ ಈಗಾಗಲೆ ಆಯಾ ತಹಸಿಲ್ದಾರರಿಗೆ ಸೂಚನೆ ನೀಡಲಾಗಿದೆ.  ಪ್ರಮಾಣ ಪತ್ರಗಳನ್ನು ವಿತರಿಸಲು ಆಯಾ ತಹಸಿಲ್ದಾರರು ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ ಎಂದರು.
ಶಿಸ್ತುಬದ್ಧ ರ್‍ಯಾಲಿಗೆ ಸೂಚನೆ : ಭಾರತೀಯ ಸೇನೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್, ಸೋಲ್ಜರ್ ಸ್ಟೋರ್ ಕೀಪರ್, ನರ್ಸಿಂಗ್ ಅಸಿಸ್ಟೆಂಟ್, ಟೆಕ್ನಿಕಲ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಬೃಹತ್ ರ್‍ಯಾಲಿ ನಡೆಯಲಿದ್ದು, ವಿವಿಧ ಜಿಲ್ಲೆಗಳಿಂದ ಸಾವಿರಾರು ಅಭ್ಯರ್ಥಿಗಳು ಉದ್ಯೋಗದ ನಿರೀಕ್ಷೆಯಲ್ಲಿ ಆಗಮಿಸಲಿದ್ದು, ಇದರಲ್ಲಿ ಎಸ್‌ಎಸ್‌ಎಲ್‌ಸಿ, ಪಿ.ಯು.ಸಿ., ಪದವಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ.  ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಯಾವುದೇ ಅಹಿತಕರ ಘಟನೆ ಜರುಗದಂತೆ ಶಿಸ್ತುಬದ್ಧವಾಗಿ ಪಾಲ್ಗೊಳ್ಳಲು ಸಕಲ ವ್ಯವಸ್ಥೆ ಕೈಗೊಳ್ಳಬೇಕು, ಅಭ್ಯರ್ಥಿಗಳಿಗೆ ಕಡಿಮೆ ದರದಲ್ಲಿ ಊಟ, ಹಣ್ಣು, ಹಂಪಲು ದೊರೆಯುವಂತಾಗಬೇಕು.  ಸೇನಾ ಅಧಿಕಾರಿಗಳಿಗೆ ಸೂಕ್ತ ವಸತಿ ವ್ಯವಸ್ಥೆ, ರ್‍ಯಾಲಿ ಸಂದರ್ಭದಲ್ಲಿ ಅಗತ್ಯ ಕಂಪ್ಯೂಟರ್ ಇನ್ನಿತರೆ ಸಾಮಗ್ರಿಗಳ ಪೂರೈಕೆ ಸಮರ್ಪಕವಾಗಿ ಆಗಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಬೆಳಗಾವಿ ಸೇನಾ ಕಚೇರಿಯ ಕರ್ನಲ್ ವಿಧಾನ್ ಶರಣ್, ಮೇಜರ್ ಜಿತೇಂದರ್ ಸಿಂಗ್, ಸುಬೇದಾರ್ ಮೇಜರ್ ಬಲ್ವಿಂದರ್ ಸಿಂಗ್, ಸುಬೇದಾರ್ ಕೆ. ನಾಗರಾಜ್, ಬಾಗಲಕೋಟೆಯ ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎಮ್. ತುಕ್ಕರ್, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಹಾಯಕ ಆಯುಕ್ತ ಶರಣಬಸಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್, ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್, ತಹಸಿಲ್ದಾರ್ ಬಿ.ಎಲ್. ಘೋಟೆ, ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಮುಂತಾದವರು ಭಾಗವಹಿಸಿದ್ದರು.
Please follow and like us:
error