ಮನುಷ್ಯನನ್ನು ದೈವತ್ವಕ್ಕೆ ಕೊಂಡೊಯ್ಯುವ ಶಕ್ತಿ ಸಂಗೀತಕ್ಕಿದೆ -ಡಾ. ಮುದ್ದುಮೋಹನ

ಕೊಪ್ಪಳ, ಮಾ. ೧೧ : ಮನುಷ್ಯನನ್ನು ದೈವತ್ವಕ್ಕೆ ಕೊಂಡೊಯ್ಯುವ ಶಕ್ತ ಸಂಗೀತಕ್ಕಿದೆ ಎಂದು ಕೆಪಿಟಿಸಿಎಲ್ ನಿರ್ದೇಶಕ ಹಾಗೂ ಖ್ಯಾತ ಗಾಯಕ ಡಾ. ಮುದ್ದುಮೋಹನ ಅವರು ಹೇಳಿದರು.
ಅವರು ಮಾ. ೯ ರಂದು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಶಾರದಾ ಸಂಗೀತ ಕಲೆ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೬ನೇ ಅಹೋರಾತ್ರಿ ಸಂಗೀತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಈ ಭಾಗದ ಮಕ್ಕಳಿಗೆ ನಮ್ಮ ಪರಂಪರೆಯನ್ನು ಭಾರತೀಯ ಸಂಗೀತದ ಜ್ಞಾನವನ್ನು ನೀಡುವ ಉದ್ಧೇಶದಿಂದ ಲಚ್ಚಣ್ಣ ಹಳೆಪೇಟಿ ಅವರು ಅವಿರತ ಶ್ರಮಿಸುತ್ತುರುವುದು ಶ್ಲ್ಯಾಘನೀಯ. ಇಂದಿನ ದಿನಗಳಲ್ಲಿ ನೂರಾರು ಟಿವಿ ಚಾನಲ್‌ಗಳು ಅಶ್ಲೀಲ ಕಸದ ರಾಶಿಯನ್ನು ನಮ್ಮ ಮನೆಯಲ್ಲಿ ತಂದು ಹಾಕುವ ಮೂಲಕ ನಮ್ಮ ಸಂಸ್ಕೃತಿ ನಾಶ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಅವರು ನಮ್ಮ ಮಕ್ಕಳನ್ನು ಆ ಪಿಡುಗಿನಿಂದ ರಕ್ಷಿಸಿಕೊಳ್ಳಲು ಪೊಲಿಯೋ ಹನಿ ಹಾಕಿಸುವಹಾಗೆ ಸಂಗೀತ ಹಾಗೂ ಸಂಸ್ಕೃತಿಯ ಡೋಸ್  ಅವಶ್ಯವಾಗಿ ಹಾಕಿಸಬೇಕಿದೆ. ಸಂಸ್ಕೃತಿ ಎನ್ನುವುದು ನಮ್ಮ ಮಕ್ಕಳಿಗೆ ವಜ್ರಕವಚ. ಅದು ಮನೋವಿಕಾರ ದೂರಮಾಡುತ್ತದೆ ಎಂದರು.
