ಫಲಪುಷ್ಪ ಪ್ರದರ್ಶನ- ಗವಿಸಿದ್ದೇಶ್ವರ ರಥ ಪ್ರಮುಖ ಆಕರ್ಷಣೆ.

ಕೊಪ್ಪಳ ಜ. ೨೬ (ಕ ವಾ) ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ತೋಟಗಾರಿಕೆ ಇಲಾಖೆಯು ಗವಿಮಠ ಜಾತ್ರಾ ಆವರಣದಲ್ಲಿ ಆಯೋಜಿಸಿರುವ ವಿಶೇಷ ಫಲ-ಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಹೂ, ಚೆಂಡು ಹೂ ಸೇರಿದಂತೆ ಆಕರ್ಷಕ ವರ್ಣಮಯ ಹೂಗಳನ್ನು ಬಳಸಿ ನಿರ್ಮಿಸಲಾಗಿರುವ ಗವಿಸಿದ್ದೇಶ್ವರ ರಥದ ಮಾದರಿ ಪ್ರಮುಖ ಆಕರ್ಷಣೆಯಾಗಿದೆ.
     ತೋಟಗಾರಿಕೆ ಇಲಾಖೆಯು ಪ್ರತಿ ವರ್ಷ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಫಲ-ಪುಷ್ಪ ಪ್ರದರ್ಶನವನ್ನು ಗವಿಮಠದ ಜಾತ್ರಾ ಆವರಣದಲ್ಲಿ ಆಯೋಜಿಸುತ್ತಿದೆ.  ಈ ವರ್ಷ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.  ಫಲ-ಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಮತ್ತು ಚೆಂಡು ಹೂ ಸೇರಿದಂತೆ ವಿವಿಧ ಹೂಗಳಿಂದ ನಿರ್ಮಿಸಿರುವ ಗವಿಸಿದ್ದೇಶ್ವರ ರಥೋತ್ಸವ ಎಲ್ಲರನ್ನು ಆಕರ್ಷಿಸುತ್ತಿದೆ.  ಅದರ ಜೊತೆಗೆ ವಿಶಿಷ್ಟ ಹೂಗಳಿಂದ ನಿರ್ಮಿಸಿರುವ ಗವಿಮಠದ ಸ್ವಾಗತ ಕಮಾನಿನ ಮಾದರಿಯಂತೂ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.  ವಿವಿಧ ಪುಷ್ಪಗಳಿಂದ ಗವಿಮಠದ ಸ್ವಾಗತ ಕಮಾನು ಹಾಗೂ ಗವಿಸಿದ್ದೇಶ್ವರ ರಥ ನಿರ್ಮಿಸಲು ಸುಮಾರು ೨೦ ಸಾವಿರ ಕೆಂಪು ಗುಲಾಬಿ ಹೂಗಳನ್ನು ಬಳಸಲಾಗಿದ್ದು, ಅದರ ಜೊತೆಗೆ ಸುಮಾರು ೩ ಕ್ವಿಂಟಾಲ್‌ನಷ್ಟು ಚೆಂಡು ಹೂಗಳನ್ನು ಬಳಸಿಕೊಳ್ಳಲಾಗಿದೆ. 
     ಫಲ-ಪುಷ್ಪ ಪ್ರದರ್ಶನದಲ್ಲಿ  ವಿವಿಧ ಬಗೆಯ ಆಕರ್ಷಕ ಹೂವುಗಳನ್ನು ಬಳಸಿಕೊಳ್ಳಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಲಿಲಿಯಂಸ್, ಜರ್ಬೆರಾ, ಕಾರ್ನೆಷಿಯನ್, ಗ್ಲಾಡಿಯೋಲಸ್, ಆಂಥೋರಿಯಂಸ್, ಸಿತಾಳೆ ಹೂ ಮುಂತಾದ ವಿವಿಧ ಬಣ್ಣ ಬಣ್ಣದ ಹೂಗಳನ್ನು ಬಳಸಿ ಅಲಂಕರಿಸಲಾಗಿದೆ.
     ಶಿವಮೊಗ್ಗ ಜಿಲ್ಲೆಯ ಹರೀಶ್ ಅವರು ತರಕಾರಿ ಕೆತ್ತನೆ ಹಾಗೂ ವಿವಿಧ ಗಣ್ಯರು, ಮಹನೀಯರ ಭಾವಚಿತ್ರವನ್ನು ಕಲ್ಲಂಗಡಿ ಹಣ್ಣಿನಲ್ಲಿ ಅನಾವರಣಗೊಳಿಸಿದ್ದು, ಸ್ವಾಮಿ ವಿವೇಕಾನಂದರು, ಸುಭಾಶ್‌ಚಂದ್ರ ಭೋಸ್, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ್ದಾರೆ. ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ, ಕೊಪ್ಪಳದ ಕೋಟೆ, ಅಶೋಕ ಸ್ತಂಭ ಹಾಗೂ ಗವಿಸಿದ್ದೇಶ್ವರ ರಥದ ಮಾದರಿ ಹಾಗೂ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರ ಭಾವಚಿತ್ರವನ್ನು ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಲಾಗಿದೆ.
     ಫಲ-ಪುಷ್ಪ ಪ್ರದರ್ಶನದಲ್ಲಿ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವ ತೂಗು ಉದ್ಯಾನ, ವರ್ಟಿಕಲ್ ಗಾರ್ಡನ್ ಪದ್ಧತಿಯನ್ನು ಆಕರ್ಷಕ ರೀತಿಯಲ್ಲಿ ಪರಿಚಯಿಸಲಾಗಿದೆ.  
     ಈ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಸುಮಾರು ೦೨ ಸಾವಿರ ಅಲಂಕಾರಿಕ ಸಸ್ಯಗಳು ಹಾಗೂ ೦೩ ಸಾವಿರ ಹೂವಿನ ಕುಂಡಗಳನ್ನು ಬಳಸಲಾಗಿದ್ದು, ಪುಷ್ಪದಿಂದ ರಚಿಸಿದ ವಿವಿಧ ವಿನ್ಯಾಸದ ರಂಗೋಲಿಗಳು.  ಅಲಂಕಾರಿಕ ಸಸ್ಯ ಕುಂಡಗಳ ಜೋಡಣೆ. ಮನಸೂರೆಗೊಳ್ಳುವ ಪುಷ್ಪಾಲಂಕೃತವಾದ ವಿವಿಧ ಕೃತಕ ಮಾದರಿಗಳು.  ಜಿಲ್ಲೆಯ ನಾನಾ ಭಾಗದ ರೈತರು ಬೆಳೆದ ಮಾದರಿ ಹಣ್ಣು ಮತ್ತು ತರಕಾರಿ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳ ಪ್ರದರ್ಶನ.  ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಮಾಹಿತಿ.  ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ  ವಿವಿಧ ಯೋಜನೆಗಳ ಬಗ್ಗೆ ಫ್ಲೆಕ್ಸ್‌ಗಳ ಮೂಲಕ ಮಾಹಿತಿ ನೀಡಲಾಗುವುದು.  ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ದುರ್ಗಾ ಪ್ರಸಾದ್, ಹನುಮೇಶ್ ನಾಯಕ್ ಹಾಗೂ ತರಬೇತಿಕೇಂದ್ರದ ವಿದ್ಯಾರ್ಥಿಗಳು  ಫಲ-ಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿ ರಚಿಸುವಲ್ಲಿ ಶ್ರಮ ವಹಿಸಿದ್ದಾರೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರು.

Please follow and like us:
error