ಕುವೆಂವು ವಿಶ್ವಸಾಹಿತ್ಯವನ್ನು ರಾಮಾಯಣ ದರ್ಶನಂನಲ್ಲಿ ನೀಡಿದ್ದಾರೆ- ಎ.ಎಂ.ಮದರಿ


ಭಾಗ್ಯನಗರ : ಕುವೆಂಪುರವರ ಕಾಲಘಟ್ಟವನ್ನು ಕುವೆಂಪು ಯುಗವೆಂದೇ ಕರೆಯಬಹುದು. ಅಷ್ಟರಮಟ್ಟಿಗೆ ಅವರು ಸಾಹಿತ್ಯಲೋಕವನ್ನು ಆವರಿಸಿಕೊಂಡಿದ್ದರು. ವಿಶ್ವಸಾಹಿತ್ಯವನ್ನು ಜೀರ್ಣಿಸಿಕೊಂಡಿದ್ದ ಅವರು ಅದೆಲ್ಲವನ್ನು ತಮ್ಮದೇ ಶೈಲಿಯಲ್ಲಿ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ನೀಡಿದ್ದಾರೆ ಎಂದು ಹಿರಿಯ ವಿಮರ್ಶಕ ಎ.ಎಂ.ಮದರಿ ಹೇಳಿದರು ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾಗ್ಯನಗರದ ಸದಾನಂದಾಶ್ರಮದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ರಾಮಾಯಣ ದರ್ಶನಂ ಕಾವ್ಯವಾಚನ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಗಮಕ ಕಾವ್ಯ ವಾಚನಕ್ಕೆ ಪೀಠಿಕೆಯಾಗಿ ಕುವೆಂಪುರವರ ರಾಮಾಯಣ ದರ್ಶನಂ ಕಾವ್ಯದ ಸಾರಾಂಶವನ್ನು ವಿವರಿಸಿದ ಅವರು ಕುವೆಂಪು ರಾಮಾಯಣವು ಅಹಿಂಸೆಯ ನೆಲೆಯಲ್ಲಿ ಸಾಗುತ್ತದೆ. ಇದರಲ್ಲಿ ಮಹಿಳಾ ಪಾತ್ರಗಳನ್ನು ಉನ್ನತವಾಗಿ ಚಿತ್ರಿಸಲಾಗಿದೆ ಎಂದರು. ಕಾರ್‍ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಾಬು ರಾಜೇಂದ್ರ ನಡೆಸಿಕೊಟ್ಟರು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಡಾ.ಮಹಾಂತೇಶ ಮಲ್ಲನಗೌಡರ ವಹಿಸಿಕೊಂಡಿದ್ದರು. ಅತಿಥಿಗಳಾಗಿ ವೀರಣ್ಣ ಹುರಕಡ್ಲಿ, ಚೆನ್ನಬಸವ ಸ್ವಾಮಿಗಳು ವೀರಾಪುರ ವೇದಿಕೆಯ ಮೇಲೆ ಇದ್ದರು. ಕಾವ್ಯ ವಾಚನಕ್ಕೂ ಮೊದಲು ಕುವೆಂಪು ರಾಮಾಯಣ ದರ್ಶನಂನ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟ ಗಮಕಿ ವಿಠ್ಠಪ್ಪ ಗೋರಂಟ್ಲಿಯವರು ರಾಮಾಯಣ ದರ್ಶನಂ ನ ಉರ್ಮಿಳಾ ಸಂಚಿಕೆಯನ್ನು ಪ್ರಸ್ತುತ ಪಡಿಸಿದರು. ಮೊದಲು ವಾಚಿಸಿ ನಂತರ ಅರ್ಥವಿವರಣೆ ನೀಡಿದ ರೀತಿ ಕೇಳುಗರನ್ನು ಸೆಳೆಯಿತು. ವಾಲ್ಮಿಕಿ ರಾಮಾಯಣದಲ್ಲೂ ಇಲ್ಲದ ಉರ್ಮಿಳೆಯ ಬಗೆಗಿನ ಚಿತ್ರಣ ಕುವೆಂಪು ರಾಮಾಯಣ ದರ್ಶನಂ ನಲ್ಲಿ ಇರುವುದನ್ನು ವಿವರಣಾಪೂರ್ವಕವಾಗಿ ಹೇಳಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಡಾ. ಮಹಾಂತೇಶ ಮಲ್ಲನಗೌಡರು ಗಮಕಿ ವಿಠ್ಠಪ್ಪ ಗೋರಂಟ್ಲಿಯವರು ಪ್ರಸ್ತುತ ಪಡಿಸಿದ ಉರ್ಮಿಳಾ ಸಂಚಿಕೆಯು ಕೇಳುವದಕ್ಕೆ ಇಷ್ಟು ಸುಂದರವಾಗಿರುವಾಗ ಓದುವದು ಬಹಳ ಆನಂದ ನೀಡುವಂಥದ್ದು ಎಂದರು. ಇಂದಿನ ದಿನಮಾನಗಳಲ್ಲಿ ಮಹಾಕಾವ್ಯಗಳನ್ನು ಓದುವರು ಬಹಳ ಕಡಿಮೆಯಾಗಿದೆ. ಇದರ ಬಗ್ಗೆ ಯುವಕರು,ಸಾಹಿತ್ಯಾಸಕ್ತರ ಗಮನ ಹರಿಸಬೇಕು. ಇಂತಹ ಕಾವ್ಯ ವಾಚನ ಕಾರ್‍ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದರು. ಕಾರ್‍ಯಕ್ರಮದಲ್ಲಿ ಸದಾನಂದಾಶ್ರಮದ ಸದ್ಭಕ್ತರು, ಸಿರಾಜ್ ಬಿಸರಳ್ಳಿ, ಶಿವಾನಂದ ಹೊದ್ಲೂರ, ವೀರಣ್ಣ ವಾಲಿ, ಶ್ರೀನಿವಾಸ ಗೋರಂಟ್ಲಿ, ಪಂಪಣ್ಣ ಬೆಟಗೇರಿ ಸೇರಿದಂತೆ ಹಲವಾರು ಆಸಕ್ತರು ಭಾಗವಹಿಸಿದ್ದರು.

Please follow and like us:
error

Related posts

Leave a Comment