ಕಲಾ ಪೋಷಕ ಹಾಗೂ ತಾ.ಪಂ. ಮಾಜಿ ಸದಸ್ಯ ಬಿ. ವಿರುಪಾಕ್ಷಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕಲೆಯ ತವರೂರಾಗಿರುವ ಕಿನ್ನಾಳ ರಾಷ್ಟ್ರಮಟ್ಟದಲ್ಲಿ ಕಿನ್ನಾಳ ಸುಪ್ರಸಿದ್ಧ ಬೊಂಬೆ ಪ್ರದರ್ಶನವನ್ನು ಇದೇ ಜನವರಿ ೨೬ ರಂದು ದೇಶದ ರಾಜಧಾನಿ ದಿಲ್ಲಿಯಲ್ಲಿ ಮಾಡುವ ಮೂಲಕ ಪ್ರಸಿದ್ಧಿಯನ್ನು ಪಡೆದಿದೆ ಎಂದ ಅವರು ಇಂಥ ಗ್ರಾಮದಲ್ಲಿ ಸಂಗೀತದ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಲಚ್ಚಣ್ಣ ಅವರದು ಅದ್ಭುತವಾದ ಸೇವೆಯಾಗಿದೆ. ಇಂಥ ಕಾರ್ಯಕ್ಕೆ ಎಲ್ಲರೂ ಸಹಾಯ ಹಸ್ತ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಂಗಾವತಿಯ  ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ೬೪ ವಿದ್ಯೆಗಳಲ್ಲಿ ಸಂಗೀತಕ್ಕೆ ಪ್ರಥಮ ಸ್ಥಾನವನ್ನು ನಮ್ಮ ಪರಂಪರೆ ಕೊಟ್ಟಿದೆ. ಸಂಗೀತದಿಂದ ಹೂವು ಅರಳುತ್ತದೆ, ಹಾವು ನರ್ತಿಸುತ್ತದೆ, ಜ್ಯೋತಿ ಹೊತ್ತಿಕೊಳ್ಳುತ್ತದೆ, ಮಳೆ ಬರುತ್ತದೆ ಎಂದರೆ ಸಂಗೀತಕ್ಕೆ ಎಂಥ ಶಕ್ತಿಯಿದೆ ಎಂಬುದು ತಿಳಿಯುತ್ತದೆ. ಮನುಷ್ಯನ ಮನಃಪರಿವರ್ತನೆ ಮಾಡಿ ಮಾನಸಿಕ ಸ್ವಾಸ್ಥ್ಯವನ್ನು ನೀಡುತ್ತದಲ್ಲದೇ ಬಾಂಧವ್ಯವನ್ನು ಬೆಸೆಯುವ ಶಕ್ತಿ ಸಂಗೀತಕ್ಕಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಪತ್ರಕರ್ತ ವೈ. ಬಿ. ಜೂಡಿ ಮಾತನಾಡಿ, ಸದ್ದಿಲ್ಲದೇ ಸಂಗೀತ ಸೇವೆಯನ್ನು ಮಾಡುತ್ತಿರುವ ಲಚ್ಚಣ್ಣನವರು ಪ್ರತಿ ವರ್ಷ ಇಂಥ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ ಭಾಗದಲ್ಲಿ ಸಂಗೀತದ ಪರಂಪರೆಯನ್ನು ಜೀವಂತವಾಗಿಡುವಲ್ಲಿ ಶ್ರಮಿಸುತ್ತಿದ್ದಾರೆ. ಇಂಥವರ ನೆರವಿಗೆ ಸರಕಾರ ಹಾಗೂ ಸ್ಥಳೀಯರು ಮುಂದೆ ಬರಬೇಕು ಎಂದರು.
ಸಮಾರಂಭದ ಸಾನಿಧ್ಯವನ್ನು ಷಡಕ್ಷರಯ್ಯಸ್ವಾಮಿ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ವೀರಭದ್ರಪ್ಪ ಗಂಜಿ, ಡಾ|| ಮಹಾಂತೇಶ ಸಜ್ಜನ, ಪರಶುರಾಮ ಕಲಾಲ್, ಶಿವಲಿಂಗಪ್ಪ ಗುದುಮುರಗಿ, ಶ್ರೀಶೈಲಪ್ಪ ಅಂಗಡಿ, ಗಂಗಾಧರ ಅರಳಿಕಟ್ಟಿ, ಭರಮಪ್ಪ ಜುಟ್ಲದ್, ಈರಣ್ಣ ಕುಪ್ಪಾ, ಪುಟ್ಟಣ್ಣ ಬೆಲ್ಮಕೊಂಡಿ, ಶರಣಪ್ಪ ಮಳಗಿ, ವೀರಣ್ಣ ಅಂಗಡಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.
ಸಂಸ್ಥೆಯ ಮುಖ್ಯಸ್ಥ ಲಚ್ಚಣ್ಣ ಹಳೆಪೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸಪ್ಪ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು. ಸಂಗೀತ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ನಂತರ ವಿವಿಧ ಸಂಗೀತಗಾರರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರುಗಿತು. 
Please follow and like us:
error